ಒಂದೇ ದಿನ ಎರಡು ಸ್ಪೈಸ್‌ಜೆಟ್ ವಿಮಾನ ಅವಘಡ ದೆಹಲಿ ದುಬೈ ವಿಮಾನ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ ಗಜುರಾತ್ ಮುಂಬೈ ವಿಮಾನ ಹಾರಟದಲ್ಲೇ ಗಾಜು ಪುಡಿ ಪುಡಿ

ಮುಂಬೈ(ಜು.05): ಸ್ಪೈಸ್‌ಜೆಟ್ ವಿಮಾನ ಇಂದು ಎರಡೆರಡು ಆತಂಕ ಎದುರಿಸಿದೆ. ದೆಹಲಿ-ದುಬೈ ವಿಮಾನದಲ್ಲಿ ಇಂಧನ ಲೀಕ್ ಸಮಸ್ಯೆಯಿಂದ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಬೆನ್ನಲ್ಲೇ ಇದೀಗ ಗುಜರಾತ್ -ಮುಂಬೈ ನಡುವಿನ ವಿಮಾನ ಕೂಡ ಹಾರಾಟದ ಮಧ್ಯ ಆತಂಕ ಎದುರಿಸಿ ತುರ್ತು ಭೂಸ್ಪರ್ಶ ಮಾಡಿದೆ.

ಸ್ಪೈಸ್‌ಜೆಟ್ Q400 ವಿಮಾನ ಹಾರಾಟದ ನಡುವೆ ಮುಂಭಾಗದ ಗಾಜು ಪುಡಿ ಪುಡಿಯಾಗಿದೆ. ಇದನ್ನು ಗಮನಿಸಿದ ಪೈಲೆಟ್ ತಕ್ಷಣ ವಿಮಾನವನ್ನು ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಪ್ರಯಾಣಿಕರು, ಪೈಲೆಟ್ ಹಾಗೂ ಸಿಬ್ಬಂದಿ ಎಲ್ಲರೂ ಸುರಕ್ಷಿತವಾಗಿದ್ದಾರೆ. ಇದು ಕಳೆದ 17 ದಿನಗಳಲ್ಲೇ ಸ್ಪೈಸ್‌ ಜೆಟ್‌ ವಿಮಾನಗಳಲ್ಲಿ ದೋಷ ಕಂಡುಬಂದ 7 ನೇ ಘಟನೆಯಾಗಿದೆ.

ಪಾಕಿಸ್ತಾನದಲ್ಲಿ ಲ್ಯಾಂಡ್‌ ಆದ ಸ್ಪೈಸ್‌ಜೆಟ್‌ ವಿಮಾನ, ಇಂಧನ ಸೋರಿಕೆ ಶಂಕೆ!

ಜುಲೈ 5 ರಂದು ಸ್ಪೈಸ್ ಜೆಟ್ ಎರಡು ಆತಂಕ ಎದುರಿಸಿದೆ. ಸ್ಪೈಸ್‌ ಜೆಟ್‌ ದಿಲ್ಲಿ-ದುಬೈ ವಿಮಾನದ ಇಂಧನ ಇಂಡಿಕೇಟರ್‌ನಲ್ಲಿ ದೋಷ ಕಂಡುಬಂದ ಕಾರಣ, ವಿಮಾನವನ್ನು ಪಾಕಿಸ್ತಾನದ ಕರಾಚಿಯಲ್ಲೇ ಭೂಸ್ಪರ್ಶ ಮಾಡಲಾಗಿತ್ತು. 

‘ಬೋಯಿಂಗ್‌ 737 ವಿಮಾನದ ಎಡಭಾಗದ ಟ್ಯಾಂಕಿನಿಂದ ಇಂಧನ ಸೋರಿಕೆಯಾಗಿರುವ ಶಂಕೆ ಇಂಧನ ಇಂಡಿಕೇಟರ್‌ ಮೂಲಕ ವ್ಯಕ್ತವಾಗಿದೆ. ವಿಮಾನ ಸಿಬ್ಬಂದಿ ಇದ್ದಕ್ಕಿದ್ದಂತೆ ಇಂಧನದ ಪ್ರಮಾಣದಲ್ಲಿ ಇಳಿಕೆಯಾಗುವುದನ್ನು ಗಮನಿಸಿದ್ದಾರೆ. ಕಾಕ್‌ಪಿಟ್‌ನ ಇಂಡಿಕೇಟರ್‌ನಲ್ಲಿ ಇಂಧನ ಇಳಿಕೆಯಾಗಿದ್ದು ಕಂಡುಬಂದಂತೆ, ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ಕರಾಚಿಯಲ್ಲಿ ಭೂಸ್ಪರ್ಶ ಮಾಡಲಾಯಿತು. ಇದಕ್ಕೆ ಪಾಕಿಸ್ತಾನ ಅನುಮತಿಯನ್ನೂ ನೀಡಿತ್ತು. ಆದರೆ ಇದು ತುರ್ತು ಭೂಸ್ಪರ್ಶವಲ್ಲ’ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಹೇಳಿದೆ.

ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ: ತುರ್ತು ಭೂಸ್ಪರ್ಶ

ಈ ಘಟನೆಯ ಕುರಿತು ಡಿಜಿಸಿಎ ಹೆಚ್ಚಿನ ತನಿಖೆ ನಡೆಸುತ್ತಿದೆ.
ಈ ವಿಮಾನದಲ್ಲಿ ಸುಮಾರು 100 ಪ್ರಯಾಣಿಕರು ಇದ್ದರು. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಸ್ಪೈಸ್‌ ಜೆಟ್‌ ಹೇಳಿಕೆ ನೀಡಿದೆ.

ಪಟನಾ-ದಿಲ್ಲಿ ಸ್ಪೈಸ್‌ಜೆಟ್‌ ವಿಮಾನಕ್ಕೆ ಬೆಂಕಿ
ಪಟನಾದಿಂದ ದೆಹಲಿಗೆ ಹೊರಟ ಸ್ಪೈಸ್‌ ಜೆಟ್‌ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದ್ದ ಕಾರಣ ಬೆಂಕಿ ತಗುಲಿದ ಘಟನೆ ಭಾನುವಾರ ವರದಿಯಾಗಿದೆ. ಕೂಡಲೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದ ಕಾರಣ ಎಲ್ಲ 185 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಪಟನಾದ ಜಯಪ್ರಕಾಶ ನಾರಾಯಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್‌ ಮಾಡುವಾಗ ವಿಮಾನದ ಎಂಜಿನ್‌ಗೆ ಹಕ್ಕಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಮೂರು ಫ್ಯಾನ್‌ ಬ್ಲೇಡ್‌ಗಳಿಗೆ ಹಾನಿಯಾಗಿದ್ದು, ಈ ಕಾರಣದಿಂದಾಗಿ ಬೆಂಕಿ ತಗುಲಿರಬಹುದು ಎಂದು ವಿಮಾನ ಸಿಬ್ಬಂದಿಗಳು ಹೇಳಿದ್ದಾರೆ. ವಿಮಾನಕ್ಕೆ ಬೆಂಕಿ ತಗುಲಿದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ.

‘ವಿಮಾನ ಟೇಕಾಫ್‌ ಮಾಡಿದ 10 ನಿಮಿಷಗಳಲ್ಲೇ ಈ ಘಟನೆ ಸಂಭವಿಸಿದ ಕಾರಣ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ. ಎಲ್ಲ 185 ಪ್ರಯಾಣಿಕರು ಸುರಕ್ಷಿತವಾಗಿದ್ದು, ಅವರ ಪ್ರಯಾಣಕ್ಕಾಗಿ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪೈಸ್‌ಜೆಟ್‌ ವಿಮಾನದಲ್ಲಿ ತೀವ್ರ ಟಬ್ರ್ಯುಲೆನ್ಸ್‌: 15 ಮಂದಿಗೆ ಗಾಯ!
ಮುಂಬೈನಿಂದ ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ತೆರಳುತ್ತಿದ್ದ ಸ್ಪೈಸ್‌ಜೆಟ್‌ ವಿಮಾನದಲ್ಲಿ ತೀವ್ರ ಟಬ್ರ್ಯುಲೆನ್ಸ್‌ ಉಂಟಾಗಿ 15 ಮಂದಿ ಗಾಯಗೊಂಡಿರುವ ಆತಂಕಕಾರಿ ಘಟನೆ ಭಾನುವಾರ ಸಂಜೆ ನಡೆದಿದೆ. ಘಟನೆಯ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಸ್ತೃತ ತನಿಖೆಗೆ ಆದೇಶಿಸಿದೆ. ಗಾಯಗೊಂಡವರಲ್ಲಿ ಕೆಲವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನು ಕೆಲವರು ಬೆನ್ನುಮೂಳೆ ಮತ್ತು ತಲೆಗೆ ಉಂಟಾದ ಹಾನಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಇಬ್ಬರನ್ನು ಐಸಿಯುಗೆ ದಾಖಲಿಸಲಾಗಿದೆ.