ನವದೆಹಲಿ(ಫೆ.05): ಗಣ್ಯ ವ್ಯಕ್ತಿಗಳ ಜೀರೋ ಟ್ರಾಫಿಕ್’ನಿಂದ ಕಿರಿಕಿರಿ ಅನುಭವಿಸುವುದು ಭಾರತೀಯರಿಗೇನೂ ಹೊಸದಲ್ಲ. ಆ ಕಡೆಯಿಂದ ಗಣ್ಯ ವ್ಯಕ್ತಿಗಳ ಪಟಾಲಮು ಬರುತ್ತಿದೆ ಎಂದರೆ, ಈ ಕಡೆಯಿಂದ ಇಡೀ ರಸ್ತೆಯನ್ನೇ ಬ್ಲಾಕ್ ಮಾಡಿ ಟ್ರಾಫಿಕ್ ಪೊಲೀಸರು ಸೆಲ್ಯೂಟ್ ಹೊಡೆಯುತ್ತಾ ನಿಂತು ಬಿಡುತ್ತಾರೆ.

ಗಣ್ಯ ವ್ಯಕ್ತಿಗಳು ದಾಟುವವರೆಗೂ ಅಪಾರ ಜನಸ್ತೋಮ ಮನೆ ಮುಟ್ಟಂಗಿಲ್ಲ ಎಂಬಂತಹ ಪರಿಸ್ಥಿತಿ. ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳಿಗೆ ಇಷ್ಟೇಕೆ ಭದ್ರತೆ ಎಂಬ ಮೂಲ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಇದು ಕೇವಲ ಗಣ್ಯ ವ್ಯಕ್ತಿಗಳ ಮಾತಾದರೆ, ಪ್ರಧಾನಿ ಎಂದ ಮೇಲೆ ಕೇಳಬೇಕೆ? ಪ್ರಧಾನಿ ಕಾರು ಆಗಮಿಸುವ ಮೊದಲೇ ಸಾಲು ಸಾಲು ಭದ್ರತಾ ವಾಹನಗಳು ಒಂದಾದ ಮೇಲೊಂದರಂತೆ  ಹದು ಹೋಗುತ್ತಿದ್ದರೆ ಅನತಿ ದೂರದಲ್ಲಿ ನಿಂತು ನೋಡುವುದಷ್ಟೇ ನಮ್ಮ ಕೆಲಸ.

ಆದರೆ ರಾಷ್ಟ್ರ ರಾಜಧಾನಿ ನವದೆಹಲಿಯ ಜನತೆಗೆ ಇನ್ಮುಂದೆ ಆ ತಾಪತ್ರಯ ಇರುವುದಿಲ್ಲ. ಪ್ರಧಾನಿ ಮೋದಿ ಇನ್ಮುಂದೆ ದೆಹಲಿಯ ರಸ್ತೆಗಳಲ್ಲಿ ಓಡಾಡುವುದಿಲ್ಲ. ಕಾರಣ ಪ್ರಧಾನಿಗಾಗಿಯೇ ವಿಶೇಷ ಸುರಂಗ ಮಾರ್ಗವೊಂದು ಸಿದ್ಧವಾಗುತ್ತಿದೆ.  

ಹೌದು, ಪ್ರಧಾನಿ ಮೋದಿ ತಮ್ಮ ಅಧಿಕೃತ ನಿವಾಸದಿಂದ ಪ್ರಧಾನಿ ಕಚೇರಿಗೆ ಹಾಗೂ ಸಂಸತ್ತಿಗೆ ಆಗಮಿಸಲು ವಿಶೇಷ ಸುರಂಗ ಮಾರ್ಗವೊಂದು ಶೀಘ್ರದಲ್ಲೇ ನಿರ್ಮಾಣಗೊಳ್ಳಲಿದೆ. ಈ ಸುರಂಗ ಮಾರ್ಗದ ನಿರ್ಮಾಣದಿಂದ ಜನರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ ಎನ್ನಲಾಗಿದೆ.

ಪ್ರಧಾನಿ ಮೋದಿ ಭದ್ರತೆಗೆ 600 ಕೋಟಿ ರೂ. ಮೀಸಲಿಟ್ಟ ಬಜೆಟ್!

ಈ ಕುರಿತು ಯೋಜನೆ ಸಿದ್ಧಪಡಿಸಿರುವ HCP ಡಿಸೈನ್ ಸಂಸ್ಥೆಯ ಮುಖ್ಯಸ್ಥ ಬಿಮಲ್ ಪಟೇಲ್, ಪ್ರಧಾನಿ ಮೋದಿ ಹಾಗೂ ಅವರ ಭದ್ರತಾ ತುಕಡಿಯ ಸುಗಮ ಸಂಚಾರಕ್ಕಾಗಿ ದೆಹಲಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವ ಅನಿಸಿಕೆ ಮುಂದಿಟ್ಟಿದ್ದಾರೆ.

ಬಿಮಲ್ ಪಟೇಲ್ ಯೋಜನೆಯಂತೆ, ಪ್ರಸ್ತುತ 7 ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ಅಧಿಕೃತ ನಿವಾಸವನ್ನು ಸಂಸತ್ತಿನ ಸೌತ್ ಬ್ಲಾಕ್’ಗೆ ವರ್ಗಾಯಿಸಿ, ಉಪರಾಷ್ಟ್ರತಿಗಳ ಅಧಿಕೃತ ನಿವಾಸವನ್ನು ನಾರ್ಥ್ ಬ್ಲಾಕ್’ಗೆ ವರ್ಗಾಯಿಸಲಾಗುತ್ತದೆ.

ಅಲ್ಲದೇ ಹಿರಿಯ ರಕ್ಷಣಾ ಅಧಿಕಾರಿಗಳ ಅಧಿಕೃತ ನಿವಾಸಗಳನ್ನು ವಿಶೇಷ ರಕ್ಷಣಾ ಸಮೂಹ(SPG) ಯೋಜನೆಯಡಿ ಸ್ಥಳಾಂತರಿಸಿ, ಇಡೀ ಸಂಸತ್ತನ್ನು ಆಂತರಿಕವಾಗಿ ಸಂಪರ್ಕ ಹೊಂದಿರುವ ದೊಡ್ಡ ವಿಲ್ಲಾವನ್ನಾಗಿ ಪರಿವರ್ತಿಸುವ ಯೋಜನೆ ಇದಾಗಿದೆ.

ದುಬೈ ಹಾಗೂ ಸಿಂಗಾಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿರುವಂತೆ, ಕೇಂದ್ರ ಸರ್ಕಾರಿ ನೌಕರರು ಆಂತರಿಕವಾಗಿ ಸಂಪರ್ಕ ಹೊಂದಿರುವ  ಸುರಂಗ ಮಾರ್ಗದ ಮೂಲಕ ಹೊರ ಬಂದು ತಮ್ಮ ತಮ್ಮ ಕಚೇರಿಗಳಿಗೆ ತೆರಳುವ ಬೃಹತ್ ಯೋಜನೆಯನ್ನು ಬಿಮಲ್ ಪಟೇಲ್ ಮಂಡಿಸಿದ್ದಾರೆ.

ಪ್ರಸ್ತುತ ಸಂಸತ್ತಿನಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಸರ್ಕಾರಿ ನೌಕರರು ಕರ್ತವ ನಿರತರಾಗಿದ್ದು, ಇವರನ್ನೆಲ್ಲಾ ಒಂದೇ ಬೃಹತ್ ಕಟ್ಟಡದಡಿ ತರುವುದು ಯೋಜನೆರಯ ಉದ್ದೇಶ. ಅಲ್ಲದೇ ಗಣ್ಯ ವ್ಯಕ್ತಿಗಳ ಭದ್ರತೆ ದೃಷ್ಟಿಯಿಂದ ಹಾಗೂ ಜನರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿಸುವ ಉದ್ದೇಶದಿಂದ ಸುರಂಗ ಮಾರ್ಗ ನಿರ್ಮಾಣಕ್ಕೆ ಬಿಮಲ್ ಪಟೇಲ್ ಯೋಜನೆ ಸಿದ್ಧಪಡಿಸಿದ್ದಾರೆ.