ದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ 'ಭೂತ್ನಾಥ್ ರಿಟರ್ನ್ಸ್' ಸಿನಿಮಾದ ಎಐ ಎಡಿಟೆಡ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸತ್ತವರ ಹೆಸರಿನಲ್ಲಿ ಕಳ್ಳವೋಟ್ ಹಾಕುವ ಬಗ್ಗೆ ಪ್ರಸ್ತಾಪಿಸಲಾಗಿದೆ.
ಹೊಸದೆಹಲಿ (ಅ.15): ದೇಶದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ (Smriti Irani) ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಶೇಷವೆಂದರೆ, ರಾಹುಲ್ ಗಾಂಧಿ ಅವರನ್ನು ಟೀಕಿಸಲು ಸ್ಮೃತಿ ಇರಾನಿ ಬಾಲಿವುಡ್ನ ಜನಪ್ರಿಯ 'ಭೂತ್ನಾಥ್ ರಿಟರ್ನ್ಸ್' ಸಿನಿಮಾದ ಎಐ (AI) ಎಡಿಟೆಡ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಎಐ ಎಡಿಟೆಡ್ ವಿಡಿಯೋದಲ್ಲಿ ಏನಿದೆ?
ಬಾಲಿವುಡ್ನ 'ಭೂತ್ನಾಥ್ ರಿಟರ್ನ್ಸ್' ಸಿನಿಮಾದಲ್ಲಿ ಬೋಮನ್ ಇರಾನಿ ಮತ್ತು ಅಮಿತಾಬ್ ಬಚ್ಚನ್ ನಟಿಸಿರುವ ಪ್ರಸಿದ್ಧ ದೃಶ್ಯವೊಂದನ್ನು ಎಐ (AI) ಮೂಲಕ ಎಡಿಟ್ ಮಾಡಲಾಗಿದೆ. ಮೂಲ ವಿಡಿಯೋದಲ್ಲಿದ್ದ ಬೋಮನ್ ಇರಾನಿ ಅವರ ಮುಖದ ಬದಲಿಗೆ ರಾಹುಲ್ ಗಾಂಧಿ ಅವರ ಮುಖವನ್ನು ಎಡಿಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಸತ್ತ ವ್ಯಕ್ತಿಯೊಬ್ಬರ ಹೆಸರು ಮತದಾರರ ಪಟ್ಟಿಯಲ್ಲಿ ಇನ್ನೂ ಹೇಗೆ ಉಳಿದುಕೊಂಡಿದೆ ಎಂಬ ಸಂಭಾಷಣೆ ಇದೆ.
ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರ ಮುಖವಿರುವ ಪಾತ್ರ, 'ಸಬ್ಕೋ ಪತಾ ಹೈ ಯೆ ಮರಾ ಹುವಾ ಹೈ, ಔರ್ ವೋಟ್ ನಹೀ ಕರ್ ಸಕ್ತಾ...' (ಎಲ್ಲರಿಗೂ ಗೊತ್ತು ಇವರು ಸತ್ತಿದ್ದಾರೆ ಮತ್ತು ವೋಟ್ ಮಾಡಲು ಸಾಧ್ಯವಿಲ್ಲ) ಎನ್ನುತ್ತದೆ. ಇದಕ್ಕೆ ಪ್ರತಿಕ್ರಿಯಿಸುವ ಅಮಿತಾಬ್ ಬಚ್ಚನ್ ಪಾತ್ರ, ತಮ್ಮ ಸಾವಿನ ನಂತರವೂ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಮಾಯವಾಗಿಲ್ಲ ಮತ್ತು ಹಿಂದಿನ ಚುನಾವಣೆಯಲ್ಲಿ ತಮ್ಮ ಹೆಸರಿನಲ್ಲಿ ಬೇರೆ ಯಾರೋ ಕಳ್ಳವೋಟ್ ಹಾಕಿದ್ದಾರೆ ಎಂದು ಆರೋಪಿಸುವ ದೃಶ್ಯ ಇದರಲ್ಲಿದೆ.
ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸವಾಲು:
ಈ ವಿಡಿಯೋವನ್ನು 'X' (ಟ್ವಿಟರ್) ಜಾಲತಾಣದಲ್ಲಿ ಹಂಚಿಕೊಂಡಿರುವ ಸ್ಮೃತಿ ಇರಾನಿ, ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ನಿಜವಾಗಿಯೂ ನಿದ್ರೆ ಮಾಡುತ್ತಿರುವವರನ್ನು ಎಬ್ಬಿಸಬಹುದು, ಆದರೆ ದೇಶವನ್ನು ದಾರಿ ತಪ್ಪಿಸಲು ಕುರುಡರಂತೆ ನಟಿಸುತ್ತಿರುವವರನ್ನು ಎಬ್ಬಿಸಲು ಸಾಧ್ಯವಿಲ್ಲ! SIR Explain!' ಎಂದು ಸವಾಲು ಹಾಕುವ ಮೂಲಕ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ವಿವಾದ:
ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಸ್ತುತ ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಈ ಪರಿಷ್ಕರಣೆ ಪ್ರಕ್ರಿಯೆಯ ಬಗ್ಗೆ ತೀವ್ರ ಕಳಳವಳ ವ್ಯಕ್ತಪಡಿಸಿವೆ. ಮತ್ತೊಂದೆಡೆ, ಬಿಜೆಪಿಯು ವಿಪಕ್ಷಗಳ ಈ ಅಭಿಯಾನವನ್ನು ತೀವ್ರವಾಗಿ ಟೀಕಿಸುತ್ತಿದೆ. ಈ ವಿವಾದದ ನಡುವೆ ಸ್ಮೃತಿ ಇರಾನಿ ಹಂಚಿಕೊಂಡಿರುವ ಈ ಎಐ ವಿಡಿಯೋ ಈಗ ರಾಷ್ಟ್ರೀಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.


