ಸುಪ್ರೀಂ ಕೋರ್ಟ್ ಬಳಿ ನಡೆದ ಇಂಡಿಯಾ ಒಕ್ಕೂಟದ ಪ್ರತಿಭಟನೆ ವರದಿ ಮಾಡುವಾಗ ರಾಹುಲ್ ಗಾಂಧಿ ತಮ್ಮ ಕೈಹಿಡಿದು ಎಳೆದರು ಎಂದು ಗರ್ಭಿಣಿ ಪತ್ರಕರ್ತೆ ರಿಚಾ ಪರಾಷರ್ ಆರೋಪಿಸಿದ್ದಾರೆ. ಭದ್ರತಾ ಸಿಬ್ಬಂದಿ ತಳ್ಳಿದ್ದರಿಂದ ತಾವು ಮೆಟ್ಟಿಲು ಜಾರಿ ಬಿದ್ದಿರುವುದಾಗಿ ಅವರು ಆಘಾತ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಅ.14): ಇಂಡಿಯಾ ಒಕ್ಕೂಟದ ಪ್ರತಿಭಟನೆಯ ವರದಿಗೆ ಹೋಗಿದ್ದಾಗ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಗರ್ಭಿಣಿಯಾದ ನನ್ನ ಕೈಹಿಡಿದು ಎಳೆದರು, ನನ್ನ ಕ್ಯಾಮೆರಾಮೆನ್ ಅನ್ನು ತಳ್ಳಿದರು ಎಂದು ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಪತ್ರಕರ್ತೆ ರಿಚಾ ಪರಾಷರ್(Richa Parashar) ಗಂಭೀರ ಆರೋಪ ಮಾಡಿದ್ದಾರೆ.
ಗರ್ಭಿಣಿ ಪತ್ರಕರ್ತೆ ರಿಚಾ ಪರಾಷರ್ ಹೇಳಿದ್ದೇನು?
ಸುಪ್ರೀಂ ಕೋರ್ಟ್ ರ್ಯಾಲಿ(Supreme court rally) ವರದಿ ಮಾಡುವ ವೇಳೆ ಈ ಘಟನೆ ನಡೆದಿದ್ದು, ಈ ಕುರಿತು ಪತ್ರಕರ್ತೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಮೆಟ್ಟಿಲು ಮೇಲೆ ಬಿದ್ದೆ
ನಾನು ಮೊದಲ ಬಾರಿಯ ಗರ್ಭಿಣಿ ಎಂದು ಹೇಳಿಕೊಂಡಿರುವ ಅವರು, ನಾನು ರಾಹುಲ್ ಗಾಂಧಿ ಹೇಳಿಕೆ ಪಡೆಯುವ ಪ್ರಯತ್ನದಲ್ಲಿದ್ದೆ. ಬೇರೆ ಮಾಧ್ಯಮದವರು ರಾಹುಲ್ ಗಾಂಧಿ ಹೇಳಿಕೆ ಪಡೆಯುತ್ತಿದ್ದಾಗ ನನ್ನ ಮೈಕ್ರೋಫೋನ್ ಅನ್ನು ಅವರ ಮುಂದಿಟ್ಟೆ. ಆಗ ರಾಹುಲ್ ಅವರು ನನ್ನ ಕೈಹಿಡಿದೆಳೆದರು. ಆದರೆ ತಳ್ಳಲಿಲ್ಲ. ಈ ಸಂದರ್ಭದಲ್ಲಿ ನನ್ನನ್ನು ತಳ್ಳಬೇಡಿ ಎಂದು ಪದೇ ಪದೆ ಕೂಗಿ ಹೇಳಿದೆ. ಅಷ್ಟರೊಳಗೆ ಅವರ ಭದ್ರತಾ ಸಿಬ್ಬಂದಿ ನನ್ನನ್ನು ಮತ್ತು ನನ್ನ ಕ್ಯಾಮೆರಾಮೆನ್ ಅನ್ನು ತಳ್ಳಿದರು. ಹೀಗಾಗಿ ನಾನು ಸುಪ್ರೀಂ ಕೋರ್ಟ್ನ ಹೊರಗಿನ ಮೆಟ್ಟಿಲು ಜಾರಿ ಕೆಳ ಬಿದ್ದೆ ಎಂದರು.


