ಕೊರೋನಾ ಕೊಲ್ಲುತ್ತಂತೆ ಸಿಯಾರಾಮ್ ಉಡುಪು!
ಕೊರೋನಾ ಕೊಲ್ಲುತ್ತಂತೆ ಸಿಯಾರಾಮ್ ಉಡುಪು!| ವೈರಸ್‌ನಿಂದ ಶೇ.99.94ರಷ್ಟುರಕ್ಷಣೆ ಇದೆಯಂತೆ
ನವದೆಹಲಿ(ಜು.27): ಭಾರತದ ಜನಪ್ರಿಯ ಜವಳಿ ಬ್ರ್ಯಾಂಡ್‌ಗಳ ಪೈಕಿ ಒಂದಾದ ಸಿಯಾರಾಮ್ ಕಂಪನಿಯು ಕೊರೋನಾ ವೈರಸ್ ನಿರೋಧಕ ಉಡುಪುಗಳನ್ನು ಸಿದ್ಧಪಡಿಸಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಉಡುಪುಗಳು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯಿಂದ ಮಾನ್ಯತೆ ಪಡೆದ ಲ್ಯಾಬ್‌ಗಳಲ್ಲಿ ಪರೀಕ್ಷೆಗೆ ಒಳಪಟ್ಟಿದ್ದು, ಕೊರೋನಾ ವೈರಸ್ ಅನ್ನು ಕೆಲವೇ ಸೆಕೆಂಡ್‌ಗಳಲ್ಲಿ ಕೊಲ್ಲುತ್ತದೆ ಎಂದು ಸಿಯಾರಾಮ್ ಹೇಳಿಕೊಂಡಿದೆ.
ಸಕ್ರಿಯ ಕೊರೋನಾ: ದೇಶದಲ್ಲೇ ಕರ್ನಾಟಕ ನಂ.2!
ಆಸ್ಪ್ರೇಲಿಯಾ ಮೂಲದ ಹೆಲ್ತ್‌ಗಾರ್ಡ್ ಎಂಬ ಸಂಸ್ಥೆಯ ಸಹಯೋಗದೊಂದಿಗೆ ವೈರಸ್ ನಿರೋಧಕ ಉಡುಪನ್ನು ಸಿದ್ಧಪಡಿಸಲಾಗಿದೆ. ಇದು ಕೊರೋನಾ ವೈರಸ್‌ನಿಂದ ಶೇ.99.94ರಷ್ಟುರಕ್ಷಣೆ ಒದಗಿಸಬಲ್ಲದು. ಅಲ್ಲದೇ ಲೋಹ ಆಧಾರಿತ ಇತರ ರಾಸಾಯನಿಕ ಉತ್ಪನ್ನಗಳಿಗೆ ಹೋಲಿಸಿದರೆ ಇದು ಸೋಂಕು ಒಳಗೆ ಹೋಗದಂತೆ ತಡೆಯುತ್ತದೆ ಎಂದು ತಿಳಿಸಿದೆ.
ದೇಹದ ಶೇ.90ರಷ್ಟುಭಾಗ ಬಟ್ಟೆಯಿಂದ ಮುಚ್ಚಿರುತ್ತದೆ. ಕೊರೋನಾ ವೈರಸ್ ಬಟ್ಟೆಗಳ ಮೇಲೆ ಗಂಟೆಗಳ ಕಾಲ ಉಳಿಯುವುದರಿಂದ ದೇಹವನ್ನು ಆ ವೈರಾಣು ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ವೈರಸ್ ಬರದಂತೆ ದೇಹಕ್ಕೆ ರಕ್ಷಣೆ ಒದಗಿಸಲು ತಮ್ಮ ಕಂಪನಿಯ ಉಡುಪುಗಳು ಸಹಕಾರಿ ಆಗಿವೆ ಎಂದು ಸಿಯಾರಾಮ್ ಸಿಲ್‌್ಕ ಮಿಲ್ಸ್‌ನ ಸಿಎಂಡಿ ರಮೇಶ್ ಪೊದ್ದಾರ್ ಹೇಳಿದ್ದಾರೆ.
ಇದೇ ವೇಳೆ ಸಿಯಾರಾಮ್‌ನ ಕೊರೋನಾ ರಕ್ಷಿತ ಬಟ್ಟೆಯ ಬಗ್ಗೆ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸಿಯಾರಾಮ್‌ನ ಬಟ್ಟೆಗಳು ಪಿಪಿಇ ಕಿಟ್‌ಗಳ ರೀತಿ ಕೊರೋನಾ ವೈರಸ್ ಅನ್ನು ತಡೆಯಬಲ್ಲದು ಎಂಬುದನ್ನು ಸಾಬೀತುಪಡಿಸುವ ಸಾಕ್ಷ್ಯಾಧಾರಗಳ ಕೊರತೆ ಇದೆ. ಇದು ಸಂಪೂರ್ಣ ಸುರಕ್ಷಿತ ಎಂಬ ಬಗ್ಗೆ ಅನುಮಾನಗಳಿವೆ ಎಂದು ವೈದ್ಯರು ತಿಳಿಸಿದ್ದಾರೆ.