ಒಂದೇ ಬೈಕ್‌ನಲ್ಲಿ ಆರು ಜನರ ಪ್ರಯಾಣ: ವಿಡಿಯೋ ವೈರಲ್
- ಒಂದೇ ಬೈಕ್‌ನಲ್ಲಿ ಆರು ಜನರ ಪ್ರಯಾಣ
- ಮುಂಬೈನ ಅಂಧೇರಿ ಪಶ್ಚಿಮದ ಸ್ಟಾರ್ ಬಜಾರ್ ಬಳಿ ಘಟನೆ
- ವಿಡಿಯೋ ವೈರಲ್, ಕ್ರಮಕ್ಕೆ ಆಗ್ರಹ
ಮುಂಬೈ: ಒಂದೇ ಸ್ಕೂಟರ್‌ನಲ್ಲಿ ಆರು ಜನ ಒಟ್ಟಿಗೆ ಪ್ರಯಾಣಿಸುತ್ತಿರುವ ಅದರಲ್ಲೂ ಆರನೇ ವ್ಯಕ್ತಿಯೊಬ್ಬ ಹಿಂಬದಿಯಲ್ಲಿ ಕುಳಿತಿರುವ ಸವಾರನ ಹೆಗಲ ಮೇಲೆ ಕುಳಿತು ಸಂಚರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಸಂಚಾರಿ ನಿಯಮವನ್ನು ಪಾಲಿಸುವುದಕ್ಕಿಂತ ಅದನ್ನು ಉಲ್ಲಂಘಿಸುವವರೇ ಹೆಚ್ಚು. ಸಾಮಾನ್ಯವಾಗಿ ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಕುಳಿತು ಪಯಣಿಸುವಂತಿಲ್ಲ. ತ್ರಿಬಲ್ ರೈಂಡಿಂಗ್ ಕೂಡ ನಿಷೇಧವೇ ಆದಾಗ್ಯೂ ಕೂಡ ಅನೇಕರು ಈ ನಿಯಮವನ್ನು ಪಾಲಿಸುವುದೇ ಇಲ್ಲ.
ಹಳ್ಳಿ ಕಡೆಯಂತು ಬೈಕ್‌ನಲ್ಲಿ ಮೂವರು ಪ್ರಯಾಣಿಸುವುದು ಮಾಮೂಲಿ, ಇಬ್ಬರು ಮಕ್ಕಳಿರುವ ನಾಲ್ಕು ಸದಸ್ಯರ ಕುಟುಂಬವಿದ್ದರೆ ಸ್ಕೂಟರ್‌ನಲ್ಲಿ ನಾಲ್ವರು ಪ್ರಯಾಣಿಸುವುದು ಮಾಮೂಲಿ. ಇದು ಕುಟುಂಬಗಳ ವಿಚಾರವಾದರೆ ಇನ್ನು ಹುಡುಗರು ಮೋಜಿಗಾಗಿ ನಾಲ್ವರು ಐವರು ಒಂದೇ ಬೈಕ್‌ನಲ್ಲಿ ಕುಳಿತು ಸವಾರಿ ಮಾಡಿರುವುದನ್ನು ಕೂಡ ನೀವು ನೋಡಿರಬಹುದು. ಆದರೆ ಇಲ್ಲಿ ಒಂದೇ ಬೈಕ್‌ನಲ್ಲಿ ಒಟ್ಟು ಆರು ಜನ ಪ್ರಯಾಣಿಸುತ್ತಿದ್ದಾರೆ. ಅದರಲ್ಲೂ ಕೊನೆಯವನಂತೂ ತನ್ನ ಹೆಗಲ ಮೇಲೆ ಮತ್ತೊಬ್ಬನನ್ನು ಕೂರಿಸಿಕೊಂಡಿದ್ದಾನೆ. ಸ್ವಲ್ಪ ಆಯತಪ್ಪಿದರು ಎಲ್ಲರೂ ಒಟ್ಟಿಗೆ ಸಾವಿನ ಮನೆ ಸೇರುವುದು ಗ್ಯಾರಂಟಿ. ಮುಂಬೈನಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.
ಮಹಾನಗರಗಳಲ್ಲಿ ವ್ಹೀಲಿಂಗ್, ಹಳ್ಳಿ ಭಾಗದಲ್ಲಿ ಒಂದೇ ಬೈಕ್‌ನಲ್ಲಿ ಐವರು ಸಂಚರಿಸುವ ಕ್ರೇಜ್..!
ಮುಂಬೈನ ಅಂಧೇರಿ ಪಶ್ಚಿಮದ ಸ್ಟಾರ್ ಬಜಾರ್ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಕಾರಿನ ಒಳಗಿನಿಂದ ಈ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಆರು ಜನರು ಪ್ರಯಾಣಿಸುತ್ತಿದ್ದ ಈ ಗಾಡಿಯನ್ನು ಹೋಂಡಾ ಆಕ್ಟಿವಾ ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ರಮಣದೀಪ್ ಸಿಂಗ್ ಹೋರಾ ಎಂಬ ಖಾತೆದಾರರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನ್ನು ಅವರು ಮುಂಬೈ ಟ್ರಾಫಿಕ್ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಗೂ ಟ್ಯಾಗ್ ಮಾಡಿದ್ದಾರೆ.
ಒಂದೇ ಬೈಕ್‌ನಲ್ಲಿ 12 ಮಕ್ಕಳನ್ನು ಕೂರಿಸಿಕೊಂಡು ಭೂಪನ ಸ್ಟಂಟ್
ಇದಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಟ್ರಾಫಿಕ್ ಪೊಲೀಸ್ ಖಾತೆಯಾದ @MTPHereToHelp ಈ ಘಟನೆ ನಡೆದ ಸ್ಥಳವನ್ನು ಉಲ್ಲೇಖಿಸುವಂತೆ ಕೇಳಿದರು. ಅದಕ್ಕೆ ಸ್ಟಾರ್ ಬಜಾರ್ ಅಂಧೇರಿ ವೆಸ್ಟ್ ಹತ್ತಿರ ಎಂದು ರಮಣದೀಪ್ ಸಿಂಗ್ ಹೋರಾ ಉತ್ತರಿಸಿದ್ದಾರೆ. ರೋಡ್ಸ್ ಆಫ್ ಮುಂಬೈ ಎಂಬ ಹೆಸರಿನ ಖಾತೆಯಿಂದ ಈ ವೀಡಿಯೊವನ್ನು ನಂತರ ಮತ್ತೆ ಪೋಸ್ಟ್ ಮಾಡಲಾಗಿದ್ದು, ಘಟನೆ ನಡೆದ ನಿಖರವಾದ ಸ್ಥಳ ಅಂಧೇರಿ ವೆಸ್ಟ್‌ನಲ್ಲಿರುವ ಲಿಂಕ್ ರೋಡ್ ಎಂದು ಮುಂಬೈ ಟ್ರಾಫಿಕ್ ಪೊಲೀಸರಿಗೆ ತಿಳಿಸಿದೆ.
ಈ ಟ್ವಿಟ್‌ಗೆ ಪ್ರತಿಕ್ರಿಯಿಸಿದ ಮುಂಬೈ ಟ್ರಾಫಿಕ್ ಪೊಲೀಸ್ (ಎಂಟಿಪಿ) ಈ ಬಗ್ಗೆ ಪರಿಶೀಲಿಸಲು ನಗರ ಸಂಚಾರ ವಿಭಾಗಕ್ಕೆ ನಿರ್ದೇಶಿಸಿದ್ದಾರೆ ಎಂದು ಹೇಳಿದರು.
ಆದರೆ, ವಿಡಿಯೋದಲ್ಲಿರುವ ಸಂಚಾರಿ ನಿಯಮ ಉಲ್ಲಂಘಿಸಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ.
ಕೆಲ ದಿನಗಳ ಹಿಂದೆ ನಾಲ್ಕು ಜನ ಗೆಳೆಯರು ಒಂದೇ ಬೈಕ್‌ನಲ್ಲಿ ಪ್ರಯಾಣಿಸಲು ಹೋಗಿ ನಾಲ್ವರು ಒಟ್ಟಿಗೆ ಸಾವನ್ನಪ್ಪಿದ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿತ್ತು. ನಾಲ್ವರು ಪ್ರಯಾಣಿಸುವ ವೇಳೆ ನಿಯಂತ್ರಣ ತಪ್ಪಿದ ಬೈಕ್ ಹೊಂಡಕ್ಕೆ ಉರುಳಿದ ಪರಿಣಾಮ ಮೂವರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸಂಕೇಶ್ವರ ಪಟ್ಟಣದ ನಿವಾಸಿಗಳಾದ ನಾಲ್ವರು ಗೆಳೆಯರು ಒಂದೆ ಬೈಕ್ ನಲ್ಲಿ ನಿಪ್ಪಾಣಿ ಕಡೆಯಿಂದ ಸಂಕೇಶ್ವರ ಕಡೆಗೆ ಬರುತ್ತಿರುವ ವೇಳೆ ಏಕಾಏಕಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಂಡಿಗೆ ಬಿದ್ದಿದೆ. ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದರು, ಇನ್ನೊಬ್ಬನ ಸ್ಥಿತಿ ಚಿಂತಾಜನಕವಾದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಯಿತು.ಮುಂಜಾನೆ ಆತ ಸಹ ಸಾವಿನ ಮನೆ ಸೇರಿಕೊಂಡಿದ್ದ.