ಮಹಾನಗರಗಳಲ್ಲಿ ವ್ಹೀಲಿಂಗ್, ಹಳ್ಳಿ ಭಾಗದಲ್ಲಿ ಒಂದೇ ಬೈಕ್‌ನಲ್ಲಿ ಐವರು ಸಂಚರಿಸುವ ಕ್ರೇಜ್..!
ರೋಣ(ಜೂ.14): ಬೆಂಗಳೂರು, ಮೈಸೂರು ಸೇರಿದಂತೆ ಮಹಾನಗರಗಳಲ್ಲಿ ಬೈಕ್ ವ್ಹೀಲಿಂಗ್ ಕ್ರೇಜ್‌ಗಳಿದ್ದಂತೆ ಗದಗ ಜಿಲ್ಲೆ ರೋಣ ತಾಲೂಕಿನ ಕೆಲವೆಡೆ ಒಂದೇ ಬೈಕ್‌ನಲ್ಲಿ ಐವರು ಸಂಚರಿಸುವ ಕ್ರೇಜ್ ಹೆಚ್ಚಾಗಿದೆ. ಒಂದು ಬೈಕ್‌ನಲ್ಲಿ ಸವಾರ ಮತ್ತು ಹಿಂಬದಿ ಸವಾರ ಸೇರಿ ಇಬ್ಬರಿಗೆ ಮಾತ್ರ ಅವಕಾಶ ಎಂಬುದು ಸಾರಿಗೆ ನಿಯಮ. ಇಲ್ಲಿ ಒಂದೇ ಬೈಕ್‌ನಲ್ಲಿ ಮೂವರಲ್ಲ, ನಾಲ್ವರಲ್ಲ ಐವರು ಸವಾರಿ ಮಾಡುತ್ತಾರೆ.
ರೋಣ ತಾಲೂಕಿನ ಗಜೇಂದ್ರಗಡ, ನರೇಗಲ್ಲ, ಹೊಳೆಆಲೂರ ಮತ್ತು ಹಿರೇಹಾಳ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ನಿತ್ಯವೂ ರಾಜಾರೋಷವಾಗಿ ನಡೆಯುವ ಬೈಕ್ ಸವಾರಿ
ನರೇಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ನಿಡಗುಂದಿ ಮತ್ತು ನರೇಗಲ್ಲ ಮಾರ್ಗವಾಗಿ ಪ್ರತಿ ನಿತ್ಯ ಬೈಕ್ ಒಂದರಲ್ಲಿ ಮೂವರು, ನಾಲ್ವರು ಸಾಲದ್ದಕ್ಕೆ ಐವರ ಸಂಚಾರ
ಮಹಾಮಾರಿ ಕೊರೋನಾ ಸಮಯದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಲಿ, ಮಾಸ್ಕ್ ಧರಿಸುವುದಾಗಲಿ, ಹೆಲ್ಮೆಟ್ ಹಾಕಿಕೊಳ್ಳುವುದಾಗಲಿ ಯಾವುದೂ ಪಾಲನೆಯಿಲ್ಲ
ನಿಡಗುಂದಿಯಿಂದ ನರೇಗಲ್ಲ ಮಾರ್ಗದಲ್ಲಿ ಬೈಕ್ ಒಂದರಲ್ಲಿ ಐದು ಜನ ಸಂಚರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಮೊಬೈಲ್ ಮೂಲಕ ತಿಳಿಸಿದ ತಕ್ಷಣವೇ ತಪಾಸಣೆಗೆ ನಮ್ಮ ಸಿಬ್ಬಂದಿಯನ್ನು ಕಳಿಸಲಾದರೂ ಸವಾರರು ಸಿಗಲಿಲ್ಲ. ಅವರ ಬೈಕ್ ನಂಬರ್ ಮೂಲಕ ಅವರನ್ನು ಪತ್ತೆ ಮಾಡುವಲ್ಲಿ ಕೆಲಸದ ಒತ್ತಡದಲ್ಲಿ ಸಾಧ್ಯವಾಗಿಲ್ಲ: ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಬಿ. ಕೊಳ್ಳಿ
ಬೈಕ್ ಸವಾರರು ಸಂಚಾರ ನಿಗಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಪಿಎಸ್‌ಐಗಳಿಗೆ ಸೂಚನೆ ನೀಡಲಾಗುವುದು: ಗದಗ ಎಸ್‌ಪಿ ಎನ್. ಯತೀಶ
ಬೈಕ್‌ನಲ್ಲಿ ಮೂರು, ನಾಲ್ವರು ಅಥವಾ ಐವರು ಸಂಚರಿಸಿದ್ದು ಕಂಡು ಬಂದಲ್ಲಿ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಬೈಕ್‌ನಲ್ಲಿ ಐವರು ಸಂಚರಿಸಿದ್ದ ಕುರಿತು ಪತ್ತೆಗೆ ನರೇಗಲ್ಲ ಪಿಎಸ್‌ಐಗೆ ತಿಳಿಸಲಾಗಿದೆ: ರೋಣ ಸರ್ಕಲ್ ಸಿಪಿಐ ಸುನೀಲ ಸವದಿ