ನವದೆಹಲಿ (ಏ.23): ಸಿಪಿಐಎಂ ಪ್ರಧಾನ ಕಾರ‍್ಯದರ್ಶಿ ಸೀತಾರಾಮ್‌ ಯೆಚೂರಿ ಅವರ ಹಿರಿಯ ಪುತ್ರ ಆಶಿಷ್‌ ಅವರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.

ಪತ್ರಕರ್ತರಾಗಿದ್ದ ಆಶಿಷ್‌ ಅವರು ಜೂ.9ರಂದು ತಮ್ಮ 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. 2 ವಾರಗಳ ಹಿಂದಷ್ಟೇ ಕೋವಿಡ್‌ಗೆ ತುತ್ತಾಗಿದ್ದ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುರುವಾರ ನಸುಕಿನ 5.30ಕ್ಕೆ ಕೊನೆಯುಸಿರೆಳೆದಿದ್ದಾರೆ.

ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೇರಿದಂತೆ ಇನ್ನಿತರ ರಾಜಕೀಯ ನಾಯಕರು ಯೆಚೂರಿ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಕೊರೋನಾ ಅಟ್ಟಹಾಸ : ವಿಜ್ಞಾನಿಗಳ ತಂಡ ನೀಡಿದೆ ಎಚ್ಚರಿಕೆ ! .

ಈ ಸಂಬಂಧ ಟ್ವೀಟ್‌ ಮಾಡಿರುವ ಸೀತಾರಾಮ್‌ ಯೆಚೂರಿ ಅವರು, ‘ಗುರುವಾರ ಬೆಳ್ಳಂಬೆಳಗ್ಗೆ ಕೊರೋನಾ ವೈರಸ್‌ನಿಂದ ನನ್ನ ಹಿರಿಯ ಮಗ ಆಶಿಷ್‌ನನ್ನು ಕಳೆದುಕೊಂಡಿದ್ದೇನೆ ಎಂಬ ಅಶುಭ ಸುದ್ದಿಯನ್ನು ತಿಳಿಸುತ್ತಿದ್ದೇನೆ. ನನ್ನ ಮಗನ ಆರೋಗ್ಯಕ್ಕೆ ಹಾರೈಸಿದ್ದ ಎಲ್ಲರಿಗೂ ಮತ್ತು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು, ಶುಶ್ರೂಷಕಿಯರು ಮತ್ತು ಮುಂಚೂಣಿ ಕಾರ‍್ಯಕರ್ತರು ಹಾಗೂ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಕುಟುಂಬದ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ.