ರಾಜ್ಯದಲ್ಲಿ ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ವಿಜ್ಞಾನಿಗಳೂ ಎಚ್ಚರಿಕೆಯೊಂದನ್ನು ನೀಡಿದ್ದಾರೆ.  ಏನದು ?

ನವದೆಹಲಿ (ಏ.23): ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಪ್ರಕರಣಗಳು ಮೇ 11ರಿಂದ 15ರ ವೇಳೆಗೆ ತುತ್ತತುದಿಗೆ ತಲುಪಬಹುದು. ಕರ್ನಾಟಕದಲ್ಲಿ ಮೇ 1ರಿಂದ 5ರ ವೇಳೆಗೆ ಕೋವಿಡ್‌ ತನ್ನ ಗರಿಷ್ಠ ಮಟ್ಟಮುಟ್ಟಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಏ.15ರಿಂದ 20ರ ವೇಳೆಗೆ ದೇಶದಲ್ಲಿ ಕೊರೋನಾ ತನ್ನ ಗರಿಷ್ಠ ಮಟ್ಟವನ್ನು ತಲುಪಿ ಮೇ ಅಂತ್ಯದ ವೇಳೆಗೆ ಇಳಿಕೆ ಕಾಣಬಹುದು ಎಂದು ಇದೇ ವಿಜ್ಞಾನಿಗಳು ಭವಿಷ್ಯ ನುಡಿದಿದ್ದರು. ಇದಲ್ಲದೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಅಧ್ಯಯನ ವರದಿ ಕೂಡ ಏ.15ಕ್ಕೆ ಕೊರೋನಾ ತುತ್ತತುದಿಯನ್ನು ಊಹಿಸಿತ್ತು. ಆದರೆ ಡಬಲ್‌ ಮ್ಯುಟೆಂಟ್‌ ಹಾಗೂ ಟ್ರಿಪಲ್‌ ಮ್ಯುಟೆಂಟ್‌ ರೂಪಾಂತರಿ ಕೊರೋನಾದಿಂದಾಗಿ ಸೋಂಕು ಆರ್ಭಟಿಸುತ್ತಿರುವುದರಿಂದ ಆ ಊಹೆಗಳೆಲ್ಲಾ ಸುಳ್ಳಾಗಿದ್ದವು. ಇದೀಗ ವಿಜ್ಞಾನಿಗಳು ಮತ್ತೊಂದು ಮಾದರಿಯನ್ನು ಮುಂದಿಟ್ಟಿದ್ದಾರೆ.

ಗಣಿತ ಮಾದರಿಯೊಂದನ್ನು ಆಧರಿಸಿ ಕಾನ್ಪುರ ಐಐಟಿಯ ಮಣೀಂದ್ರ ಅಗ್ರವಾಲ್‌ ಅವರು ಇರುವ ವಿಜ್ಞಾನಿಗಳ ತಂಡ ಸೋಂಕು ಯಾವಾಗ ಗರಿಷ್ಠ ಮಟ್ಟತಲುಪಬಹುದು ಎಂಬುದನ್ನು ಅಂದಾಜಿಸಿದೆ. ಈ ತಂಡದ ಪ್ರಕಾರ, ಮೇ 11ರಿಂದ 15ರ ವೇಳೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 33ರಿಂದ 35 ಲಕ್ಷಕ್ಕೆ ಏರಿಕೆಯಾಗಲಿದೆ. ಕೊರೋನಾ ಮೊದಲ ಅಲೆ ದೇಶದಲ್ಲಿ ಸೆ.17ರಂದು ಗರಿಷ್ಠ ಮಟ್ಟವನ್ನು ಮುಟ್ಟಿದಾಗ ಸಕ್ರಿಯ ಪ್ರಕರಣಗಳು 10 ಲಕ್ಷದಷ್ಟಿದ್ದವು. ಹಾಲಿ ಈಗ ದೇಶದಲ್ಲಿ 22 ಲಕ್ಷ ಸಕ್ರಿಯ ಪ್ರಕರಣಗಳು ಇವೆ.

2365 ಸೋಂಕಿತರ ಸಾವು : ದೇಶದಲ್ಲಿ 1 ದಿನದ ದಾಖಲೆ

ಯಾವ ರಾಜ್ಯದಲ್ಲಿ ಯಾವ ವೇಳೆಗೆ ಕೊರೋನಾ ತುತ್ತತುದಿಯನ್ನು ತಲುಪಬಹುದು ಎಂಬ ಊಹೆಯನ್ನೂ ವಿಜ್ಞಾನಿಗಳ ತಂಡ ಮಾಡಿದೆ. ಆ ಪ್ರಕಾರ, ದೆಹಲಿ, ಹರಾರ‍ಯಣ, ರಾಜಸ್ಥಾನ, ತೆಲಂಗಾಣದಲ್ಲಿ ಏ.25ರಿಂದ 30ರ ವೇಳೆಗೆ, ಒಡಿಶಾ, ಕರ್ನಾಟಕ, ಪಶ್ಚಿಮ ಬಂಗಾಳದಲ್ಲಿ ಮೇ 1ರಿಂದ 5ರ ಹೊತ್ತಿಗೆ ಕೊರೋನಾ ಗರಿಷ್ಠ ಮಟ್ಟತಲುಪಬಹುದು. ತಮಿಳುನಾಡು ಹಾಗೂ ಆಂಧ್ರದಲ್ಲಿ ಮೇ 6ರಿಂದ 10ರವರೆಗೆ ಪರಾಕಾಷ್ಠೆ ಮೆರೆಯಬಹುದು ಎಂದು ಹೇಳಿದೆ. ಬಿಹಾರ ಏ.25ಕ್ಕೆ ಪೀಕ್‌ಗೆ ಹೋದರೆ, ಮಹಾರಾಷ್ಟ್ರ ಹಾಗೂ ಛತ್ತೀಸ್‌ಗಢ ಈಗಾಗಲೇ ತುತ್ತತುದಿಯನ್ನು ತಲುಪಿರಬಹುದು ಎಂದು ವಿಶ್ಲೇಷಿಸಿದೆ.

ಏ.15ರ ವೇಳೆಗೆ ಕೊರೋನಾ ತನ್ನ ಗರಿಷ್ಠ ಮಟ್ಟಕ್ಕೇರಬಹುದು ಎಂದು ಏ.1ರಂದು ಹೇಳಿದ್ದಿರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಮಣೀಂದ್ರ, ಕೋವಿಡ್‌ ತೀವ್ರ ಸ್ವರೂಪ ಪಡೆದುಕೊಂಡಿರುವುದರಿಂದ ಗಣಿತ ಸೂತ್ರದ ಲೆಕ್ಕ ನಿಯಂತ್ರಣ ಮೀರಿದೆ. ಈ ರೀತಿಯ ಅಂದಾಜನ್ನು ನೀಡುವುದರಿಂದ ಸರ್ಕಾರಗಳು ಭವಿಷ್ಯದಲ್ಲಿ ಎದುರಾಗಬಹುದಾದ ಹಾಸಿಗೆ, ಐಸಿಯು ಹಾಗೂ ಆಕ್ಸಿಜನ್‌ ಹೊಂದಿಸಿಕೊಳ್ಳಲು ಅನುಕೂಲವಾಗಲಿದೆ. ಒಂದು ವೇಳೆ ಈ ಅಂದಾಜು ತಪ್ಪಾದರೂ ಅದನ್ನು ನೀಡುವುದನ್ನು ನಿಲ್ಲಿಸುವುದಿಲ್ಲ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಗಣಿತ ಸೂತ್ರ ಆಧರಿಸಿದ ಮಾದರಿ ತುಂಬಾ ಮಹತ್ವವಾದುದು ಎಂದು ಹೇಳಿದ್ದಾರೆ.