ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿವಾದದ ನಡುವೆ ಚುನಾವಣಾ ಆಯೋಗವು ಮತದಾರರ ಮನೆಬಾಗಿಲಿಗೇ ಪರಿಶೀಲನಾ ಸೇವೆ ನೀಡಲು ನಿರ್ಧರಿಸಿದೆ. ಇನ್ನು ಮುಂದೆ ಬೂತ್ ಮಟ್ಟದ ಅಧಿಕಾರಿಗಳೇ ಮನೆಗೆ ತೆರಳಿ ದಾಖಲೆ ಸಂಗ್ರಹಿಸಲಿದ್ದು, ಕೂಲಿ ಕಾರ್ಮಿಕರಿಗಾಗಿ ವಿಶೇಷ ಶಿಬಿರಗಳನ್ನು ತೆರೆಯಲಾಗುವುದು ಎಂದು ಇಸಿ ಹೇಳಿದೆ.
ನವದೆಹಲಿ (ಸೆ.27): ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಸುತ್ತ ಭುಗಿಲೆದ್ದಿರುವ ರಾಜಕೀಯ ವಿವಾದದ ನಡುವೆಯೇ, ಭಾರತೀಯ ಚುನಾವಣಾ ಆಯೋಗವು (ಇಸಿಐ) ಶನಿವಾರ ಉನ್ನತ ಮಟ್ಟದ ಸಭೆ ನಡೆಸಿ ಮತದಾರರ ಮನೆಬಾಗಿಲಿಗೇ ಪರಿಶೀಲನಾ ಸೇವೆಗಳನ್ನು ತಲುಪಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನೊಳಗೊಂಡ ಪೂರ್ಣ ನಿಯೋಗವು ಈ ನಿರ್ಧಾರ ತಳೆದಿದ್ದು, ಮತದಾರರ ಮೇಲಿನ ಹೊರೆಯನ್ನು ತಗ್ಗಿಸಲು ನಿಯಮ ಸಡಿಲಿಕೆ ಹಾಗೂ ನೋಟಿಸ್ ವಿಲೇವಾರಿಯ ಗಡುವನ್ನು ವಿಸ್ತರಿಸಿ ಆದೇಶಿಸಿದೆ.
ಜನರು ವಿಚಾರಣೆಗೆ ಹೋಗಬೇಕಿಲ್ಲ:
ದಾಖಲೆಗಳ ಮ್ಯಾಪಿಂಗ್ ಸಮಸ್ಯೆ ಅಥವಾ ತಾಂತ್ರಿಕ ವ್ಯತ್ಯಾಸಗಳಿಂದಾಗಿ ನೋಟಿಸ್ ಪಡೆದಿರುವ ಮತದಾರರು ಇನ್ನು ಮುಂದೆ ಚುನಾವಣಾ ನೋಂದಣಿ ಅಧಿಕಾರಿಗಳ (ಇಆರ್‌ಒ) ಕಚೇರಿಗೆ ಅಲೆಯಬೇಕಿಲ್ಲ. ಬದಲಾಗಿ, ಬೂತ್ ಮಟ್ಟದ ಅಧಿಕಾರಿಗಳೇ (ಬಿಎಲ್‌ಒ) ಸ್ವತಃ ಮನೆ ಮನೆಗೆ ತೆರಳಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ‘ಇಸಿನೆಟ್’ (ECINet) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ.
ಅತ್ಯಂತ ವಿರಳ ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ವಿಚಾರಣೆಗಳನ್ನು ನಡೆಸಲಾಗುವುದು. ಅದನ್ನೂ ಆದಷ್ಟು ಆನ್‌ಲೈನ್ ಮೂಲಕವೇ ಪೂರ್ಣಗೊಳಿಸಲು ಸೂಚಿಸಲಾಗಿದೆ. ಒಂದು ವೇಳೆ ಮತದಾರ ಹಾಜರಾಗಲು ಸಾಧ್ಯವಾಗದಿದ್ದರೆ, ಆತನ ಕುಟುಂಬದ ಅಧಿಕೃತ ಸದಸ್ಯರು ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕೂಲಿ ಕಾರ್ಮಿಕರು, ನಿರಾಶ್ರಿತರಿಗೆ ಕ್ಯಾಂಪ್:
ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಮತದಾರರು ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ವಿಶೇಷ ನೆರವಿನ ಶಿಬಿರಗಳನ್ನು ತೆರೆಯಲು ಜಿಲ್ಲಾ ಚುನಾವಣಾಧಿಕಾರಿಗಳಿಗೆ (ಡಿಇಒ) ಆದೇಶಿಸಲಾಗಿದೆ. ಮುಖ್ಯವಾಗಿ ನೈಟ್ ಶೆಲ್ಟರ್ ವಾಸಿಗಳು, ಕೂಲಿ ಕಾರ್ಮಿಕರು, ಬಡವರು ಮತ್ತು ವಸತಿ ರಹಿತರಿಗೆ ಈ ಕೇಂದ್ರಗಳು ಅಗತ್ಯ ದಾಖಲೆ ಸಲ್ಲಿಕೆಯಲ್ಲಿ ಮಾರ್ಗದರ್ಶನ ನೀಡಲಿವೆ.
‘ಇಸಿನೆಟ್’ ಪರಿಶೀಲನೆಗೆ ಸಮಿತಿ:
ಮತದಾರರ ಸೇವೆಗಳಿಗೆ ಬಳಕೆಯಾಗುತ್ತಿರುವ ‘ಇಸಿನೆಟ್’ ವ್ಯವಸ್ಥೆಯು ಚುನಾವಣಾ ಕಾಯ್ದೆಗಳಿಗೆ ಸಂಪೂರ್ಣ ಬದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸಲು ಹಿರಿಯ ಉಪ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಐಐಟಿ ಅಥವಾ ಐಐಐಟಿ ಸಂಸ್ಥೆಯ ಸ್ವತಂತ್ರ ತಾಂತ್ರಿಕ ತಜ್ಞರೂ ಸದಸ್ಯರಾಗಿರಲಿದ್ದಾರೆ.
‘ಇಸಿನೆಟ್’ ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿ ಮತದಾರರಿಗೆ ಹಲವು ಸೇವೆಗಳನ್ನು ಒದಗಿಸುತ್ತಿದೆ. ಇವುಗಳಲ್ಲಿ ಹಿಂದಿನ ಮತದಾರರ ಪಟ್ಟಿಗಳನ್ನು ಪರಿಶೀಲಿಸುವುದು ಮತ್ತು ನೋಟಿಸ್‌ಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸುವುದು ಸೇರಿವೆ.
ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ:
ಪ್ರಸ್ತುತ ಎಸ್‌ಐಆರ್ ಹಂತದಲ್ಲಿರುವ ದೆಹಲಿ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ದೆಹಲಿಯಲ್ಲಿ ಹಕ್ಕುಸ್ವಾಮ್ಯ ಕೋರಿಕೆ ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅ.30 ಹಾಗೂ ಅವುಗಳ ವಿಲೇವಾರಿಗೆ ನ.30ರವರೆಗೆ ಗಡುವು ವಿಸ್ತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಆಕ್ಷೇಪಣೆ ಸಲ್ಲಿಕೆಗೆ ಅ.12 ಮತ್ತು ವಿಲೇವಾರಿಗೆ ನ.10ರವರೆಗೆ ಸಮಯ ನೀಡಲಾಗಿದೆ.
20 ರಾಜ್ಯಗಳಲ್ಲಿ ಪರಿಷ್ಕರಣೆ ಪೂರ್ಣ:
ದೇಶದ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಹೆಸರು ಕೈಬಿಟ್ಟುಹೋಗಿರುವವರು ಮತ್ತು ಹೊಸ ಯುವ ಮತದಾರರು ಇನ್ಮುಂದೆ ನಿರಂತರ ಪರಿಷ್ಕರಣೆ ವ್ಯವಸ್ಥೆಯ ಮೂಲಕ ಹೆಸರು ಸೇರಿಸಿಕೊಳ್ಳಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ.


