ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವೇಳೆ ದಾಖಲೆಗಳ ಹೊಂದಾಣಿಕೆಯಾಗದ ವ್ಯಕ್ತಿಗಳ ಮನೆಗೆ ಬಿಎಲ್‌ಒಗಳು ಭೇಟಿ ನೀಡಿ ದಾಖಲೆ ಸಂಗ್ರಹಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ವಿಚಾರಣೆಗೆ ಕಚೇರಿಗೆ ಅಲೆಯುವುದನ್ನು ತಪ್ಪಿಸಿ, ಆನ್‌ಲೈನ್ ವ್ಯವಸ್ಥೆ ಹಾಗೂ ಬಡವರಿಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟಿದ್ದರೆ ಮರು ಸೇರ್ಪಡೆಗೆ ವಿಶೇಷ ಅಭಿಯಾನವನ್ನೂ ಆರಂಭಿಸಲಾಗುವುದು.
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ- SIR ವೇಳೆ ನೋಟಿಸ್ ನೀಡಲಾಗಿರುವ ಹಾಗೂ ದಾಖಲೆಗಳ ಹೊಂದಾಣಿಕೆಯಾಗದ ಅಥವಾ ತಾರ್ಕಿಕ ವ್ಯತ್ಯಾಸಗಳಿರುವ ವ್ಯಕ್ತಿಗಳ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಅರ್ಥಾತ್ BLOಗಳು ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ದೆಹಲಿಯಲ್ಲಿಂದು ನಡೆದ ಚುನಾವಣಾ ಆಯೋಗದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. SIR ವೇಳೆ ನೋಟಿಸ್ ಪಡೆದವರ ದಾಖಲೆಗಳನ್ನು ಬಿಎಲ್‌ಒಗಳು ಸಂಗ್ರಹಿಸಿ, ECINETನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ಬಳಿಕ ಚುನಾವಣಾ ನೋಂದಣಿ ಅಧಿಕಾರಿ ಈ ದಾಖಲೆಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಇಂತಹ ವ್ಯಕ್ತಿಗಳು ವಿಚಾರಣೆಗೆ ವೈಯಕ್ತಿಕವಾಗಿ ಇಆರ್‌ಒ ಕಚೇರಿಗೆ ಹಾಜರಾಗಬೇಕಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ವಿಚಾರಣೆಗೆ ಹಾಜರು
ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ERO ನಿರ್ಧಾರದಂತೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಅಗತ್ಯವಿದ್ದಲ್ಲಿ, ಕುಟುಂಬದ ಯಾವುದೇ ವಯಸ್ಕ ಸದಸ್ಯರನ್ನು ಮತದಾರರ ಪರವಾಗಿ ವಿಚಾರಣೆಗೆ ಹಾಜರಾಗಲು ಅಧಿಕೃತಗೊಳಿಸಬಹುದು. ಆನ್‌ಲೈನ್ ವಿಚಾರಣೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಆಯೋಗ ತಿಳಿಸಿದೆ. ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವವರು, ಕಾರ್ಮಿಕರು, ಬಡವರು, ನಿರಾಶ್ರಿತರು ಸೇರಿದಂತೆ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಜಿಲ್ಲಾ ಚುನಾವಣಾಧಿಕಾರಿಗಳು-ಡಿಇಒಗಳು ವಿಶೇಷ ಶಿಬಿರಗಳನ್ನು ಆಯೋಜಿಸಲಿದ್ದಾರೆ.
ಎಸ್‌ಐಆರ್‌ಗಾಗಿ ಫಾರ್ಮ್-6ಕ್ಕೆ ಲಗತ್ತಿಸಲಾದ ಘೋಷಣೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಎಸ್‌ಐಆರ್ ವ್ಯಾಪ್ತಿಗೆ ಒಳಪಡದ ಅವಧಿಯಲ್ಲಿ, ನೋಂದಣಿ ನಿಯಮಗಳು-1960ರ ಅಡಿಯಲ್ಲಿ ಅನ್ವಯವಾಗುವ ನಮೂನೆಗಳನ್ನು ಬಳಸಲಾಗುವುದು ಎಂದು ಆಯೋಗ ತಿಳಿಸಿದೆ.
ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟಿದ್ದರೆ…
ಎಸ್‌ಐಆರ್ ವೇಳೆ ಅಥವಾ ನಂತರ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟಿದ್ದರೆ, ಯುವ ಮತದಾರರು ಹಾಗೂ ಮೊದಲ ಬಾರಿಗೆ ಮತ ಚಲಾಯಿಸುವವರು ಸೇರಿದಂತೆ ಯಾವುದೇ ವ್ಯಕ್ತಿ ಸಂಬಂಧಿತ ಇಆರ್‌ಒಗೆ ಅರ್ಜಿ ಸಲ್ಲಿಸಿ ನಿರಂತರ ಪರಿಷ್ಕರಣೆ ಪ್ರಕ್ರಿಯೆಯಡಿ ಹೆಸರು ಸೇರ್ಪಡೆಗೆ ಮನವಿ ಮಾಡಬಹುದು. ಈ ಪ್ರಕ್ರಿಯೆಗೆ ಅನುಕೂಲವಾಗುವಂತೆ ಸಿಇಒಗಳು, ಡಿಇಒಗಳು ಮತ್ತು ಇಆರ್‌ಒಗಳು ತಕ್ಷಣ ವಿಶೇಷ ಅಭಿಯಾನ ಆರಂಭಿಸಲಿದ್ದಾರೆ.
ಇದಲ್ಲದೆ, ಆಯೋಗದ ಎಲ್ಲ ಸಭೆಗಳ ಕಾರ್ಯಸೂಚಿಯನ್ನು ಮುಂಚಿತವಾಗಿ ಹಂಚಿಕೊಳ್ಳುವುದು, ಸಭೆಯ ನಡಾವಳಿಗಳನ್ನು ಹೊರಡಿಸುವುದು, ಎಲ್ಲ ಅಧಿಕಾರಿಗಳ ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನ ವರದಿಗಳನ್ನು ಪ್ರತಿ ವರ್ಷ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸುವುದು ಹಾಗೂ ಅಧಿಕಾರಿಗಳ ವಿದೇಶ ಪ್ರವಾಸಗಳಿಗೆ ಆಯೋಗದ ಅನುಮೋದನೆ ಪಡೆಯುವುದು ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.


