ನನಗೂ ಫೋನ್ ಬಂದಿತ್ತು ಎನ್ನುತ್ತಲೇ ಕೇಂದ್ರದ ಮಸೂದೆಗೆ ಬೆಂಬಲ ಸೂಚಿಸಿದ ಶರದ್ ಪವಾರ್‌ಗೆ ಉದ್ಧವ್ ಠಾಕ್ರೆ ನೇರ ಸವಾಲು ಹಾಕಿದ್ದಾರೆ. ಮಹಾ ವಿಕಾಸ್ ಅಘಾಡಿ ಮೈತ್ರಿಯು ಅಂತ್ಯದತ್ತ ಸಾಗುತ್ತಿದೆಯೇ? ಮಹಾ ರಾಜಕೀಯದಲ್ಲಿ ಸೃಷ್ಟಿಯಾದ ಬಿಗ್ ಟ್ವಿಸ್ಟ್‌ನ ಸಂಪೂರ್ಣ ವಿವರ ಇಲ್ಲಿದೆ.

ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬೆಂಬಲ ಸೂಚಿಸಿರುವ ಬೆನ್ನಲ್ಲೇ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪವಾರ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದರಿಂದ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು, 'ಮಹಾ ಮೈತ್ರಿಗೂ ಎಳ್ಳುನೀರು ಬಿಡಲಾಗುತ್ತದೆಯೇ?' ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಉದ್ಧವ್ ಠಾಕ್ರೆ ನೀಡಿದ ಖಡಕ್ ಟಾಂಗ್!

ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉದ್ಧವ್ ಠಾಕ್ರೆ, ಮಸೂದೆ ಬೆಂಬಲಿಸುವಂತೆ ನನಗೂ ದೆಹಲಿಯಿಂದ ಫೋನ್ ಮತ್ತು ಆಫರ್ ಬಂದಿತ್ತು. ಆದರೆ ನಾನು ಮಹಾರಾಷ್ಟ್ರದ ಹಿತಾಸಕ್ತಿಗೆ ಧಕ್ಕೆಯಾಗುವ ನಿರ್ಧಾರ ತೆಗೆದುಕೊಳ್ಳಲಿಲ್ಲ. ಬಹುಶಃ ಶರದ್ ಪವಾರ್ ಅವರಿಗೆ ಬೇರೆ ಯಾವುದೋ ಫೋನ್ ಬಂದಿರಬೇಕು" ಎಂದು ವ್ಯಂಗ್ಯವಾಡಿದ್ದಾರೆ. ಎರಡು ದೋಣಿಗಳ ಪಯಣ ಬೇಡ' ಎಚ್ಚರಿಕೆ: ಶರದ್ ಪವಾರ್ ಅವರಿಗೆ ನೇರವಾಗಿ ಮನವಿ ಮಾಡಿರುವ ಉದ್ಧವ್, "ನೀವು ಎರಡು ದೋಣಿಗಳ ಮೇಲೆ ಕಾಲಿಟ್ಟು ಸವಾರಿ ಮಾಡಲು ಸಾಧ್ಯವಿಲ್ಲ. ಒಂದೋ ಪ್ರಜಾಪ್ರಭುತ್ವ ಮತ್ತು ಮಹಾರಾಷ್ಟ್ರದ ಪರ ನಿಲ್ಲಿ, ಇಲ್ಲವೇ ಬಿಜೆಪಿ ಪರ ನಿಲ್ಲಿ. ನಿಮ್ಮ ನಿರ್ಧಾರವನ್ನು ಮತ್ತೊಮ್ಮೆ ಮರುಪರಿಶೀಲಿಸಿ ಎಂದು ತಾಕೀತು ಮಾಡಿದ್ದಾರೆ.

ಮಹಾ ಮೈತ್ರಿ ಮುರಿಯುವ ಹಂತಕ್ಕೆ ಬಂದಿದ್ದೇಕೆ?

ಇತ್ತೀಚೆಗಷ್ಟೇ ರಾಜ್ಯಸಭಾ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಬಣಗಳ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಈಗ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ಮಸೂದೆಗೆ ಎನ್‌ಸಿಪಿ ಬೆಂಬಲ ನೀಡಲು ಮುಂದಾಗಿರುವುದು ಉದ್ಧವ್ ಮತ್ತು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ಇತ್ತ, ಚೆನ್ನೈನಲ್ಲಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಇಂದು ಸಂಜೆ ಮುಂಬೈಗೆ ಆಗಮಿಸಿ, ಆಸ್ಪತ್ರೆಯಲ್ಲಿರುವ ಶರದ್ ಪವಾರ್ ಅವರ ಮನವೊಲಿಸಲು ಕೊನೆಯ ಕ್ಷಣದ ಕಸರತ್ತು ನಡೆಸಲಿದ್ದಾರೆ.

ಮಹಾರಾಷ್ಟ್ರಕ್ಕೆ ಆಗುವ ಸಂಖ್ಯಾಬಲದ ಅನ್ಯಾಯದ ಲೆಕ್ಕಾಚಾರ!

ಕೇವಲ ಸ್ಥಾನಗಳ ಸಂಖ್ಯೆ ಹೆಚ್ಚಾದರೆ ಸಾಲದು, ಇತರ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದ ಪ್ರಾತಿನಿಧ್ಯ ಕುಸಿಯಲಿದೆ ಎಂದು ಉದ್ಧವ್ ಠಾಕ್ರೆ ಅಂಕಿಅಂಶಗಳ ಸಮೇತ ವಿವರಿಸಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ 48 ಮತ್ತು ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಸ್ಥಾನಗಳಿವೆ (ವ್ಯತ್ಯಾಸ 32 ಸೀಟ್). ಮಸೂದೆಯಂತೆ ಶೇ. 50 ರಷ್ಟು ಸ್ಥಾನಗಳು ಹೆಚ್ಚಾದರೆ ಮಹಾರಾಷ್ಟ್ರದ ಸ್ಥಾನಗಳು 72ಕ್ಕೆ ಏರುತ್ತವೆ, ಆದರೆ ಉತ್ತರ ಪ್ರದೇಶದ ಸ್ಥಾನಗಳು ಬರೋಬ್ಬರಿ 120ಕ್ಕೆ ಏರಿಕೆಯಾಗುತ್ತವೆ. ಅಂದರೆ ಉತ್ತರ ಪ್ರದೇಶಕ್ಕೆ ಒಂದೇ ಬಾರಿಗೆ 40 ಹೊಸ ಸ್ಥಾನಗಳು ಸಿಗಲಿದ್ದು, ಮಹಾರಾಷ್ಟ್ರ ಮತ್ತು ಯುಪಿ ನಡುವಿನ ಅಂತರ 48 ಸ್ಥಾನಗಳಿಗೆ ಹಿಗ್ಗಲಿದೆ. ಈ ಸರಳ ಸತ್ಯ ನನಗೆ ಅರ್ಥವಾಗುವುದಾದರೆ, ಹಿರಿಯರಾದ ಶರದ್ ಪವಾರ್ ಅವರಿಗೂ ಖಂಡಿತ ಅರ್ಥವಾಗಿರುತ್ತದೆ ಎಂದು ಠಾಕ್ರೆ ಚಾಟಿ ಬೀಸಿದ್ದಾರೆ.

ಪಕ್ಷಕ್ಕಿಂತ ದೇಶ ಮತ್ತು ರಾಜ್ಯದ ಹಿತಾಸಕ್ತಿಯೇ ಮುಖ್ಯ!

ನನಗೂ ಆಫರ್ ಬಂದಿತ್ತು, ಆದರೆ ನಾನು ನನ್ನ ಪಕ್ಷದ ಲಾಭಕ್ಕಿಂತ ದೇಶ ಮತ್ತು ಮಹಾರಾಷ್ಟ್ರದ ಹಿತಾಸಕ್ತಿಯನ್ನು ಮುಖ್ಯವಾಗಿಟ್ಟುಕೊಂಡು ಮಸೂದೆಯನ್ನು ವಿರೋಧಿಸುತ್ತಿದ್ದೇನೆ. ಕೇವಲ ಮಹಿಳಾ ಮೀಸಲಾತಿ ಜಾರಿಗೆ ಪ್ರತ್ಯೇಕ ಮಸೂದೆ ತಂದರೆ ನಾವು ಖಂಡಿತ ಬೆಂಬಲ ನೀಡುತ್ತೇವೆ. ಆದರೆ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಾಡಿ ಮತಗಳನ್ನು ಕದಿಯುವ ಮತ್ತು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ಬಿಜೆಪಿ ಹುನ್ನಾರಕ್ಕೆ ನಾವು ಬಲಿಯಾಗುವುದಿಲ್ಲ" ಎಂದು ಉದ್ಧವ್ ಸ್ಪಷ್ಟಪಡಿಸಿದ್ದಾರೆ.