ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯೊಬ್ಬಳು ಸೇತುವೆಯಿಂದ ನದಿಗೆ ಹಾರಿದ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯು ಇಂದಿನ ಮಕ್ಕಳ ಸೂಕ್ಷ್ಮ ಮನಸ್ಥಿತಿ ಮತ್ತು ಪಾಲಕರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತೀವ್ರ ಆತಂಕವನ್ನು ಹುಟ್ಟುಹಾಕಿದೆ. ಬಾಲಕಿಯ ಮುಂದಿನ ಸ್ಥಿತಿ ಇನ್ನೂ ತಿಳಿದುಬಂದಿಲ್ಲ.
ಬದುಕನ್ನು ಎದುರಿಸಲಾಗದ ಮನಸ್ಥಿತಿ ಇಂದು ಚಿಕ್ಕ ವಯಸ್ಸಿನಲ್ಲಿಯೇ ಆಗುತ್ತಿರುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ. ಇಂದು ಚಿಕ್ಕಪುಟ್ಟ ವಿಷಯಕ್ಕೂ ಮಕ್ಕಳೇ ಸಾವಿನ ಹಾದಿ ಹಿಡಿಯುತ್ತಿರುವ ವರದಿಗಳಾಗುತ್ತಲೇ ಇರುತ್ತವೆ. ಮೊಬೈಲ್ ಫೋನ್ ಕೊಡಿಸಿಲ್ಲವೆಂದು, ಶಾಲೆಯಲ್ಲಿ ಶಿಕ್ಷಕರು ಬೈದರೆಂದು, ಅಪ್ಪ-ಅಮ್ಮ ಹೊಡೆದರೆಂದು, ಸ್ನೇಹಿತರು ಏನೋ ಲೇವಡಿ ಮಾಡಿದರೆಂದು... ಹೀಗೆ ಕಾರಣಗಳೇ ಬೇಕೆಂದಿಲ್ಲ. ಎಳವೆಯಲ್ಲಿಯೇ ಮಕ್ಕಳ ಮನಸ್ಥಿತಿ ಅತ್ಯಂತ ಅಪಾಯಕಾರಿ ಮಟ್ಟವನ್ನು ತಲುಪಿ ಬಿಟ್ಟಿದೆ. ಅದೇ ಇನ್ನೊಂದೆಡೆ, ಈ ಚಿಕ್ಕ ವಯಸ್ಸಿನಲ್ಲಿಯೇ ಪ್ರಬುದ್ಧರಂತೆ ವರ್ತಿಸಿ ತಮ್ಮ ಜೀವನವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ ಕೆಲವು ಮಕ್ಕಳು. ಕೊನೆಗೆ ಅವರ ಕಂಡುಕೊಳ್ಳುವುದು ಸಾವಿನ ಹಾದಿ.
ಬೆಚ್ಚಿಬೀಳಿಸೋ ವಿಡಿಯೋ
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬೆಚ್ಚಿಬೀಳಿಸೋ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದು ಎಲ್ಲಿಯ ವಿಡಿಯೋ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಇದನ್ನು ನೋಡಿದರೆ ಮಾತ್ರ ಎಂಥವರಿಗೂ ಆಘಾತವಾಗುತ್ತದೆ. ಇದರಲ್ಲಿ ಶಾಲಾ ಬಾಲಕಿಯೊಬ್ಬಳು ಶಾಲೆಯ ಸಮವಸ್ತ್ರ ಮತ್ತು ಬ್ಯಾಗ್ ಹಿಡಿದು ಹೋಗುವುದನ್ನು ನೋಡಬಹುದು. ಅಲ್ಲಿ ವಾಹನ ಸಂಚಾರವೂ ನಡೆಯುತ್ತಿದೆ. ಅದರ ನಡುವೆಯೇ, ಸೇತುವೆಯ ಮೇಲೆ ನಿಂತು ನದಿಗೆ ಹಾರಿದ್ದಾಳೆ. ಇಡೀ ಘಟನೆಯನ್ನು ಹತ್ತಿರದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಸೇತುವೆಯ ಮೇಲೆ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಬಾಲಕಿಯನ್ನು ನೋಡಿ ಓಡಿ ಬಂದಿದ್ದಾರೆ. ಆಕೆಯ ರಕ್ಷಣೆಗೆ ಧಾವಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಆದರೆ ದುರದೃಷ್ಟವಶಾತ್, ಆಕೆಯನ್ನು ತಲುಪುವ ಮೊದಲೇ ಬಾಲಕಿ ನದಿಗೆ ಹಾರಿದ್ದಾಳೆ.
ಜಮಾಯಿಸಿದ ಜನರು
ಹುಡುಗಿ ನದಿಗೆ ಹಾರಿದ ತಕ್ಷಣ, ಹತ್ತಿರದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಜೋರಾಗಿ ಕೂಗಲು ಪ್ರಾರಂಭಿಸಿರುವುದನ್ನು ನೋಡಬಹುದು. ಬಳಿಕ ಅಲ್ಲಿ ಹೋಗುತ್ತಿದ್ದ ಜನರು, ವಾಹನ ಸವಾರರು ಓಡಿ ಬಂದು ಅಲ್ಲಿ ಜಮಾಯಿಸಿದ್ದಾರೆ. ಸಿಸಿಟಿವಿ ಫುಟೇಜ್ನ ಇಷ್ಟು ದೃಶ್ಯಗಳು ಮಾತ್ರ ವೈರಲ್ ಆಗಿವೆ. ಮುಂದೇನಾಯಿತು ಎನ್ನುವುದು ತಿಳಿದಿಲ್ಲ. ಆಕೆಯನ್ನು ರಕ್ಷಣೆ ಮಾಡಲಾಯಿತೊ ಅಥವಾ ಬಾಲಕಿ ಜೀವ ಕಳೆದುಕೊಂಡಳೋ ಗೊತ್ತಿಲ್ಲ. ಇದಿನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ಶಾಕಿಂಗ್ ವಿಡಿಯೋ ಮಾತ್ರ ಎಲ್ಲರನ್ನೂ ಅದರಲ್ಲಿಯೂ ಹೆಚ್ಚಾಗಿ ಚಿಕ್ಕಮಕ್ಕಳು ಇರುವ ಅಪ್ಪ-ಅಮ್ಮಂದಿರನ್ನು ಮಾತ್ರ ಬೆಚ್ಚಿಬೀಳಿಸಿದೆ.
ಪಾಲಕರ ಆತಂಕ
ಇಂದಿನ ಮಕ್ಕಳಿಗೆ ಒಂದು ಹೇಳಿದರೆ ಕಡಿಮೆ, ಎರಡು ಹೇಳಿದರೆ ಹೆಚ್ಚು. ಇಂಥ ಸ್ಥಿತಿಯಲ್ಲಿ ನಾವಿದ್ದೇವೆ. ಅವರನ್ನು ಹೇಗೆ ಸಾಕುವುದೋ, ಹೇಗೆ ದೊಡ್ಡ ಮಾಡುವುದೋ, ಅವರ ಮನಸ್ಸಿನಲ್ಲಿ ಏನು ಯೋಚನೆ ಬರುತ್ತಿರುತ್ತದೆಯೋ, ಶಾಲಾ-ಕಾಲೇಜುಗಳಲ್ಲಿ ಏನು ಆಗುತ್ತಿರುತ್ತದೆಯೋ ಯಾವುದೂ ತಿಳಿಯುವುದಿಲ್ಲ. ಪೇರೆಂಟಿಂಗ್ ಎನ್ನುವುದು ಇಂದು ಅತಿದೊಡ್ಡ ಜವಾಬ್ದಾರಿಯಾಗಿದೆ ಎಂದು ಹಲವರು ಈ ವಿಡಿಯೋಗೆ ಕಮೆಂಟ್ ಮೂಲಕ ತಮ್ಮ ದುಃಖ ವ್ಯಕ್ತಪಡಿಸುತ್ತಿದ್ದಾರೆ. newsarenaindia ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.


