ಕೋರಮಂಡಲ್ ಎಕ್ಸ್‌ಪ್ರೆಸ್ ದುರಂತದ ಶವಗಳನ್ನು ಇಟ್ಟ ಶಾಲೆಯನ್ನು ಧ್ವಂಸ ಮಾಡಿದ ಸರ್ಕಾರ!
ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ದುರಂತದ ವೇಳೆ ಬಾಲಸೋರ್ ಜಿಲ್ಲೆಯ ಬಹನಾಗಾ ಗ್ರಾಮದ ಈ ಶಾಲೆಯನ್ನು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾಗಿತ್ತು. ಆದರೆ, ಈಗ ಆತ್ಮಗಳ ಭಯದಿಂದ ವಿದ್ಯಾರ್ಥಿಗಳು ಶಾಲೆಗೆ ಬರಲು ನಿರಾಕರಿಸುತ್ತಿದ್ದಾರೆ. ಶುಕ್ರವಾರ ಒಡಿಶಾ ಸರ್ಕಾರವು ಈ ಶಾಲೆಯನ್ನು ಕೆಡವಿ ಹೊಸ ಶಾಲೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ.
ಭುವನೇಶ್ವರ (ಜೂ.9): ಈ ಶತಮಾನದ ಅತ್ಯಂತ ಭೀಕರ ರೈಲು ದುರಂತ ಜೂನ್ 2 ರಂದು ಒಡಿಶಾದ ಬಹನಾಗಾ ಗ್ರಾಮದಲ್ಲಿ ನಡೆದಿತ್ತು. ತ್ರಿವಳಿ ರೈಲು ದುರಂತದಲ್ಲಿ ಒಟ್ಟು 288 ಜನರ ಸಾವು ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಈ ರೈಲು ಅಪಘಾತದಲ್ಲಿ ಮೃತಪಟ್ಟವರ ದೇಹಗಳನ್ನು ಬಾಲಸೋರ್‌ನ ಸರ್ಕಾರಿ ಶಾಲೆಯೊಂದರಲ್ಲಿ ಇರಿಸಲಾಗಿತ್ತು. ಈಗ ಶವಗಳ ವಿಲೇವಾರಿಯಾಗಿದೆ. ಆಗಿದೆ ಶಾಲೆಯನ್ನು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಿರುವುದಕ್ಕೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತ್ಮಗಳ ಭಯದ ಕಾರಣದಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು ಹಾಕಿದ್ದರು. ಸ್ಥಳೀಯ ಜಿಲ್ಲಾಧಿಕಾರಿ ಹಾಗೂ ಇತರ ಸರ್ಕಾರಿ ಅಧಿಕಾರಿಗಳು ಇಂಥ ಮೂಢ ನಂಬಿಕೆಗಳನ್ನು ನಂಬಬೇಡಿ, ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಮಾಡಿರುವ ಮನವಿಗೂ ಪೋಷಕರು ಒಪ್ಪಿಲ್ಲ. ತಾತ್ಕಾಲಿಕ ಶವಾಗಾರವನ್ನಾಗಿ ಮಾಡಿದ್ದ ಶಾಲೆಯನ್ನು ನೆಲಸಮ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿತ್ತು. ಕೊನೆಗೆ ಜನರ ಮನವಿಗೆ ಒಪ್ಪಿದ ಒಡಿಶಾ ಸರ್ಕಾರ ಈ ಶಾಲೆಯನ್ನು ನೆಲಸಮಗೊಳಿಸಿದೆ. ಶುಕ್ರವಾರ ಈ ಕುರಿತಾಗಿ ಆದೇಶ ನೀಡಿದ ಸರ್ಕಾರ, ಬಹನಾಗಾ ಗ್ರಾಮದಲ್ಲಿರುವ ಶಾಲೆಯನ್ನು ಕೆಡವಿ ಮರುನಿರ್ಮಾಣ ಮಾಡೋದಾಗಿ ಘೋಷಣೆ ಮಾಡಿದೆ.
ಸ್ಥಳೀಯ ವಿದ್ಯಾರ್ಥಿಗಳು ಆತ್ಮಗಳ ಭಯದಿಂದ ಶಾಲೆಯಲ್ಲಿ ಓದಲು ನಿರಾಕರಿಸುತ್ತಿದ್ದಾರೆ. ಇದರ ಬಳಿಕ ಶವಾಗಾರವಾಗಿ ಬಳಕೆಯಾಗಿದ್ದ ಶಾಲಾ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೂಚನೆ ನೀಡಿದ್ದಾರೆ. ಶಾಲೆಯ ಹಂಚುಗಳು ಹಾಗೂ ಇತರ ವಸ್ತುಗಳನ್ನು ತೆಗೆಯುವ ಪ್ರಕ್ರಿಯೆ ಆರಂಭವಾಗಿದ್ದು, ಶನಿವಾರ ಜೆಸಿಬಿ ಬಳಸಿ ಕಟ್ಟಡದ ಗೋಡೆಗಳನ್ನು ಕೆಡವಲಾಗುತ್ತದೆ.
ಶಾಲೆಯ ಒಂದು ಭಾಗ ಮಾತ್ರವೇ ಧ್ವಂಸ: ಒಡಿಶಾದ ಮುಖ್ಯ ಕಾರ್ಯದರ್ಶಿ ಪಿ.ಕೆ.ಜೆನಾ ಮತ್ತು ಮುಖ್ಯಮಂತ್ರಿಗಳ ಕಾರ್ಯದರ್ಶಿ ಪಿ.ಕೆ.ಪಾಂಡಿಯನ್ ಸ್ಥಳೀಯ ಆಡಳಿತ ಮತ್ತು ಶಾಲಾ ಆಡಳಿತದೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಸಹ ಉಪಸ್ಥಿತರಿದ್ದರು. ಬಾಲಸೋರ್ ಜಿಲ್ಲಾಧಿಕಾರಿ ಶಿಂಧೆ ದತ್ತಾತ್ರೇಯ ಮಾತನಾಡಿ, ಇಡೀ ಶಾಲೆಯನ್ನು ಕೆಡವುವುದಿಲ್ಲ ಆದರೆ ಶಾಲೆಯ ಒಂದು ಭಾಗವನ್ನು ಮಾತ್ರ ಕೆಡವಲಾಗುತ್ತದೆ. ಈ ಭಾಗವನ್ನು ಊಟದ ಹಾಲ್ ಆಗಿ ಬಳಸಲಾಗುತ್ತಿತ್ತು. 65 ವರ್ಷಗಳಷ್ಟು ಹಳೆಯದಾದ ಈ ಶಾಲಾ ಕಟ್ಟಡದಲ್ಲಿ ಬಿಳಿ ಹೊದಿಕೆಯಲ್ಲಿ ಸುತ್ತಿದ ಮೃತದೇಹಗಳನ್ನು ಇಡಲಾಗಿತ್ತು. ನಂತರ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರಿದ್ದರು. ಕಟ್ಟಡವನ್ನು ನೆಲಸಮಗೊಳಿಸುವಂತೆ ಶಾಲಾ ಆಡಳಿತ ಸಮಿತಿ (ಎಸ್‌ಎಂಸಿ) ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು.
ಶಾಲೆಯಲ್ಲಿ ಓದುತ್ತಿರುವ ಸಣ್ಣ ಮಕ್ಕಳು ಭಯಭೀತರಾಗಿದ್ದಾರೆ ಎಂದು ಬಹನಾಗಾ ಶಾಲೆಯ ಆಡಳಿತ ಮಂಡಳಿ ತಿಳಿಸಿದೆ. ಮಕ್ಕಳ ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸಲು ‘ಆಧ್ಯಾತ್ಮಿಕ ಕಾರ್ಯಕ್ರಮ’ಗಳನ್ನು ಆಯೋಜಿಸಲು ಮತ್ತು ಆಚರಣೆಗಳನ್ನು ನಡೆಸಲು ಶಾಲೆಯು ಯೋಜಿಸಿದೆ. ಶಾಲೆಯ ಕೆಲವು ಹಿರಿಯ ವಿದ್ಯಾರ್ಥಿಗಳು ಮತ್ತು ಎನ್‌ಸಿಸಿ ಕೆಡೆಟ್‌ಗಳು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಮಕ್ಕಳ ಮನಸ್ಸಿನಲ್ಲಿ ಭಯ ಆವರಿಸಿದೆ: ಶಾಲೆಯ ಕಟ್ಟಡದಲ್ಲಿ ಇಟ್ಟಿದ್ದ ಮೃತದೇಹಗಳ ದೃಶ್ಯವನ್ನು ಮಕ್ಕಳು ಟಿವಿಯಲ್ಲಿ ನೋಡಿದ್ದಾರೆ ಎಂದು ಶಾಲಾ ಸಮಿತಿಯ ಸದಸ್ಯರೊಬ್ಬರು ಹೇಳುತ್ತಾರೆ. ಇದಾದ ಬಳಿಕ ಇದೀಗ ಜೂನ್ 16ರಿಂದ ಶಾಲೆಗೆ ಬರಲು ಮಕ್ಕಳು ಭಯಪಡುವಂತಾಗಿದೆ. ಶಾಲಾ ಕಟ್ಟಡದಲ್ಲಿಯೇ ಇಷ್ಟೊಂದು ಮೃತದೇಹಗಳನ್ನು ಇಟ್ಟಿದ್ದನ್ನು ಅವರು ಮರೆಯುವುದು ಕಷ್ಟವಾಗಲಿದೆ ಎಂದಿದ್ದಾರೆ.
ಆತ್ಮಗಳ ಭಯ? ಒಡಿಸಾ ರೈಲು ದುರಂತದಲ್ಲಿ ಮೃತರ ಶವ ಇಟ್ಟಿದ್ದ ಶಾಲೆಗೆ ಬರಲು ಮಕ್ಕಳ ಹಿಂದೇಟು
ಶಾಲಾ ಸಮಿತಿಯು ಕೇವಲ 3 ತರಗತಿಗಳಲ್ಲಿ ಶವಗಳನ್ನು ಇಡಲು ಅನುಮತಿ ನೀಡಿತ್ತು, ಆದರೆ ನಂತರ ಜಿಲ್ಲಾಡಳಿತವು ಮೃತ ದೇಹಗಳನ್ನು ಗುರುತಿಸಲು ತೆರೆದ ಸಭಾಂಗಣದಲ್ಲಿ ಇರಿಸಿತ್ತು. ಶಾಲೆಯಲ್ಲಿ ಓದುತ್ತಿರುವ ಮಗುವಿನ ತಂದೆ ಸುಜಿತ್ ಸಾಹು, 'ನಮ್ಮ ಮಕ್ಕಳು ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾರೆ. ಮಕ್ಕಳ ತಾಯಂದಿರೂ ಈ ಶಾಲೆಗೆ ಕಳುಹಿಸಲು ಮುಂದಾಗುತ್ತಿಲ್ಲ. ಕೆಲವು ಪೋಷಕರು ತಮ್ಮ ಮಕ್ಕಳ ಶಾಲೆಯನ್ನು ಬದಲಾಯಿಸಲು ಯೋಚಿಸುತ್ತಿದ್ದಾರೆ' ಎಂದಿದ್ದಾರೆ.
ನಾನು ಸತ್ತಿಲ್ಲ, ನೀರು ಕೊಡಿ; ರೈಲು ದುರಂತದ ಶವಗಳ ರಾಶಿಯಲ್ಲಿದ್ದ ವ್ಯಕ್ತಿಯ ರಕ್ಷಣೆ!