ಹಿಂದೂ, ಸಿಖ್‌ ಅಥವಾ ಬೌದ್ಧ ಧರ್ಮ ಹೊರತು ಬೇರಿನ್ಯಾವುದೇ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ ಆ ಕ್ಷಣದಿಂದಲೇ ಪರಿಶಿಷ್ಟ ಜಾತಿಯ ಸ್ಥಾನಮಾನ ಕಳೆದುಕೊಳ್ಳುತ್ತಾನೆ. ಅಂಥ ವ್ಯಕ್ತಿ ಎಸ್ಸಿ,ಎಸ್ಟಿ ಕಾಯ್ದೆಯಡಿ ಕಾನೂನಿನ ರಕ್ಷಣೆಯಾಗಲಿ, ಮೀಸಲಾತಿಯ ಲಾಭವನ್ನಾಗಲಿ ಪಡೆಯಲು ಅನರ್ಹನಾಗುತ್ತಾನೆ

ನವದೆಹಲಿ : ಹಿಂದೂ, ಸಿಖ್‌ ಅಥವಾ ಬೌದ್ಧ ಧರ್ಮ ಹೊರತು ಬೇರಿನ್ಯಾವುದೇ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ ಆ ಕ್ಷಣದಿಂದಲೇ ಪರಿಶಿಷ್ಟ ಜಾತಿಯ ಸ್ಥಾನಮಾನ ಕಳೆದುಕೊಳ್ಳುತ್ತಾನೆ. ಅಂಥ ವ್ಯಕ್ತಿ ಎಸ್ಸಿ,ಎಸ್ಟಿ ಕಾಯ್ದೆಯಡಿ ಕಾನೂನಿನ ರಕ್ಷಣೆಯಾಗಲಿ, ಮೀಸಲಾತಿಯ ಲಾಭವನ್ನಾಗಲಿ ಪಡೆಯಲು ಅನರ್ಹನಾಗುತ್ತಾನೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

Add Asianetnews Kannada as a Preferred SourcegooglePreferred

ಈ ಕುರಿತು ಆಂಧ್ರಪ್ರದೇಶ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಎತ್ತಿಹಿಡಿದ ನ್ಯಾ.ಪ್ರಶಾಂತ್‌ ಕುಮಾರ್‌ ಮಿಶ್ರಾ ಮತ್ತು ನ್ಯಾ.ಎನ್‌.ವಿ. ಅಂಜಾರಿಯಾ ಅವರಿದ್ದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಈ ತೀರ್ಪು ನೀಡಿದೆ.

ಸಂವಿಧಾನದ 1950ನೇ (ಅನುಸೂಚಿತ ಜಾತಿ) ಆದೇಶದ ಕ್ಲಾಸ್‌ 3ರಡಿ ಎಸ್ಸಿ ಎಂದು ಪರಿಗಣಿಸಲ್ಪಟ್ಟ ವ್ಯಕ್ತಿಯಷ್ಟೇ ಸಂವಿಧಾನ, ಸಂಸತ್ತು ಅಥವಾ ವಿಧಾನಸಭೆಗಳು ಜಾರಿ ಮಾಡಿದ ಕಾನೂನಿನಡಿ ಶಾಸನಬದ್ಧ ಅನುಕೂಲಗಳು, ರಕ್ಷಣೆ ಅಥವಾ ಮೀಸಲಾತಿಗೆ ಅನರ್ಹನಾಗುತ್ತಾನೆ. ಯಾವುದೇ ವ್ಯಕ್ತಿ ತನ್ನನ್ನು ತಾನು ಪರಿಶಿಷ್ಟ ಜಾತಿಗೆ ಸೇರಿದವನು ಎಂದು ಕ್ಲೇಮ್‌ ಮಾಡಿಕೊಳ್ಳಬೇಕಿದ್ದರೆ ಆತ ಕ್ಲಾಸ್‌ 3ರಲ್ಲಿ ಹೇಳಲಾದ ಧರ್ಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಕೋರ್ಟ್‌ ಹೇಳಿದೆ.

ಆಂಧ್ರ ಹೈಕೋರ್ಟ್‌ ಏನು ಹೇಳಿತ್ತು?:

ಆಂಧ್ರಪ್ರದೇಶ ಹೈಕೋರ್ಟ್‌ ಏ.30, 2025ರಂದು ನೀಡಿದ್ದ ತೀರ್ಪಿನಲ್ಲಿ, ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡು, ಅದನ್ನು ಪಾಲನೆ ಮಾಡಿಕೊಂಡು ಬಂದಿರುವ ವ್ಯಕ್ತಿ, ತಾನು ಎಸ್ಸಿ ಸಮುದಾಯಕಕ್ಕೆ ಸೇರಿದವನು ಎಂದು ಕ್ಲೇಮ್‌ ಮಾಡಿಕೊಳ್ಳಲು ಸಾಧ್ಯವಿಲ್ಲ. ಕ್ರಿಶ್ಚಿಯನ್‌ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ. ಹೀಗಾಗಿ ಎಸ್ಸಿ ಕಾಯ್ದೆ ಅನ್ವಯಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಈ ಪ್ರಕರಣದಲ್ಲಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡು ಪಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದವರ ವಿರುದ್ಧ ಎಸ್ಸಿ,ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಆಂಧ್ರ ಹೈಕೋರ್ಟು, ಆತನ ಕೇಸು ತಿರಸ್ಕರಿಸಿತ್ತು.

ಸುಪ್ರೀಂ ಹೇಳಿದ್ದೇನು?

- ಹಿಂದೂ, ಸಿಖ್‌ ಅಥವಾ ಭೌದ್ಧ ಧರ್ಮದಲ್ಲಿ ಇದ್ದ ವ್ಯಕ್ತಿ ಮಾತ್ರವೇ ಪರಿಶಿಷ್ಟ ಜಾತಿ ಸ್ಥಾನಮಾನ ಪಡೆಯಲು ಅರ್ಹ

- ಕ್ರೈಸ್ತ, ಇಸ್ಲಾಂನಲ್ಲಿ ಜಾತಿ ಇಲ್ಲ. ಹೀಗಾಗಿ ಆ ಧರ್ಮಕ್ಕೆ ಮತಾಂತರ ಆದವರು ಎಸ್ಸಿ ಸ್ಥಾನಮಾನ ಕೋರುವಂತಿಲ್ಲ

- ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಕ್ಲೇಮ್‌ಗೆ ಅವರು ಕ್ಲಾಸ್‌ 3ರಲ್ಲಿ ಹೇಳಲಾದ ಧರ್ಮ ಪಾಲಿಸುವುದು ಕಡ್ಡಾಯ

- ಒಂದು ವೇಳೆ ಎಸ್ಸಿ ಸಮುದಾಯದ ವ್ಯಕ್ತಿ ಕ್ರೈಸ್ತ, ಇಸ್ಲಾಂಗೆ ಮತಾಂತರ ಆದರೆ ಅವರು ಎಸ್ಸಿ ಸ್ಥಾನಕ್ಕೆ ಅರ್ಹರಲ್ಲ

ಏನಿದು ಪ್ರಕರಣ?

ಎಸ್‌ಸಿ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಕ್ರೈಸ್ತ ಧರ್ಮಕ್ಕೆ ಸೇರ್ಪಡೆಯಾಗಿದ್ದರು. ಬಳಿಕ ಪಾಸ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು, ತಮ್ಮ ವೇಳೆ ಕೆಲ ವ್ಯಕ್ತಿಗಳು ತಮಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕ್ರಮ ಕೋರಿದ್ದರು. ಆದರೆ ದೂರುದಾರರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿರುವ ಕಾರಣ ಎಸ್ಸಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು ಸಾಧ್ಯವಿಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್‌ ಕಳೆದ ವರ್ಷ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಇದೀಗ ಮಹತ್ವದ ಆದೇಶ ಹೊರಡಿಸಿದೆ.