* ಸಂಸದ ಪ್ರಜ್ವಲ್ ರೇವಣ್ಣಗೆ ಆದಾಯ ತೆರಿಗೆ ತನಿಖೆ ಶಾಕ್?* ತೆರಿಗೆ ವಂಚನೆ ಆರೋಪ, ಆಯೋಗಕ್ಕೆ ತಪ್ಪು ಮಾಹಿತಿ* ತನಿಖೆ ವಿರುದ್ಧ ಹೈಕೋರ್ಟ್ ಆದೇಶ ರದ್ದು: ಸುಪ್ರೀಂ* ಚುನಾವಣೆ ವೇಳೆ ಪ್ರಜ್ವಲ್ ಸುಳ್ಳು ಆಸ್ತಿ ವಿವರ: ಹಾಸನ ವಕೀಲ ದೂರು* ಆದಾಯ ಮೂಲ ಇಲ್ಲ. ಪಾನ್ ಕೂಡ ಇರಲಿಲ್ಲ. ತೆರಿಗೆ ಪಾವತಿಸಿಲ್ಲ
ನವದೆಹಲಿ(ಫೆ. 16) ಚುನಾವಣಾ ಆಯೋಗಕ್ಕೆ (Election Commission of India) ತಪ್ಪು ಮಾಹಿತಿ ನೀಡಿದ್ದು ಹಾಗೂ ತೆರಿಗೆ (Tax) ವಂಚನೆ ಆರೋಪ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna ) ಅವರಿಗೆ ಇದೀಗ ಸಂಕಷ್ಟಎದುರಾಗಿದೆ. ಪ್ರಜ್ವಲ್ ರೇವಣ್ಣ ಅವರ ಆಸ್ತಿ ಕುರಿತು ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸುವಂತೆ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಹೈಕೋರ್ಟ್‌ಗೆ (Karnataka High Court) ಸೂಚನೆ ನೀಡಿದೆ.
ಈ ಮೂಲಕ ಪ್ರಜ್ವಲ್ ರೇವಣ್ಣ ಅವರಿಗೆ ಆದಾಯ ತೆರಿಗೆ ಇಲಾಖೆಯ ತನಿಖೆಯ ಆತಂಕ ಎದುರಾಗಿದೆ. ಹಾಸನ ಮೂಲದ ವಕೀಲ ಜಿ.ದೇವರಾಜೇ ಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾ.ಸಂಜಯ, ಕಿಶನ್‌ಕೌಲ, ಹಾಗೂ ನ್ಯಾ. ಸುಂದರೇಶ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ.
ಆಸ್ತಿ ಸಲ್ಲಿಕೆ ವಿಚಾರದಲ್ಲಿಯೂ ಪ್ರಜ್ವಲ್ ಪ್ರಕರಣ
ಪ್ರಜ್ವಲ್ ರೇವಣ್ಣ ಅವರು ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ 15ನೇ ವಯಸ್ಸಿನಲ್ಲಿ .23 ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಅದಕ್ಕೆ ಯಾವುದೇ ಮೂಲಗಳಿಲ್ಲ, ಆ ಸಂದರ್ಭ ಅವರ ಬಳಿ ಪಾನ್ ಕಾರ್ಡ್ ಕೂಡ ಇಲ್ಲ. ಅದಕ್ಕಾಗಿ ಆದಾಯ ತೆರಿಗೆಯನ್ನೂ ಪಾವತಿಸಿಲ್ಲ. ಅವರ ಬ್ಯಾಂಕ್ ಖಾತೆಗಳಿಗೂ ಅಫಿಡವಿಟ್‌ನಲ್ಲಿ ತೋರಿಸಿರುವ ಖಾತೆಗಳಿಗೂ ವ್ಯತ್ಯಾಸ ಇದೆ. ಅಲ್ಲದೆ ಅವರು ಗೋಮಾಳವನ್ನೂ ಕಬಳಿಸಿದ್ದಾರೆ ಎಂದು ಆರೋಪಿಸಿದ್ದ ದೇವರಾಜ್ ಈ ಸಂಬಂಧ ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ತಾಂತ್ರಿಕ ಕಾರಣ ನೀಡಿ ಹೈಕೋರ್ಟ್ 2021ರ ಫೆಬ್ರವರಿಯಲ್ಲೇ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದೂರುದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂ ಕೋರ್ಟ್ ಆದೇಶವನ್ನು ದೂರುದಾರ ದೇವರಾಜೇಗೌಡ ಸ್ವಾಗತಿಸಿದ್ದಾರೆ. ನಾವೇನು ಬೇಡಿಕೆ ಇಟ್ಟಿದ್ದೆವೋ ಅದನ್ನು ವಿಚಾರಣೆ ಮಾಡಿ ಎಂದು ಸುಪ್ರೀಂ ಕೋರ್ಟ್ ಹೈಕೋರ್ಟ್‌ಗೆ ಸೂಚಿಸಿದೆ. ಇದರಿಂದ ರಾಜ್ಯದ ಜನತೆಗೆ ಒಳ್ಳೆ ಸಂದೇಶ ಕೊಡಲು ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಆದೇಶ ಬಗ್ಗೆ ರೇವಣ್ಣ, ಪ್ರಜ್ವಲ್ ಬಳಿ ಕೇಳಿ: ಎಚ್‌ಡಿಕೆ: ಕಳೆದ 15-20 ವರ್ಷಗಳಿಂದ ನಮ್ಮ ಕುಟುಂಬ ಬೇರೆಯಾಗಿ ಇರುವ ಕಾರಣ ಸುಪ್ರೀಂಕೋರ್ಟ್ ತನಿಖೆಗೆ ನೀಡಿರುವ ಆದೇಶ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವ್ಯವಹಾರದ ಬಗ್ಗೆ ಅವರನ್ನೇ ಕೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನ್ಯಾಯಾಲಯದ ತೀರ್ಪು ಬಗ್ಗೆ ಅವರ ಕುಟುಂಬ ಯಾವ ರೀತಿ ಹೋರಾಟ ಮಾಡುತ್ತದೋ ಅವರಿಗೆ ಬಿಟ್ಟಿದ್ದು. ಅವರ ವ್ಯವಹಾರ ಬೇರೆ, ನಮ್ಮ ವ್ಯವಹಾರ ಬೇರೆ. ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪ್ರಜ್ವಲ್ ಮತ್ತು ಶಾಸಕ ಎಚ್.ಡಿ.ರೇವಣ್ಣ ಬಳಿಯೇ ಕೇಳಬೇಕು. ಅವರು ಈ ಕುರಿತು ಉತ್ತರ ನೀಡಬೇಕೇ ಹೊರತು ನಾನಲ್ಲ. ಅವರ ವ್ಯವಹಾರದ ಬಗ್ಗೆ ನನ್ನನ್ನು ಕೇಳಿದರೆ, ನಾನು ಏನು ಹೇಳಲು ಸಾಧ್ಯ? ನಮ್ಮ ಕುಟುಂಬ 15-20 ವರ್ಷಗಳಿಂದ ಬೇರೆಯಾಗಿದೆ. ಏನಾದರೂ ಕೇಳುವುದಿದ್ದರೆ, ಅವರನ್ನೇ ಕೇಳಿ ಎಂದಿದ್ದಾರೆ.
