ಸುಳ್ಳು ಆಸ್ತಿ ವಿವರ ಸಲ್ಲಿಕೆ ಆರೋಪ, ಅರ್ಜಿ ವಿಚಾರಣೆಗ ಸುಪ್ರೀಂ ಸೂಚನೆ ಪ್ರಜ್ವಲ್ ರೇವಣ್ಣ ನಾಮಪತ್ರದೊಂದಿಗೆ ಸಲ್ಲಿಸಲಾಗಿದ್ದ ಆಸ್ತಿ ವಿವರದ ಅಫಿಡವಿಟ್ ಬಿಜೆಪಿ ಅಭ್ಯರ್ಥಿ ಎ.ಮಂಜು ಮನವಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್


ಹಾಸನ(ಡಿ.14): ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ(prajwal revanna) ಅವರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಸುಳ್ಳು ಆಸ್ತಿ ವಿವರ ಸಲ್ಲಿಸಿದ್ದಾರೆನ್ನುವ ದೂರಿಗೆ ಸಂಬಂಧಿಸಿ ಹೊಸದಾಗಿ ಅರ್ಜಿ ಪಡೆದು ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌(Supreme Court) ಬುಧವಾರ ಸೂಚನೆ ನೀಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾಮಪತ್ರದೊಂದಿಗೆ ಸಲ್ಲಿಸಲಾಗಿದ್ದ ಆಸ್ತಿ ವಿವರದ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ಹೈಕೋರ್ಟ್‌ ತಿರಸ್ಕರಿಸಿತ್ತು. ಇದರ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ , ಮತ್ತೆ ಅರ್ಜಿ ಪಡೆದು ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಸೂಚಿಸಿದೆ. ಅಲ್ಲದೆ, ಮಂಜು ಅವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನೂ ನೀಡಿದೆ.

ಸುಪ್ರೀಂ ಕೋರ್ಟ್‌ನ ಈ ಸೂಚನೆ ಸಂತಸ ತಂದಿದೆ. ವಿಚಾರಣೆ ನಂತರ ನಮಗೆ ಜಯ ಸಿಗುವ ಭರವಸೆ ಇದೆ ಎಂದು ಅರ್ಜಿದಾರರ ಪರ ವಕೀಲರಾದ ದೇವರಾಜೇಗೌಡ ತಿಳಿಸಿದ್ದಾರೆ.

ಬಿಜೆಪಿಯವ್ರ ಬ್ರಹ್ಮಾಂಡಗಳನ್ನ ಹೇಳಿದ್ರೆ ಸಮಯ ಸಾಕಾಗಲ್ಲ: ಪ್ರಜ್ವಲ್ ರೇವಣ್ಣ

2019ರ ಲೋಕಸಭೆ ಚುನಾವಣೆಯಲ್ಲೂ ತನಿಖೆ ಎದುರಿಸಿದ ಪ್ರಜ್ವಲ್
2019ರ ಲೋಕಸಭೆ ಚುನಾವಣೆ ವೇಳೆ ಹಾಸನ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಸಚಿವ ಎಚ್‌.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಆಸ್ತಿ ವಿವರ ಸಲ್ಲಿಸಿದ್ದಾರೆ ಎಂಬ ಬಗ್ಗೆ ದೂರು ದಾಖಲಾಗಿತ್ತು. ಪ್ರಮಾಣ ಪತ್ರದನ್ವಯ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಚುನಾವಣಾ ಆಧಿಕಾರಿಗಳೂ ಆಗಿರುವ ಹಾಸನ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ವಕೀಲ ಹಾಗೂ ಕೆಡಿಪಿ ಮಾಜಿ ಸದಸ್ಯ ಜಿ.ದೇವರಾಜೇಗೌಡ ಅವರು, ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರವನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿ ಏ.26, 2019ರಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಪ್ರಜ್ವಲ್‌ ರೇವಣ್ಣ ಪ್ರಮಾಣ ಪತ್ರದಲ್ಲಿ ಹಲವಾರು ಸುಳ್ಳು ಮಾಹಿತಿಗಳನ್ನು ನೀಡಿದ್ದು ಅವರ ನಾಮಪತ್ರ ರದ್ದುಗೊಳಿಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೂಲಂಕುಷವಾಗಿ ಪರಿಶೀಲಿಸಿ ವಿವರವಾದ ವರದಿ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗವು ಹಾಸನ ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ನೀಡಿತ್ತು.

ಗಾಂಧಿಯನ್ನೇ ಬಿಟ್ಟಿಲ್ಲ ನಿಮ್ಮನ್ನು ಬಿಡುತ್ತಾ ಬಿಜೆಪಿ?: ಪ್ರಜ್ವಲ್‌ ರೇವಣ್ಣ

2019ರಲ್ಲಿ ಪಜ್ವಲ್ ಆಸ್ತಿ ವಿವರ:
2019ರ ಲೋಕಸಭೆ ಚುನಾವಣೆಗೆ ಪ್ರಜ್ವಲ್ ತಮ್ಮ ಆಸ್ತಿ ವಿವರ ಸಲ್ಲಿಕೆ ಮಾಡಿದ್ದರು. ಈ ವೇಳೆ ಪ್ರಜ್ವಲ್‌ ಒಟ್ಟು ಆಸ್ತಿ .8,13,622 ಆಗಿದ್ದು, ಇದರಲ್ಲಿ .4,89,15,029 ಮೌಲ್ಯದ ಸ್ಥಿರಾಸ್ತಿ, .1,68,86,632 ಮೌಲ್ಯದ ಚರಾಸ್ತಿಗಳೂ ಸೇರಿವೆ. ಇಷ್ಟೇ ಅಲ್ಲದೆ, ಪ್ರಜ್ವಲ್‌ ಅವರು .3.72 ಕೋಟಿ ಖಾಸಗಿ ಸಾಲವನ್ನೂ ಮಾಡಿಕೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ತಂದೆ ರೇವಣ್ಣ, ತಾಯಿ ಭವಾನಿ, ಅನಸೂಯ, ಸಿ.ಎನ್‌. ಪಾಂಡು, ಸಿ.ಎನ್‌. ಪುಟ್ಟಸ್ವಾಮಿಗೌಡ, ಜಯರಾಂ, ಡಿ.ಕೆ.ನಾಗರಾಜ್‌, ಕಾಳೇಗೌಡ, ಬೋರೇಗೌಡ, ಶೈಲ ಅವರಿಂದ ಈ ಸಾಲ ಪಡೆದಿದ್ದಾರೆ.

ಪ್ರಜ್ವಲ್‌ ಹೆಸರಲ್ಲಿ ಒಟ್ಟು 36 ಎಕರೆ ಕೃಷಿ ಭೂಮಿಯೂ ಇದೆ. ಜತೆಗೆ, ಪ್ರಜ್ವಲ್‌ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆಗಳಲ್ಲಿ ಒಟ್ಟು .15.58 ಲಕ್ಷ ನಗದೂ ಇದೆ. ಒಟ್ಟು .37.31 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನೂ ಅವರು ಹೊಂದಿದ್ದಾರೆ. 18 ಹಸುಗಳು, 2 ಎತ್ತುಗಳನ್ನೂ ಪ್ರಜ್ವಲ್‌ ಸಾಕಿಕೊಂಡಿದ್ದಾರೆ. ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸ್‌ ಠಾಣೆಯಲ್ಲಿ ಪ್ರಜ್ವಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿಲ್ಲ.