ನವದೆಹಲಿ(ಆ.29): ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸದೆ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಸುಪ್ರೀಂಕೋರ್ಟ್‌, ಯುಜಿಸಿ ನಿಯಮದಂತೆ ಸೆ.30ರೊಳಗೆ ಈ ಪರೀಕ್ಷೆಗಳನ್ನು ನಡೆಸಬೇಕು ಎಂದು ಎಲ್ಲಾ ರಾಜ್ಯಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ತಾಕೀತು ಮಾಡಿದೆ.

ಬಾಂಬೆ ಐಐಟಿಯ ಡಿಜಿಟಲ್ ಘಟಿಕೋತ್ಸವ: ವರ್ಚುವಲ್ ವಿದ್ಯಾರ್ಥಿಗಳಿಗೆ ಡಿಗ್ರಿ, ಪದಕ!

ಸೆ.30ರೊಳಗೆ ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳು ಅಂತಿಮ ವರ್ಷದ ಕೋರ್ಸ್‌ಗಳಿಗೆ ಪರೀಕ್ಷೆಗಳನ್ನು ನಡೆಸಬೇಕು ಎಂದು ಈ ಹಿಂದೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತ್ತು. ಆದರೆ, ದೆಹಲಿ, ಮಹಾರಾಷ್ಟ್ರ ಮುಂತಾದ ಸರ್ಕಾರಗಳು ಕೊರೋನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಪರೀಕ್ಷೆಗಳನ್ನೇ ರದ್ದುಪಡಿಸಿದ್ದವು. ಮಹಾರಾಷ್ಟ್ರದ ಆಡಳಿತಾರೂಢ ಪಕ್ಷವಾಗಿರುವ ಶಿವಸೇನೆಯ ಯುವ ಘಟಕವಾದ ಯುವ ಸೇನೆಯು ಸುಪ್ರೀಂಕೋರ್ಟ್‌ನಲ್ಲಿ ಯುಜಿಸಿಯ ಮಾರ್ಗದರ್ಶಿ ಸೂತ್ರಗಳನ್ನು ಪ್ರಶ್ನಿಸಿತ್ತು. ಅದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಶುಕ್ರವಾರ ಮೇಲಿನ ಆದೇಶ ನೀಡಿದೆ.

ಶೇ.27ರಷ್ಟುವಿದ್ಯಾರ್ಥಿಗಳ ಬಳಿ ಇಲ್ಲ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಫೋನ್‌ಗಳು!!

ಕೊರೋನಾ ವೈರಸ್‌ನಿಂದಾಗಿ ಸೆ.30ರೊಳಗೆ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎನ್ನುವ ರಾಜ್ಯ ಸರ್ಕಾರಗಳು ಯುಜಿಸಿಗೆ ಮನವಿ ಮಾಡಿ ಹೊಸ ದಿನಾಂಕ ಪಡೆದುಕೊಳ್ಳಬೇಕು. ವಿಪತ್ತು ನಿರ್ವಹಣಾ ಕಾಯ್ದೆಯಡಿ ಪರೀಕ್ಷೆಗಳನ್ನು ಮುಂದೂಡಲು ರಾಜ್ಯಗಳಿಗೆ ಅಧಿಕಾರವಿದೆ. ಆದರೆ, ಪರೀಕ್ಷೆ ನಡೆಸದೆ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಪಾಸು ಮಾಡುವಂತಿಲ್ಲ ಎಂದು ನ್ಯಾ| ಆರ್‌.ಎಸ್‌.ರೆಡ್ಡಿ ಮತ್ತು ಎಂ.ಆರ್‌.ಶಾ ಅವರ ಪೀಠ ಹೇಳಿದೆ.