ನೀಟ್‌ ವೈಫಲ್ಯ ಖಂಡಿಸಿ 19 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚುಕ್ ಅವರ ಜೀವ ಉಳಿಸಲು ಯಾವುದೇ ಕ್ರಮ ಕೈಗೊಳ್ಳಿ ಎಂದು ದೆಹಲಿ ಹೈಕೋರ್ಟ್‌ ಕೇಂದ್ರಕ್ಕೆ ಸೂಚಿಸಿದೆ. ಈ ನಡುವೆಯೂ ಹೋರಾಟ ಮುಂದುವರಿಸಿರುವ ವಾಂಗ್ಚುಕ್, ಜು.20ರಂದು ಸಂಸತ್ ಚಲೋಗೆ ಕರೆ ನೀಡಿದ್ದಾರೆ.

ನವದೆಹಲಿ: ಪ್ರತಿಯೊಬ್ಬ ಭಾರತೀಯ ನಾಗರಿಕರ ಜೀವ ಅಮೂಲ್ಯವಾದದ್ದು. ಹಾಗಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಖ್ಯಾತ ಪರಿಸರವಾದಿ, ಗಾಂಧಿವಾದಿ ಹಾಗೂ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಜೀವ ಉಳಿಸಲು ಯಾವ ಕ್ರಮವನ್ನಾದರೂ ಕೈಗೊಳ್ಳಿ ಎಂದು ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ನೀಟ್‌ ವೈಫಲ್ಯ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ದೆಹಲಿ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ಜಿರಳೆ ಪಾರ್ಟಿ ಹೋರಾಟದಲ್ಲಿ ವಾಂಗ್ಚುಕ್ 19 ದಿನದಿಂದ ಉಪವಾಸ ಮಾಡುತ್ತಿದ್ದಾರೆ. 19 ದಿನಗಳಿಂದ ಉಪವಾಸ ಕೈಗೊಂಡಿರುವ ವಾಂಗ್ಚುಕ್‌ ಇನ್ನೆರೆಡು ದಿನಗಳಲ್ಲಿ ಸಾಯಬಹುದು. ಹಾಗಾಗಿ ಅವರಿಗೆ ಬಲವಂತವಾಗಿ ಆದರೂ ಆಹಾರ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ಯಾವುದೇ ನಾಗರಿಕರ ಜೀವವು ಅಮೂಲ್ಯವಾದದ್ದು. ಅದನ್ನು ಉಳಿಸಲು ಅಧಿಕಾರಿಗಳು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಸೋನಂ ವಾಂಗ್ಚುಕ್‌ ಅವರ ಜೀವವನ್ನು ಉಳಿಸಲು ಅಗತ್ಯವಿರುವ ಯಾವುದೇ ವೈದ್ಯಕೀಯ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದೆ.

ಇದೇ ಸಂದರ್ಭದಲ್ಲಿ ಸೋನಂ ವೈದ್ಯಕೀಯ ಮೇಲ್ವಿಚಾರಣೆ ಸಮರ್ಪಕವಾಗಿ ಆಗುತ್ತಿಲ್ಲ ಎನ್ನುವುದು ಗಮನಿಸಿದ ನ್ಯಾಯಾಲಯ ‘ ಸೋನಂ ಅವರಿಗೆ ಸರ್ಕಾರಿ ವೈದ್ಯರಿಂದ ನಿಯಮತ ಮತ್ತು ದೈನಂದಿನ ವೈದ್ಯಕೀಯ ತಪಾಸಣೆಗಳು ನಡೆಸಬೇಕು. ಆ ವರದಿಗಳ ಆಧಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸಬೇಕು’ ಎಂದು ಸೂಚನೆ ನೀಡಿತು. ಆಗ ಸರ್ಕಾರಿ ವಕೀಲರು, ಖಾಸಗಿ ಹಾಗೂ ಸರ್ಕಾರಿ ವೈದ್ಯರಿಬ್ಬರೂ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ವೈದ್ಯರ ಶಿಫಾರಸಿನಂತೆ ಮುಂದಿನ ಕ್ರಮ ಜರುಗಿಸುತ್ತೇವೆ’ ಎಂದರು. ಅರ್ಜಿ ವಿಚಾರಣೆ ವೇಳೆ ಅರ್ಜಿದಾರರು, ‘ಸಾರ್ವಜನಿಕ ಸ್ಥಳದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ನಾಗರಿಕರ ಹಕ್ಕು. ಆದರೆ ಈ ರೀತಿಯಾಗಿ ವಾಂಗ್ಚುಕ್‌ ಸಾವನ್ನಪ್ಪಿದ್ದರೆ ಅದು ದೇಶ ಮತ್ತು ಜಗತ್ತಿಗೆ ಅವಮಾನಕಾರಿ ಸಂಗತಿ’ ಎಂದು ಕೋರ್ಟ್‌ ಗಮನಕ್ಕೆ ತಂದರು.

ಜು.20ರಂದು ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಿ: ವಾಂಗ್ಚುಕ್‌ ಕರೆ

ಸೋನಂ ವಾಂಗ್‌ಚುಕ್‌, ಜು.20ರ ಜಿರಳೆ ಪಕ್ಷದ ಸಂಸತ್‌ ಚಲೋ ಬೆಂಬಲಿಸಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ. ಅಂದು ಸಂಸತ್‌ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಅಂದೇ ಈ ಪ್ರತಿಭಟನೆ ನಡೆಯುವುದು ವಿಶೇಷವಾಗಿದೆ.

ಈ ನಡುವೆ, 19 ದಿನದಿಂದ ವಾಂಗ್ಚುಕ್‌ ಉಪವಾಸನಿರತರಾಗಿದ್ದರೂ ಸರ್ಕಾರ ವಾಂಗ್ಚುಕ್ ಜತೆ ಮಾತನಾಡದೆ ಮೌನಕ್ಕೆ ಶರಣಾಗಿರುವುದಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಆರೋಗ್ಯ ಕ್ಷೀಣಿಸುತ್ತಿದ್ದರೂ ನಿರಶನ ಮುಂದುವರಿಸುತ್ತಿರುವ ಸೋನಂ ವಾಂಗ್ಚುಕ್‌ ಪರ ಬೆಂಬಲವೂ ಹೆಚ್ಚಾಗತೊಡಗಿದೆ.

ಶುಕ್ರವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ‘ನಾನು ಉದ್ದೇಶ ಈಡೇರದೇ ಉಪವಾಸ ಅರ್ಧಕ್ಕೇ ನಿಲ್ಲಿಸಿದರೆ ಸರಿ ಇರುವುದಿಲ್ಲ. ಹೋರಾಟ ನಿಲ್ಲಿಸಿದರೆ ಪ್ರತಿಭಟನಾಕಾರರು ಸುಮ್ಮನೇ ಪ್ರತಿಭಟಿಸಿ ಎದ್ದು ಹೋಗುತ್ತಾರೆ ಎನ್ನುವ ಸಂದೇಶ ಸರ್ಕಾರಕ್ಕೆ ಹೋಗುತ್ತದೆ. ಅದರ ಬದಲು ಜು.20ರಂದು ಜಿರಳೆ ಪಕ್ಷ ಕರೆ ನೀಡಿರುವ ಸಂಸತ್‌ ಚಲೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ, ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಹೋರಾಟ ಬಲಪಡಿಸಬೇಕು’ ಎಂದು ಮನವಿ ಮಾಡಿದ್ದಾರೆ.

ನನ್ನ ಸ್ನಾಯಗಳು ದುರ್ಬಲಗೊಳ್ಳುತ್ತಿವೆ

ನನ್ನ ಸ್ನಾಯಗಳು ದುರ್ಬಲಗೊಳ್ಳುತ್ತಿವೆ ನಿಜ. ಆದರೆ ಹೃದಯ ಮತ್ತು ಹೃದಯದ ಭಾಗ ಇನ್ನೂ ಚೆನ್ನಾಗಿವೆ. ಹೀಗಾಗಿ ಉಪವಾಸ ಕೈಬಿಡಲ್ಲ. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಉಪವಾಸ ನಿಲ್ಲಿಸುವುದರಿಂದ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದಿದ್ದಾರೆ. 3 ವಾರಗಳ ಉಪವಾಸದಿಂದಾಗಿ ವಾಂಗ್ಚುಕ್‌ 9 ಕೇಜಿ ತೂಕ ಕಳೆದುಕೊಂಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮುಂದಿನ ಹಂತ ತುಂಬಾ ಗಂಭೀರ ಸ್ವರೂಪದ್ದಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.