ಚೀನಾ ಹಿಮಾಲಯದ ಗಡಿಯಲ್ಲಿ ಆರು ಹೊಸ ವಾಯುನೆಲೆಗಳನ್ನು ನಿರ್ಮಿಸುತ್ತಿದೆ. ಈ ಹೊಸ ನೆಲೆಗಳು ಭಾರತದ ರಕ್ಷಣೆಗೆ ಸವಾಲೊಡ್ಡುವ ಸಾಧ್ಯತೆಯಿದ್ದು, ಉಪಗ್ರಹ ಚಿತ್ರಗಳು ಹೊಸ ಏಪ್ರನ್‌ಗಳು, ಎಂಜಿನ್ ಪರೀಕ್ಷಾ ಪ್ಯಾಡ್‌ಗಳು ಮತ್ತು ಇತರ ಮೂಲಸೌಕರ್ಯಗಳನ್ನು ತೋರಿಸುತ್ತವೆ.

ಬೀಜಿಂಗ್: ನೆರೆಯ ರಾಷ್ಟ್ರ ಚೀನಾ ಆರು ಹೊಸ ವಾಯುನೆಲೆಗಳನ್ನು ಹೆಚ್ಚಿಸುವುದಕ್ಕೆ ಮುಂದಾಗಿದೆ. ಈ ಮೂಲಕ ತನ್ನ ವಾಯುಬಲವನ್ನು ಹೆಚ್ಚಿಸಲು ಮುಂದಾಗಿರುವ ಚೀನಾ ಹಿಮಾಲಯದ ಗಡಿಯುದ್ದಕ್ಕೂ ಭಾರತದ ರಕ್ಷಣೆಗೆ ಸವಾಲಾಗುವ ಸಾಧ್ಯತೆಯಿದೆ.

ಚೀನಾ ಸ್ಥಾಪಿಸಲು ಹೊರಟಿರುವ ಹೊಸ ವಾಯು ನೆಲೆಗಳ ಉಪಗ್ರಹ ಚಿತ್ರ ಬಿಡುಗಡೆಯಾಗಿದ್ದು. ಇದರಲ್ಲಿ ಹೊಸ ಏಪ್ರನ್ ಸ್ಥಳ, ಎಂಜಿನ್ ಪರೀಕ್ಷಾ ಪ್ಯಾಡ್‌ಗಳು, ಇತರ ರಚನೆಗಳು ಜೊತೆಗೆ ಚೀನಾದ ವಾಯುನೆಲೆ ಪ್ರಮುಖ ಅಂಶವಾದ ಡಾಂಬರು ರಸ್ತೆಗಳನ್ನು ಚಿತ್ರಣವನ್ನು ಇದು ಒಳಗೊಂಡಿದೆ. ಉಪಗ್ರಹ ಚಿತ್ರವು ಟಿಂಗ್ರಿ, ಲುಂಜೆ, ಬುರಾಂಗ್, ಯುಟಿಯಾನ್ ಮತ್ತು ಯಾರ್ಕಾಂತ್‌ಗಳಲ್ಲಿ ಹೊಸ ವಾಯುನೆಲೆಗಳನ್ನು ಒಳಗೊಂಡಿದೆ. ಇನ್ನು ಈ ಸಂಬಂಧ ಭಾರತದ ವಾಯುಪಡೆಯು ಪ್ರತಿಕ್ರಿಯಿಸಿದ್ದು, ‘ನಮ್ಮಲ್ಲಿ ನಮ್ಮದೇ ಆದ ಕಾರ್ಯವಿಧಾನಗಳಿವೆ ಮತ್ತು ನಾವು ನಮ್ಮನ್ನು ಜಾಗೃತರಾಗಿರಿಸಿಕೊಳ್ಳುತ್ತೇವೆ’ ಎಂದಿದೆ.

ಚೀನಾ ತಿರಸ್ಕರಿಸಿದ ಅಮೆರಿಕದ ಬೋಯಿಂಗ್‌ ವಿಮಾನ ಭಾರತಕ್ಕೆ?
ಅಮೆರಿಕದೊಂದಿಗೆ ನೇರಾನೇರ ತೆರಿಗೆ ಯುದ್ಧಕ್ಕೆ ಇಳಿದಿರುವ ಚೀನಾ, ತಾನು ಈ ಮುಂಚೆ ನೀಡಿದ್ದ ಬೋಯಿಂಗ್‌ ವಿಮಾನಗಳ ಆರ್ಡರ್‌ ಅನ್ನು ರದ್ದು ಮಾಡಿದೆ. ಈ ಹೊತ್ತಿನಲ್ಲಿ, ಭಾರತ ಇದರ ಲಾಭ ಪಡೆಯಲು ಮುಂದಾದಂತಿದೆ.

ಅಮೆರಿಕ ನಿರ್ಮಿತ ಬೋಯಿಂಗ್‌ ವಿಮಾನಗಳನ್ನು ಖರೀದಿಸದಂತೆ ಚೀನಾ ಸರ್ಕಾರ ವಿಮಾಯಯಾನ ಸಂಸ್ಥೆಗಳಿಗೆ ಸೂಚಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ಇದರ ಬೆನ್ನಲ್ಲೇ, ಚೀನಾಗಾಗಿ ತಯಾರಿಸಲ್ಪಟ್ಟಿದ್ದ 41 737 ಮ್ಯಾಕ್ಸ್‌ ಜೆಟ್‌ಗಳನ್ನು ಖರೀದಿಸಲು ಏರ್‌ ಇಂಡಿಯಾ ಮುಂದಾಗಿರುವುದಾಗಿ ಮೂಲಗಳು ತಿಳಿಸಿವೆ. ಅಂತೆಯೇ, ಮಲೇಷಿಯಾದ ವಿಮಾನಯಾನ ಸಂಸ್ಥೆಯಾದ ಬಿಎಹ್‌ಡಿ ಕೂಡ ಜೆಟ್‌ಗಳನ್ನು ಖರೀದಿಸುವ ಸಂಬಂಧ ಬೋಯಿಂಗ್‌ ಜತೆ ಮಾತುಕತೆ ನಡೆಸುತ್ತಿರುವುದಾಗಿ ವರದಿಯಾಗಿದೆ.

ಇಸ್ರೋ ಉಪಗ್ರಹ ಡಾಕಿಂಗ್‌ 2ನೇ ಬಾರಿ ಯಶಸ್ವಿ
ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಎಂದು ಪರಿಗಣಿಸಲಾಗಿದ್ದ ಸ್ಪೇಡೆಕ್ಸ್‌ ಉಪಗ್ರಹಗಳ ಡಾಕಿಂಗ್‌ಅನ್ನು ಇಸ್ರೋ 2ನೇ ಬಾರಿ ಯಶಸ್ವಿಯಾಗಿ ನಡೆಸಿದೆ. ಈ ಬಗ್ಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದರ್‌ ಸಿಂಗ್‌ ಎಕ್ಸ್‌ನಲ್ಲಿ ಮಾಹಿತಿ ನೀಡಿ, ‘ಮುಂದಿನ ಪ್ರಯೋಗಗಳನ್ನು 2 ವಾರಗಳಲ್ಲಿ ಯೋಜಿಸಲಾಗುವುದು. ಏ.20ರ ರಾತ್ರಿ 8.20ಕ್ಕೆ ಡಾಕಿಂಗ್ ಆಗಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆಯಾದ ಆರೇ ದಿನಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಲೆಫ್ಟಿನೆಂಟ್‌ ವಿನಯ್‌ ನರ್ವಾಲ್‌!

ಸ್ಪೇಸ್ ಡಾಕಿಂಗ್ ಪ್ರಯೋಗ (ಸ್ಪೇಡೆಕ್ಸ್‌)ದ ಭಾಗವಾಗಿ 2024ರ ಡಿ.30ರಂದು ಇಸ್ರೋ, ಎಸ್‌ಡಿಎಕ್ಸ್‌01 ಮತ್ತು ಎಸ್‌ಡಿಎಕ್ಸ್‌02 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಅವುಗಳು ಈ ವರ್ಷ ಜ.16ರಂದು ಡಾಕ್‌(ಒಂದಕ್ಕೊಂದು ಕೂಡಿಕೊಳ್ಳುವುದು) ಆಗಿದ್ದವು. ಬಳಿಕ ಮಾ.13ರಂದು ಅನ್‌ಡಾಕಿಂಗ್‌ (ಬೇರ್ಪಡುವಿಕೆ) ಕೂಡ ಯಶಸ್ವಿಯಾಗಿ ನೆರವೇರಿತ್ತು. ಈ ಮೂಲಕ, ಅಮೆರಿಕ, ರಷ್ಯಾ, ಚೀನಾ ಬಳಿಕ ಡಾಕಿಂಗ್‌ ಕಲೆ ಸಿದ್ಧಿಸಿಕೊಂಡ 4ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿತ್ತು.

ಈ ಪ್ರಯೋಗವು ಭಾರತೀಯ ಅಂತರಿಕ್ಷ ಕೇಂದ್ರ ನಿರ್ಮಾಣ, ಸೇರಿದಂತೆ ಗಗನಯಾನಿಗಳನ್ನು ಚಂದ್ರನ ಅಂಗಳಕ್ಕೆ ಕಳಿಸುವುದು, ಅಲ್ಲಿಂದ ಮಾದರಿಗಳನ್ನು ಸಂಗ್ರಹಿಸಿ ತರುವುದು ಇತ್ಯಾದಿಗಳಿಗೆ ಉಪಯುಕ್ತ.

ಇದನ್ನೂ ಓದಿ: ಪಹಲ್ಗಾಮ್ ದುರಂತ: ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ

ಚೀನಾದಿಂದ ಬಾಲವಿಲ್ಲದ ಜೆಟ್‌ ಅಭಿವೃದ್ಧಿ!
ಅಮೆರಿಕದ ವಿರುದ್ಧ ತೊಡೆ ತಟ್ಟಿ ವಾಯು ಪ್ರಾಬಲ್ಯಕ್ಕಾಗಿ ಪ್ರಯತ್ನ ಮುಂದುವರಿಸಿರುವ ಚೀನಾ ರಹಸ್ಯವಾಗಿ ಬಾಲ ಇಲ್ಲದ ಹಾಗೂ 3-ಎಂಜಿನ್‌ ಸುಧಾರಿತ ವಿಮಾನಗಳನ್ನು ಅಭಿವೃದ್ಧಿಪಡಿಸಿದೆ. ವಿಮಾನ ಹಾರಾಟದ 2 ವಿಡಿಯೋಗಳು ಈಗ ವೈರಲ್‌ ಆಗಿವೆ. ಈ ಪೈಕಿ ಡಿ.26ರಂದು ಚೆಂಗ್ಡು ಮೇಲೆ ಜೆಟ್ ಜೆ-36 ಎಂಬ ಬಾಲವಿಲ್ಲದ ವಿಮಾನ ಹಾರಾಟ ನಡೆಸಿದೆ. ಇದನ್ನು ಚೆಂಗ್ಡು ಏರ್‌ಕ್ರಾಫ್ಟ್ ಕಾರ್ಪೊರೇಷನ್ ಅಭಿವೃದ್ಧಿಪಡಿಸಿದೆ. ಇದು ಬಾಲವಿಲ್ಲದ ವಿನ್ಯಾಸ ಮತ್ತು ಅಪರೂಪದ ಮೂರು-ಎಂಜಿನ್ ಸೆಟಪ್ ಒಳಗೊಂಡಿದೆ.

ಇನ್ನೊಂದು ವಿಮಾನದ ಮೂಲಮಾದರಿಯು ಅದೇ ದಿನ ಉತ್ತರ ಚೀನಾದಲ್ಲಿ ಪತ್ತೆಯಾಗಿದೆ. ಈ ಜೆಟ್ ವಿ-ಆಕಾರದ ರೆಕ್ಕೆಗಳು ಮತ್ತು ಅವಳಿ ಎಂಜಿನ್‌ಗಳನ್ನು ತೋರಿಸಿದೆ. ಶೆನ್ಯಾಂಗ್ ಏರ್‌ಕ್ರಾಫ್ಟ್ ಕಾರ್ಪೊರೇಷನ್ ಜೆ -50 ಎಂದು ಕರೆಯಲ್ಪಡುವ ಈ ವಿಮಾನ ನಿರ್ಮಿಸಿದೆ. 3-ಎಂಜಿನ್ ಸೆಟಪ್‌ನಿಂದ ವಿಮಾನದ ಶಕ್ತಿ ವರ್ಧಿಸಲಿದೆ ಮತ್ತು ಪೇಲೋಡ್ ಸಾಮರ್ಥ್ಯ ಹೆಚ್ಚಲಿದೆ. ಇನ್ನು ಬಾಲವಿಲ್ಲದ ದೇಹವು ರಾಡಾರ್ ಕ್ರಾಸ್ ಸೆಕ್ಷನ್‌ ಕಡಿಮೆ ಮಾಡುತ್ತದೆ.