ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ 28 ಪ್ರವಾಸಿಗರು ಬಲಿ. ಕರ್ನಾಟಕದ ಇಬ್ಬರು ಸೇರಿದಂತೆ ನೌಕಾಸೇನಾ ಅಧಿಕಾರಿ, ವಿದೇಶಿ ಪ್ರಜೆ ಮೃತಪಟ್ಟಿದ್ದಾರೆ. ಹನಿಮೂನ್‌ಗೆ ತೆರಳಿದ್ದ ನವದಂಪತಿಗಳಲ್ಲಿ ಪತಿ ಮೃತಪಟ್ಟಿದ್ದು, ಪತ್ನಿಯ ಸ್ಥಿತಿ ಗೊತ್ತಾಗಿಲ್ಲ. ದಾಳಿಯಲ್ಲಿ ಮಹಾರಾಷ್ಟ್ರ, ತಮಿಳುನಾಡು ಮೂಲದವರೂ ಸಾವಿಗೀಡಾಗಿದ್ದಾರೆ.

ನವದೆಹಲಿ (ಏ.22): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ 28 ಮಂದಿ ಪ್ರವಾಸಿಗರು ಬಲಿಯಾಗಿದ್ದು, ಈ ಪೈಶಾಚಿಕ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಈ ಘಟನೆಯಲ್ಲಿ ಕರ್ನಾಟಕದ ಇಬ್ಬರು ಸಾವು ಕಂಡಿದ್ದು, ಅವರನ್ನು ಶಿವಮೊಗ್ಗದ ಮಂಜುನಾಥ್‌ ರಾವ್‌ ಹಾಗೂ ಹಾವೇರಿಯ ಭರತ್‌ ಭೂಷಣ್‌ ಎಂದು ಗೊತ್ತಾಗಿದೆ. ಉಗ್ರರ ರಾಕ್ಷಸೀಯ ಕೃತ್ಯಕ್ಕೆ ನೇಪಾಳ ಮೂಲದ ವ್ಯಕ್ತಿಯೊಂದಿಗೆ ಇನ್ನೊಬ್ಬ ವಿದೇಶಿ ಪ್ರಜೆ ಕೂಡ ಬಲಿಯಾಗಿದ್ದಾನೆ. ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ, ತಮಿಳುನಾಡು ಮೂಲದ ವ್ಯಕ್ತಿಗಳೂ ಸಾವು ಕಂಡಿದ್ದಾರೆ.

ಇನ್ನು ಪಹಲ್ಗಾಮ್‌ ದಾಳಿಯಲ್ಲಿ ಭಾರತೀಯ ನೌಕಾಸೇನೆಯ ಅಧಿಕಾರಿ ಲೆಫ್ಟಿನೆಂಟ್‌ ವಿನಯ್‌ ನರ್ವಾಲ್‌ ಸಾವು ಕಂಡಿದ್ದಾರೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. 26 ವರ್ಷದ ವಿನಯ್‌ ನರ್ವಾಲ್‌ ಅವರು ಕೊಚ್ಚಿಯಲ್ಲಿ ಪೋಸ್ಟಿಂಗ್‌ನಲ್ಲಿದ್ದರು. ಮೂಲತಃ ಹರ್ಯಾಣದವರಾಗಿರುವ ವಿನಯ್‌ ನರ್ವಾಲ್‌. ಏಪ್ರಿಲ್‌ 16 ರಂದು ಮದುವೆಯಾಗಿದ್ದರು. ಅವರು ಸದ್ಯ ಮದುವೆಯ ರಜೆಯಲ್ಲಿದ್ದರು ಎಂದು ತಿಳಿಸಲಾಗಿದೆ. ಮೂಲಗಳ ಪ್ರಕಾರ ನವ ದಂಪತಿಗಳು ಪಹಲ್ಗಾಮ್‌ನಲ್ಲಿ ಹನಿಮೂನ್‌ಗೆ ತೆರಳಿದ್ದರು ಎನ್ನಲಾಗಿದೆ. ಈ ನಡುವೆ ಕಾಶ್ಮೀರ ಡಾಟ್‌ ಕಾಮ್‌ ವರದಿಯ ಪ್ರಕಾರ, ಲೆಫ್ಟಿನೆಂಟ್‌ ವಿನಯ್‌ ನರ್ವಾಲ್‌ ಅವರ ಪತ್ನಿ ಹಿಮಾಂಶಿ ಕೂಡ ಈ ಉಗ್ರ ದಾಳಿಯಲ್ಲಿ ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ,