ಮುಂಬೈ(ಜ.16): ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್ ಒಟ್ಟಾಗಿ ಸರ್ಕಾರ ನಡೆಸುತ್ತಿದ್ದರೂ, ಎರಡೂ ಪಕ್ಷಗಳ ನಡುವಿನ ವೈಮನಸ್ಸು ಮಾತ್ರ ಇಂದಿಗೂ ಮುಗಿದಿಲ್ಲ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ  ಅಂದಿನ ಭೂಗತ ಪಾತಕಿ ಕರೀಮ್ ಲಾಲಾನನ್ನು ಭೇಟಿಯಾಗುತ್ತಿದ್ದರು ಎಂದು ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇಂದಿರಾ ಗಾಂಧಿ ಹಾಗೂ ಕರೀಮ್ ಲಾಲಾ ಆಗಾಗ ಭೇಟಿಯಾಗುತ್ತಿದ್ದರು. ತಮ್ಮ ಅಧಿಕಾರಕ್ಕಾಗಿ ಇಂದಿರಾ ಭೂಗತ ಲೋಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಸಂಜಯ್ ರಾವುತ್ ಹೇಳಿಕೆ ನೀಡಿದ್ದರು.

ಇಂದಿರಾ ಗಾಂಧಿ ಮುಂಬೈಗೆ ಬಂದಾಗಲೆಲ್ಲಾ ಕರೀಮ್ ಲಾಲಾನನ್ನು ಭೇಟಿಯಾಗುತ್ತಿದ್ದರು. ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಭೂಗತ ಲೋಕದ ನಂಟು ಅನಿವಾರ್ಯ ಎಂದು ಇಂದಿರಾ ನಂಬಿದ್ದರು ಎಂದು ಸಂಜಯ್ ರಾವುತ್ ಹೇಳಿದ್ದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಂಜಯ್ ರಾವುತ್, ತಾವೂ ಕೂಡ ಹಲವು ಬಾರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ಹಲವು ಬಾರಿ ಮಾತನಾಡಿದ್ದಾಗಿ ಹೇಳಿದ್ದಾರೆ.

ಸಾವರ್ಕರ್ ಬಗ್ಗೆ ಮಾತಾಡಿದ್ರೆ ಹುಷಾರ್: ಕಾಂಗ್ರೆಸ್’ಗೆ ಎಚ್ಚರಿಸಿದ ಶಿವಸೇನೆ!

ಮಂತ್ರಾಲಯದಲ್ಲಿ(ರಾಜ್ಯ ವಿಧಾನಸಭೆ) ಮುಂಬೈ ನಗರವನ್ನು ಯಾರು ಪ್ರತಿನಿಧಿಸಬೇಕು ಎಂಬುದನ್ನು ದಾವೂದ್, ಛೋಟಾ ಶಕೀಲ್ ಹಾಗೂ ಶರದ್ ಶೆಟ್ಟಿ ನಿರ್ಧರಿಸುತ್ತಿದ್ದರು ಎಂದು ಸಂಜಯ್ ರಾವುತ್ ಸ್ಫೋಟಕ ಹೇಳಿಕೆ ನೀಡಿದ್ದರು.

ಕ್ಷಮೆ ಕೇಳಿದ ರಾವುತ್:

ಇನ್ನು ತಮ್ಮ ಹೇಳಿಕೆಗೆ ಕಾಂಗ್ರೆಸ್’ನಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೇ ಸಂಜಯ್ ರಾವುತ್ ಕ್ಷಮೆ ಕೇಳಿದ್ದಾರೆ. ತಮ್ಮ ಹೇಳಿಕೆಯಿಂದ ಇಂದಿರಾ ಗಾಂಧಿ ವರ್ಚಸ್ಸಿಗೆ ಧಕ್ಕೆಯಾಗಿದ್ದರೆ  ಕ್ಷಮೆ ಕೋರುವುದಾಗಿ ಸಂಜಯ್ ರಾವುತ್ ಸ್ಪಷ್ಟಪಡಿಸಿದ್ದಾರೆ.

ಇಂದಿರಾ ಗಾಂಧಿ ಅಪ್ರತಿಮ ದೇಶಭಕ್ತರಾಗಿದ್ದು, ಅವರ ಗೌರವಕ್ಕೆ ಧಕ್ಕೆ ತರುವ ಉದ್ದೇಶ ತಮ್ಮದಾಗಿರಲಿಲ್ಲ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ಮುಂಬೈ ನಗರದಲ್ಲಿ  ಜೂಜು, ಅಪಹರಣದಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ  ಕರೀಂ ಲಾಲಾ, 2002ರಲ್ಲಿ ತನ್ನ 90ನೇ ವಯಸ್ಸಿನಲ್ಲಿ ಮೃತಪಟ್ಟಿದ್ದ.