ನವದೆಹಲಿ(ಡಿ.15): ‘ಕ್ಷಮೆ ಕೇಳಲು ನಾನು ರಾಹುಲ್ ಸಾವರ್ಕರ್ ಅಲ್ಲ ರಾಹುಲ್ ಗಾಂಧಿ..’ ಎಂಬ ಹೇಳಿಕೆಗೆ ಮಹಾರಾಷ್ಟ್ರದ ಮಿತ್ರಪಕ್ಷ ಶಿವಸೇನೆ ಕೆಂಡಾಮಂಡಲವಾಗಿದೆ.

ಸಾವರ್ಕರ್ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದಿರುವ ಶಿವಸೇನೆ, ಸಾವರ್ಕರ್ ಕುರಿತು ಲಘುವಾಗಿ ಮಾತನಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

‘ಕ್ಷಮೆ ಕೇಳಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ’!

ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರೂ ಅವರನ್ನು ನಾವು ಗೌರವಿಸುತ್ತೇವೆ. ಅದರಂತೆ ಸಾವರ್ಕರ್ ಹೆಸರು ರಾಷ್ಟ್ರದ ಹೆಮ್ಮೆಯಾಗಿದ್ದು, ಅವರನ್ನು ಅಪಮಾನಿಸಬೇಡಿ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ರೇಪ್ ಇನ್ ಇಂಡಿಯಾ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕ್ಷಮೆಯಾಚಿಸುವಂತೆ ಬಿಜೆಪಿ ಆಗ್ರಹಿಸಿತ್ತು. 

ಇದನ್ನು ತಳ್ಳಿ ಹಾಕಿದ್ದ ರಾಹುಲ್ ಗಾಂಧಿ ದೆಹಲಿಯಲ್ಲಿ ನಡೆದ ಭಾರತ್ ಬಚಾವೋ ಸಮಾವೇಶದಲ್ಲಿ ಕ್ಷಮೆ ಕೇಳಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ. ನಾನು ಸತ್ಯ ಹೇಳಿದ್ದು ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.