Asianet Suvarna News Asianet Suvarna News

Mulayam Singh Yadav Death: ಉತ್ತರ ಪ್ರದೇಶ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಸಂಸ್ಥಾಪಕ ಇನ್ನಿಲ್ಲ

ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಮುಲಾಯಂ ಸಿಂಗ್ ಯಾದವ್ ನಿಧನರಾಗಿದ್ದಾರೆ ಎಂದು ಯುಪಿ ಮಾಜಿ ಸಿಎಂ ಹಾಗೂ ಮುಲಾಯಂ ಸಿಂಗ್ ಪುತ್ರ ಅಖಿಲೇಶ್‌ ಯಾದವ್‌ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸಮಾಜವಾದಿ ಪಕ್ಷದ ಅಧಿಕೃತ ಟ್ವಿಟ್ಟರ್‌ ಖಾತೆ ಟ್ವೀಟ್‌ ಮಾಡಿದೆ. 

samajwadi party leader uttar pradesh ex chief minister mulayam singh yadav dies at hosital ash
Author
First Published Oct 10, 2022, 9:54 AM IST

ಉತ್ತರ ಪ್ರದೇಶ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್‌ ವಿಧಿವಶರಾಗಿದ್ದಾರೆ.  ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಮುಲಾಯಂ ಸಿಂಗ್ ಯಾದವ್ ನಿಧನರಾಗಿದ್ದಾರೆ ಎಂದು ಯುಪಿ ಮಾಜಿ ಸಿಎಂ ಹಾಗೂ ಮುಲಾಯಂ ಸಿಂಗ್ ಪುತ್ರ ಅಖಿಲೇಶ್‌ ಯಾದವ್‌ ಖಚಿತಪಡಿಸಿದ್ದಾರೆ. ಈ ಸಂಬಂಧ ಸಮಾಜವಾದಿ ಪಕ್ಷದ ಅಧಿಕೃತ ಟ್ವಿಟ್ಟರ್‌ ಖಾತೆ ಟ್ವೀಟ್‌ ಮಾಡಿದೆ. ಮುಲಾಯಂ ಸಿಂಗ್ ಯಾದವ್‌ ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರ ನಿಧನ ಹಿನ್ನೆಲೆ ಉತ್ತರ ಪ್ರದೇಶ ರಾಜ್ಯ ಸರ್ಕಾರ 3 ದಿನಗಳ ಕಾಲ ಶೋಕಾಚಾರಣೆ ಘೋಷಿಸಿದೆ.

ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಸಮಾಜವಾದಿ ಪಕ್ಷದ ಸಂಸ್ಥಾಪಕ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಸ್ಥಿತಿ  ಕಳೆದ ಹಲವು ದಿನಗಳಿಂದ ಗಂಭೀರವಾಗಿತ್ತು. 82 ವರ್ಷದ ಹಿರಿಯ ನಾಯಕ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುಲಾಯಂ ಸಿಂಗ್ ಯಾದವ್‌ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಗಂಭೀರ, ನಾಯಕರು ಆಸ್ಪತ್ರೆಗೆ ದೌಡು!

ಹರ್ಯಾಣದ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಮುಲಾಯಂ ಸಿಂಗ್ ಯಾದವ್‌ ಆಗಸ್ಟ್‌ 22 ರಿಂದ ಚಿಕಿತ್ಸೆ ಪಡೆಯುತ್ತಿದ್ದರು ಹಾಗೂ ಅಕ್ಟೋಬರ್ 2 ರಿಂದ ಅವರನ್ನು ಐಸಿಯುಗೆ ಶಿಫ್ಟ್‌ ಮಾಡಲಾಗಿತ್ತು. ಅಂದಿನಿಂದಲೂ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು. 

ಪ್ರಧಾನಿ ಮೋದಿ ಸಂತಾಪ
ಇನ್ನು, ಮುಲಾಯಂ ಸಿಂಗ್ ಯಾದವ್‌ ಅವರ ನಿಧನಕ್ಕೆ ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಮುಲಾಯಂ ಸಿಂಗ್ ಅವರದು ಗಮನಾರ್ಹ ವ್ಯಕ್ತಿತ್ವ. ಜನರ ಸಮಸ್ಯೆಗಳ ಬಗ್ಗೆ ಸಂವೇದನಾಶೀಲರಾಗಿದ್ದ ಅವರು ವಿನಮ್ರ ನಾಯಕರಾಗಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟರು. ಅವರು ಶ್ರದ್ಧೆಯಿಂದ ಜನರಿಗೆ ಸೇವೆ ಸಲ್ಲಿಸಿದರು ಮತ್ತು ಲೋಕನಾಯಕ್ ಜಯ ಪ್ರಕಾಶ್‌ ಮತ್ತು ಡಾ. ಲೋಹಿಯಾ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.

ಮುಲಾಯಂ ಸಿಂಗ್ ಯಾದವ್ ಜೀ ಯುಪಿ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಸೈನಿಕರಾಗಿದ್ದರು. ರಕ್ಷಣಾ ಸಚಿವರಾಗಿ ಅವರು ಬಲಿಷ್ಠ ಭಾರತಕ್ಕಾಗಿ ಶ್ರಮಿಸಿದರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಒಳನೋಟವುಳ್ಳವು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೆಚ್ಚಿಸಲು ಒತ್ತು ನೀಡಿದ್ದವು.

ನಾವು ನಮ್ಮ ಆಯಾ ರಾಜ್ಯಗಳ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದಾಗ ನಾನು ಮುಲಾಯಂ ಸಿಂಗ್ ಯಾದವ್ ಜೀ ಅವರೊಂದಿಗೆ ಅನೇಕ ಸಂವಾದಗಳನ್ನು ನಡೆಸಿದೆ. ನಿಕಟ ಒಡನಾಟವು ಮುಂದುವರೆಯಿತು ಮತ್ತು ನಾನು ಯಾವಾಗಲೂ ಅವರ ಅಭಿಪ್ರಾಯಗಳನ್ನು ಕೇಳಲು ಎದುರು ನೋಡುತ್ತಿದ್ದೆ. ಅವರ ನಿಧನ ನನಗೆ ನೋವು ತಂದಿದೆ. ಅವರ ಕುಟುಂಬಕ್ಕೆ ಮತ್ತು ಲಕ್ಷಾಂತರ ಬೆಂಬಲಿಗರಿಗೆ ಸಂತಾಪ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಸರಣಿ ಟ್ವೀಟ್‌ಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Mulayam Singh Yadav: ಉತ್ತರ ಪ್ರದೇಶ ಮಾಜಿ ಸಿಎಂ ಸ್ಥಿತಿ ಗಂಭೀರ, ಐಸಿಯುಗೆ ಶಿಫ್ಟ್‌!

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರೂ ಸಹ ಮುಲಾಯಂ ಸಿಂಗ್ ಯಾದವ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 

ಚಾಣಾಕ್ಷ ರಾಜಕಾರಣಿ
  
ಚಾಣಾಕ್ಷ ರಾಜಕಾರಣಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶ ರಾಜಕೀಯದಲ್ಲಿ ಹಿಂದುಳಿದ ಜಾತಿಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಹೊಸ ಹಾದಿಯನ್ನು ಬೆಳಗಿಸಿದರು. ಮುಲಾಯಂ ಮೂರು ಬಾರಿ (1989-91, 1993-95, ಮತ್ತು 2003-2007) ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ಅಖಿಲೇಶ್ ಮತ್ತು ಪ್ರತೀಕ್ ಎಂಬ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಅವರು 1990 ರಲ್ಲಿ ರಾಮ ಜನ್ಮಭೂಮಿ ಆಂದೋಲನದ ಉತ್ತುಂಗದಲ್ಲಿ ಕರಸೇವಕರ ಮೇಲೆ ಗುಂಡು ಹಾರಿಸಲು ಆದೇಶಿಸಿದ ನಂತರ ಚುನಾವಣಾ ಸೋಲನ್ನು ಸಹ ಅನುಭವಿಸಿದ್ದರು. ಇನ್ನು, ಅವರು 1996 ರಲ್ಲಿ ಯುನೈಟೆಡ್ ಫ್ರಂಟ್ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ರಕ್ಷಣಾ ಸಚಿವರ ಖಾತೆಯನ್ನು ಹೊಂದಿದ್ದರು. ಅಲ್ಲದೆ, ಪ್ರಧಾನಿ ಕುರ್ಚಿಯನ್ನು ಆಕ್ರಮಿಸಿಕೊಳ್ಳುವಷ್ಟು ಹತ್ತಿರಕ್ಕೆ ಬಂದರೂ ಅದು ಸಾಧ್ಯವಾಗಲಿಲ್ಲ. 

Follow Us:
Download App:
  • android
  • ios