ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿ ಜೈಲಿನಲ್ಲಿರುವ ಬಾಂಗ್ಲಾ ಪ್ರಜೆ ಶರೀಫುಲ್, ತನ್ನ ಬಂಧನ ಕಾನೂನುಬಾಹಿರ ಎಂದು ಅರ್ಜಿ ಸಲ್ಲಿಸಿದ್ದಾನೆ. ೪ ತಿಂಗಳ ಜೈಲುವಾಸದ ಬಳಿಕ, ತನ್ನನ್ನು ಬಿಡುಗಡೆ ಮಾಡುವಂತೆ ಬಾಂದ್ರಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಪೊಲೀಸರು ಕಾನೂನು ಪ್ರಕ್ರಿಯೆ ಪಾಲಿಸಿಲ್ಲ ಎಂದು ಆರೋಪಿಸಿದ್ದು, ಮುಂದಿನ ವಿಚಾರಣೆ ಮೇ ೧೩ಕ್ಕೆ ನಿಗದಿಯಾಗಿದೆ.
ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ ರಾತ್ರಿ ವೇಳೆ ಚಾಕು ಇರಿದು ಪರಾರಿ ಆಗಿದ್ದ ಬಾಂಗ್ಲಾದೇಶದ ಪ್ರಜೆ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್‌ನನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಇದೀಗ ಭಾರತ- ಪಾಕಿಸ್ತಾನದ ನಡುವೆ ಯುದ್ಧದ ಉದ್ವಿಗ್ನತೆ ಶುರುವಾಗಿದ್ದು, ಇದೀಗ ತನ್ನ ದೇಶ ಬಾಂಗ್ಲಾದೇಶವನ್ನು ನೆನಪು ಮಾಡಿಕೊಂಡಿದ್ದಾನೆ. ನಾನು ಬಾಂಗ್ಲಾ ಪ್ರಜೆಯಾಗಿದ್ದು, ನನ್ನನ್ನು ಭಾರತದಲ್ಲಿ ಅಕ್ರಮವಾಗಿ ಬಂಧನ ಮಾಡಲಾಗಿದೆ. ಹೀಗಾಗಿ, ನನ್ನನ್ನು ಬಿಡುಗಡೆ ಮಾಡಬೇಕು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾನೆ.
ಬಾಲಿವುಡ್ ತಾರೆ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ಆರೋಪಿ ಬಾಂಗ್ಲಾದೇಶದ ಪ್ರಜೆ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಜೈಲಿನಿಂದ ಹೊರಬರಲು ಹರಸಾಹಸ ಪಡುತ್ತಿದ್ದಾನೆ. ಬಾಂದ್ರಾ (ಮುಂಬೈ) ಮೆಟ್ರೋಪಾಲಿಟನ್ ನ್ಯಾಯಾಲಯದ ಮೊರೆ ಹೋಗಿ ಬಿಡುಗಡೆಗೆ ಮನವಿ ಮಾಡಿದ್ದಾನೆ. 30 ವರ್ಷದ ಮೊಹಮ್ಮದ್ ಶರೀಫುಲ್ ತನ್ನನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಹೇಳಿದ್ದಾನೆ. ಇದೀಗ ಪಾಕ್-ಭಾರತದ ನಡುವೆ ಉದ್ವಿಗ್ನತೆ ನಡೆಯುತ್ತಿರುವಾಗ, ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಭಾರತ ಹಾಗೂ ತನಿಖಾ ಸಂಸ್ಥೆ ಉಲ್ಲಂಘನೆ ಮಾಡುತ್ತಿದೆ ಎಂಬಂತೆ ಹೊಸ ವರಸೆಯನ್ನು ಆರಂಭಿಸಿದ್ದಾನೆ.
ಇದಕ್ಕೂ ಮೊದಲು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ ಆತ ಶುಕ್ರವಾರ (ಮೇ 9) ಅದನ್ನು ವಾಪಸ್ ಪಡೆದಿದ್ದ. ತಕ್ಷಣವೇ ತನ್ನ ವಕೀಲ ಅಜಯ್ ಗಾವ್ಲಿ ಮೂಲಕ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್ (ಬಾಂದ್ರಾ) ಮುಂದೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯಲ್ಲಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ತನ್ನ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಿ ಜೈಲಿನಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾನೆ.
ಆರೋಪಿ ಹೊಸ ಅರ್ಜಿಯಲ್ಲಿ ಏನು ಹೇಳಿದ್ದಾನೆ?
ಹೊಸ ಅರ್ಜಿಯಲ್ಲಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ತನ್ನ ಬಂಧನ ಕಾನೂನುಬಾಹಿರ ಎಂದು ಹೇಳಿದ್ದಾನೆ. ಪೊಲೀಸರು ತನ್ನನ್ನು ಬಂಧಿಸುವಾಗ ಕಾನೂನು ಪ್ರಕ್ರಿಯೆ ಪಾಲಿಸಿಲ್ಲ ಎಂದು ಆರೋಪಿಸಿದ್ದಾನೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸರಿಂದ ಉತ್ತರ ಕೇಳಿದೆ. ಮುಂದಿನ ವಿಚಾರಣೆ ಮೇ 13 ರಂದು ನಡೆಯಲಿದೆ. ಇದೀಗ ಆರೋಪಿ ಈಗ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿದ್ದಾನೆ. ಇದಕ್ಕೂ ಮೊದಲು ಮಾ.29ರಂದೂ ಕೂಡ ಆರೋಪಿ ಜಾಮೀನು ನೀಡುವಂತೆ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದನು. ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಕೋರ್ಟ್‌ಗೆ ಕಾರಣ ನೀಡಿದ್ದನು. ನನ್ನನ್ನು ಬಂಧನ ಮಾಡಿರುವ ತನಿಖಾ ಸಂಸ್ಥೆಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್‌ಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ನೆಪವೊಡ್ಡಿ ಜಾಮೀನಿಗೆ ಮನವಿ ಮಾಡಿದ್ದನು. ಇದೀಗ ಜಾಮೀನು ಅರ್ಜಿ ವಾಪಸ್ ಪಡೆದು, ನಾನೊಬ್ಬ ವಿದೇಶಿ ಪ್ರಜೆಯಾಗಿದ್ದು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಅರ್ಜಿ ಸಲ್ಲಿಸಿ ಬಿಡುಗಡೆಗಾಗಿ ಮನವಿ ಮಾಡಿದ್ದಾನೆ.
ಸೈಫ್ ಅಲಿ ಖಾನ್ ದಾಳಿ ಪ್ರಕರಣದ ಹಿನ್ನೆಲೆ:
ಇದು ಜನವರಿ 16 ರಂದು ನಡೆದ ಘಟನೆ. ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಅಪಾರ್ಟ್‌ಮೆಂಟ್‌ಗೆ ಒಬ್ಬ ಅಕ್ರಮ ವಲಸಿಗ ನುಗ್ಗಿದ್ದ ಎನ್ನಲಾಗಿದೆ. ಆತ ಸೈಫ್ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ. ಆದರೆ ವಿಫಲನಾದಾಗ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಈ ಹಲ್ಲೆಯಲ್ಲಿ ಸೈಫ್ ತೀವ್ರವಾಗಿ ಗಾಯಗೊಂಡಿದ್ದರು ಮತ್ತು ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಸೈಫ್ ಅವರ ಬೆನ್ನೆಲುಬಿಗೆ ಚಾಕುವಿನ ತುಂಡು ನುಗ್ಗಿತ್ತು, ಅದನ್ನು ತೆಗೆದು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಗುರುತಿಸಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್‌ನನ್ನು ಬಂಧಿಸಿದ್ದರು. ಆತ ಎರಡು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾನೆ.


