SaaSpocalypse ಆಂಥೋಪಿಕ್ ಕಂಪನಿಯು ಬಿಡುಗಡೆ ಮಾಡಿದ ಹೊಸ AI ಪ್ಲಗಿನ್‌ಗಳು, ಜಾಗತಿಕ ಸಾಫ್ಟ್‌ವೇರ್ ಮಾರುಕಟ್ಟೆಯಲ್ಲಿ 'SaaSpocalypse' ಎಂಬ ಬಿರುಗಾಳಿಯನ್ನೇ ಎಬ್ಬಿಸಿವೆ. ಈ ಅಪ್‌ಡೇಟ್‌ನಿಂದಾಗಿ ಕಾನೂನು ಮತ್ತು ಐಟಿ ವಲಯದ ದೈತ್ಯ ಕಂಪನಿಗಳ ಷೇರುಗಳು ಪಾತಾಳಕ್ಕೆ ಕುಸಿದಿದೆ.

ಕೃತಕ ಬುದ್ಧಿಮತ್ತೆ (AI) ಲೋಕದ ದೈತ್ಯ ಕಂಪನಿ 'ಆಂಥೋಪಿಕ್' (Anthropic) ಬಿಡುಗಡೆ ಮಾಡಿದ ಒಂದೇ ಒಂದು ಹೊಸ ಅಪ್‌ಡೇಟ್, ಜಾಗತಿಕ ಸಾಫ್ಟ್‌ವೇರ್ ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದೆ. ಇದನ್ನು ಹೂಡಿಕೆದಾರರು 'SaaSpocalypse' (ಸಾಫ್ಟ್‌ವೇರ್ ಸೇವಾ ವಲಯದ ಅಂತ್ಯಕಾಲ) ಎಂದು ಕರೆಯುತ್ತಿದ್ದಾರೆ. ಜನವರಿ 30ರ ಒಂದೇ ಒಂದು ಟ್ರೇಡಿಂಗ್ ದಿನದಲ್ಲಿ ಸಾಫ್ಟ್‌ವೇರ್, ಕಾನೂನು ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳ ಷೇರುಗಳಿಂದ ಬರೋಬ್ಬರಿ $285 ಬಿಲಿಯನ್ (ಸುಮಾರು ₹24 ಲಕ್ಷ ಕೋಟಿಗೂ ಹೆಚ್ಚು) ಮೌಲ್ಯದ ಆಸ್ತಿ ಅಳಿಸಿಹೋಗಿದೆ.

ಮಾರುಕಟ್ಟೆಯನ್ನು ನಡುಗಿಸಿದ ಆ 11 ಪ್ಲಗಿನ್‌ಗಳು

ಆಂಥೋಪಿಕ್ ಕಂಪನಿಯು ತನ್ನ 'ಕೌಡ್ ಕೋವರ್ಕ್' (Claude Co-work) ಉಪಕರಣಕ್ಕಾಗಿ 11 ಹೊಸ ಓಪನ್-ಸೋರ್ಸ್ ಪ್ಲಗಿನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಮುಖ್ಯವಾಗಿ 'ಕಾನೂನು ಪ್ಲಗಿನ್' (Legal Plugin) ಹೂಡಿಕೆದಾರರನ್ನು ಭಯಭೀತಗೊಳಿಸಿದೆ. ಈ ಪ್ಲಗಿನ್ ಒಪ್ಪಂದಗಳ ಪರಿಶೀಲನೆ, ದಾಖಲೆಗಳ ವಿಂಗಡಣೆ ಮತ್ತು ಕರಡು ಸಿದ್ಧಪಡಿಸುವಂತಹ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡುತ್ತದೆ. ಇದರಿಂದಾಗಿ ದೊಡ್ಡ ದೊಡ್ಡ ಕಾನೂನು ತಂತ್ರಜ್ಞಾನ ಕಂಪನಿಗಳಾದ ಥಾಮ್ಸನ್ ರಾಯಿಟರ್ಸ್ (15% ಕುಸಿತ), RELX (14% ಕುಸಿತ) ಮತ್ತು ಲೀಗಲ್‌ಜೂಮ್ (20% ಕುಸಿತ) ಕಂಪನಿಗಳ ಷೇರುಗಳು ಪಾತಾಳಕ್ಕೆ ಕುಸಿದವು.

ಭಾರತೀಯ ಐಟಿ ಕಂಪನಿಗಳಿಗೂ ತಪ್ಪದ ಬಿಸಿ

ಈ ಕುಸಿತದ ಅಲೆ ಕೇವಲ ಅಮೆರಿಕಕ್ಕೆ ಸೀಮಿತವಾಗಲಿಲ್ಲ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಭಾರತೀಯ ಐಟಿ ದೈತ್ಯರಾದ ಇನ್ಫೋಸಿಸ್ (5.5% ಕುಸಿತ) ಮತ್ತು ವಿಪ್ರೋ (5% ಕುಸಿತ) ಷೇರುಗಳೂ ಭಾರೀ ನಷ್ಟ ಅನುಭವಿಸಿವೆ. ಅಡೋಬ್, ಸೇಲ್ಸ್‌ಫೋರ್ಸ್ ಮತ್ತು ಸರ್ವಿಸ್‌ನೌ ನಂತಹ ದೊಡ್ಡ ಕಂಪನಿಗಳೂ ಸಹ ಶೇ. 7ರಷ್ಟು ಕುಸಿತ ಕಂಡಿವೆ.

ಹೂಡಿಕೆದಾರರ ಭಯಕ್ಕೆ ಅಸಲಿ ಕಾರಣವೇನು?

ಇಲ್ಲಿಯವರೆಗೆ AI ಎನ್ನುವುದು ಸಾಫ್ಟ್‌ವೇರ್ ಕಂಪನಿಗಳಿಗೆ ಕೆಲಸ ಸುಲಭ ಮಾಡಲು 'ಸಹಾಯ' ಮಾಡುತ್ತದೆ ಎಂಬ ನಂಬಿಕೆ ಇತ್ತು. ಆದರೆ ಆಂಥೋಪಿಕ್‌ನ ಈ ನಡೆಯಿಂದಾಗಿ, "AI ಸಾಫ್ಟ್‌ವೇರ್ ಕಂಪನಿಗಳಿಗೆ ಸಹಾಯ ಮಾಡುವುದಲ್ಲ, ಬದಲಾಗಿ ಅವುಗಳ ಜಾಗವನ್ನೇ ಆಕ್ರಮಿಸಿಕೊಳ್ಳುತ್ತಿದೆ (Replace ಮಾಡುತ್ತಿದೆ) ಎಂಬ ಆತಂಕ ಶುರುವಾಗಿದೆ. ಆಂಥೋಪಿಕ್ ತನ್ನ ಮಾದರಿಗಳನ್ನು ಮಾರಾಟ ಮಾಡುವ ಬದಲು, ನೇರವಾಗಿ ಕೆಲಸಗಳನ್ನು ನಿರ್ವಹಿಸುವ 'ರೆಡಿಮೇಡ್' ಪರಿಹಾರಗಳನ್ನು ನೀಡಲು ಆರಂಭಿಸಿರುವುದು ಇಡೀ ಉದ್ಯಮದ ಸ್ವರೂಪವನ್ನೇ ಬದಲಿಸಿದೆ.

ವೇಗವೇ ಆಂಥೋಪಿಕ್ ಅಸ್ತ್ರ!

ಕೌಡ್ ಕೋವರ್ಕ್ ಬಿಡುಗಡೆಯಾದ ಕೇವಲ ಮೂರೇ ವಾರಗಳಲ್ಲಿ ಆಂಥೋಪಿಕ್ ಈ ಪ್ಲಗಿನ್‌ಗಳನ್ನು ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ದೊಡ್ಡ ಸಾಫ್ಟ್‌ವೇರ್ ಕಂಪನಿಗಳು ಇಂತಹ ಬದಲಾವಣೆಗೆ ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತವೆ. ಆದರೆ AI ತಂತ್ರಜ್ಞಾನವು ಕೇವಲ 'ಪ್ರಾಂಪ್ಟ್'ಗಳ ಮೂಲಕ ಇಡೀ ಮಾರುಕಟ್ಟೆಯನ್ನು ಅಲುಗಾಡಿಸಬಹುದು ಎಂಬುದನ್ನು ಇದು ಸಾಬೀತುಪಡಿಸಿದೆ.