ರಷ್ಯಾದಿಂದ ಅಗ್ಗದ ತೈಲ ಖರೀದಿಸುತ್ತಿರುವ ಭಾರತದ ವಿರುದ್ಧ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ರಷ್ಯಾದ ಮೇಲೆ ಅವಲಂಬಿತವಾಗಿದೆ ಮತ್ತು ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಹೇಳಿದೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ಏನಾಗುತ್ತೆ?
ನವದೆಹಲಿ, (ಆಗಸ್ಟ್ 03): ರಷ್ಯಾದಿಂದ ಭಾರತವು ಅಗ್ಗದ ದರದಲ್ಲಿ ತೈಲ ಖರೀದಿಸುತ್ತಿರುವುದಕ್ಕೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ರಷ್ಯಾದ ಯುದ್ಧ ಆರ್ಥಿಕತೆಯನ್ನು ದುರ್ಬಲಗೊಳಿಸಲು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ತೈಲ ಮತ್ತು ಅನಿಲ ಮಾರಾಟವನ್ನು ತಡೆಯಲು ಪ್ರಯತ್ನಿಸುತ್ತಿವೆ. ಈ ಸಂದರ್ಭದಲ್ಲಿ, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ತೀವ್ರವಾಗಿ ಹೆಚ್ಚಿಸಿರುವುದು ಅಮೆರಿಕಕ್ಕೆ ಕಿರಿಕಿರಿಯನ್ನುಂಟು ಮಾಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕವು 25% ಸುಂಕ ಮತ್ತು ಹೆಚ್ಚುವರಿ ದಂಡವನ್ನು ಘೋಷಿಸಿದೆ.
ಆದರೆ, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಮಾರುಕಟ್ಟೆ ಶಕ್ತಿಗಳ ಆಧಾರದ ಮೇಲೆ ಇಂಧನ ನೀತಿಯನ್ನು ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, 'ನಮ್ಮ ಜನರ ಇಂಧನ ಅಗತ್ಯಗಳನ್ನು ಒದಗಿಸುವುದು ಪ್ರಮುಖ ಆದ್ಯತೆಯಾಗಿದೆ. ಇದಕ್ಕೆ ನಾವು ಯಾವುದೇ ಬಾಹ್ಯ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಭಾರತ ರಷ್ಯಾದಿಂದ ಏನೇನು ಖರೀದಿಸುತ್ತದೆ?
ರಷ್ಯಾದೊಂದಿಗೆ ಭಾರತದ ವ್ಯಾಪಾರ ಸಂಬಂಧವು ಬಲವಾದ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ಆಧಾರವನ್ನು ಹೊಂದಿದೆ. 2024-25ರಲ್ಲಿ ಭಾರತದ ಒಟ್ಟು ತೈಲ ಆಮದಿನ 35-40% ರಷ್ಯಾದಿಂದ ಬಂದಿದೆ. ಮೇ 2025ರಲ್ಲಿ ಭಾರತವು ದಿನಕ್ಕೆ 1.96 ಮಿಲಿಯನ್ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಂಡಿತು, ಇದು 10 ತಿಂಗಳ ಗರಿಷ್ಠ ಮಟ್ಟವಾಗಿದೆ. ಇದರ ಜೊತೆಗೆ, 2023ರಲ್ಲಿ 10.06 ಮಿಲಿಯನ್ ಮೆಟ್ರಿಕ್ ಟನ್ ಉಷ್ಣ ಕಲ್ಲಿದ್ದಲನ್ನು (ಒಟ್ಟು ಇಂಧನ ಆಮದಿನ 6%) ರಷ್ಯಾದಿಂದ ಆಮದು ಮಾಡಲಾಗಿದೆ.
ರಷ್ಯಾವು ಭಾರತದ ಕೃಷಿಗೆ ಅಗತ್ಯವಾದ ರಾಸಾಯನಿಕ ಗೊಬ್ಬರಗಳಾದ ಯೂರಿಯಾವನ್ನೂ ಪೂರೈಸುತ್ತದೆ. ರಕ್ಷಣಾ ಕ್ಷೇತ್ರದಲ್ಲಿ, ಕಳೆದ ಎರಡು ದಶಕಗಳಲ್ಲಿ ಭಾರತವು $40 ಬಿಲಿಯನ್ ಮೌಲ್ಯದ ಶಸ್ತ್ರಾಸ್ತ್ರಗಳು, S-400 ವಾಯು ರಕ್ಷಣಾ ವ್ಯವಸ್ಥೆಗಳು, ಯುದ್ಧ ವಿಮಾನಗಳು, ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳನ್ನು ಖರೀದಿಸಿದೆ.
ರಷ್ಯಾದಿಂದ ಭಾರತ ತೈಲ ಖರೀದಿಸದಿದ್ದರೆ ಏನಾಗುತ್ತದೆ?
ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದರೆ, ಭಾರತದಲ್ಲಿ ತೈಲ ಬೆಲೆಗಳು ಗಗನಕ್ಕೇರಬಹುದು, ಇದು ದೇಶದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಇಂಧನ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನ ವೆಚ್ಚ ಹೆಚ್ಚಾಗಿ, ರಾಜಕೀಯ ಒತ್ತಡವೂ ಉಂಟಾಗಬಹುದು. ಇದನ್ನು ಸರಿದೂಗಿಸಲು ಭಾರತವು ದೇಶೀಯ ತೈಲ ಉತ್ಪಾದನೆ ಮತ್ತು ಪರಿಶೋಧನೆಯಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕಾಗುತ್ತದೆ, ಜೊತೆಗೆ ಮಧ್ಯಪ್ರಾಚ್ಯ, ಗಯಾನಾ ಮತ್ತು ಕೆನಡಾದಂತಹ ಇತರ ದೇಶಗಳಿಂದ ತೈಲ ಆಮದಿಗೆ ಒತ್ತು ನೀಡಬೇಕಾಗುತ್ತದೆ.
ಅಮೆರಿಕದ ಆಕ್ಷೇಪಣೆ ಏಕೆ?
ರಷ್ಯಾದ ತೈಲ ಮಾರಾಟವು ಉಕ್ರೇನ್ ಯುದ್ಧಕ್ಕೆ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ ಎಂದು ಅಮೆರಿಕ ಕುತಂತ್ರ. ಆದರೆ ಭಾರತದ ರಷ್ಯಾದ ತೈಲ ಖರೀದಿಯು ಈ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಅಮೆರಿಕ ಭಾವಿಸುತ್ತದೆ, ಇದು ಅವರ ರಾಜಕೀಯ ಗುರಿಗಳಿಗೆ ವಿರುದ್ಧವಾಗಿದೆ. ಆದರೆ, ಭಾರತವು ತನ್ನ ಇಂಧನ ಭದ್ರತೆಯನ್ನು ಆದ್ಯತೆಯಾಗಿಟ್ಟುಕೊಂಡು, ರಷ್ಯಾದೊಂದಿಗಿನ ವ್ಯಾಪಾರವನ್ನು ಮುಂದುವರಿಸುವ ನಿಲುವನ್ನು ಕಾಯ್ದುಕೊಂಡಿದೆ.
