Ukraine Crisis ನಮ್ಮ ಮೇಲೆ ರಷ್ಯಾ ದಾಳಿ ಮೊಘಲರು ರಜಪೂತರ ಮೇಲೆ ನಡೆಸಿದ ಹತ್ಯಾಕಾಂಡಕ್ಕೆ ಸಮ, ಉಕ್ರೇನ್ ರಾಯಭಾರಿ!
- ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ ರಷ್ಯಾ
- ನಾಗರೀಕರು ಸೇರಿದಂತೆ ಅಮಾಯಕರು ಬಲಿ
- ಭಾರತದಲ್ಲಿ ಮೊಘಲರು ನಡೆಸಿದ ಹತ್ಯಾಕಾಂಡ ರೀತಿ ರಷ್ಯಾ ನಡೆ
ನವದೆಹಲಿ(ಮಾ.01): ರಷ್ಯಾ ತನ್ನ ಬಿಗಿ ಹಿಡಿತ ಮುಂದುವರಿಸಿದೆ. ಉಕ್ರೇನ್ ಮೇಲಿನ ದಾಳಿಯಿಂದ ಬರೋಬ್ಬರಿ 5,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ವಿಶ್ವವೇ ಯುದ್ಧ ನಿಲ್ಲಿಸುವಂತೆ ಕರೆ ನೀಡಿದರೂ ರಷ್ಯಾ ಪಟ್ಟು ಬಿಡುತ್ತಿಲ್ಲ. ಕ್ಷಣಕ್ಷಣಕ್ಕೂ ಉಕ್ರೇನ್‌ನಲ್ಲಿ ಅಮಾಯಕರು ಬೀದಿ ಹೆಣವಾಗುತ್ತಿದ್ದಾರೆ. ಈ ದಾಳಿಯನ್ನು ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಇಗೋರ್ ಪೊಲಿಖಾ ಮೊಘಲರು ಭಾರತದಲ್ಲಿ ನಡೆಸಿದ ಹತ್ಯಾಕಾಂಡಕ್ಕೆ ಹೋಲಿಸಿದ್ದಾರೆ.
ರಷ್ಯಾ ದಾಳಿಯಿಂದ ಉಕ್ರೇನ್ ಸೈನಿಕರು, ನಾಗರೀಕರು, ಉಕ್ರೇನ್‌ನಲ್ಲಿ ನೆಲೆಸಿರುವ ಅಮಾಯಕರು ಬಲಿಯಾಗು್ತ್ತಿದ್ದಾರೆ. ಇದು ಭಾರತದಲ್ಲಿ ರಜಪೂತರ ಮೇಲೆ ಮೊಘಲರು ನಡೆಸಿದ ಹತ್ಯಾಕಾಂಡಕ್ಕೆ ಸಮವಾಗಿದೆ. ಬಾಂಬ್ ದಾಳಿ, ಕ್ಷಿಪಣಿ ದಾಳಿ ನಿಲ್ಲಿಸಲು ರಷ್ಯಾ ಹಾಗೂ ವ್ಲಾದಿಮಿರ್ ಪುಟಿನ್ ಮನವಿ ಮಾಡುತ್ತಿದ್ದೇನೆ. ವಿಶ್ವದ ಎಲ್ಲಾ ಪ್ರಭಾವಿ ನಾಯಕರು ಪುಟಿನ್‌ಗೆ ಮನವರಿಕೆ ಮಾಡಿಕೊಡಬೇಕು. ಪ್ರಧಾನಿ ನರೇಂದ್ರ ಮೋದಿ ಕೂಡ ಪುಟಿನ್ ಜೊತೆ ಮಾತುಕತೆ ನಡೆಸಿ ಯುದ್ಧ ಅಂತ್ಯವಾಗಿಸಲು ನೆರವಾಗಬೇಕು ಎಂದು ಇಗೋರ್ ಪೊಲಿಖಾ ಹೇಳಿದ್ದಾರೆ.
Ukraine crisis: ನವೀನ್ ಸಾವು, ಪರಿಸ್ಥಿತಿ ಕುರಿತು ಮೋದಿ ಉನ್ನತ ಮಟ್ಟದ ಸಭೆ!
ಉಕ್ರೇನ್‌ನಲ್ಲಿರುವ ಭಾರತೀಯ ನಾಗರೀಕರು, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಉಕ್ರೇನ್ ರಾಯಭಾರಿ ಕಚೇರಿ ಎಲ್ಲಾ ನೆರವು ನೀಡಲಿದೆ. ಈ ಕುರಿತು ನೆರೆಯ ದೇಶಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಇಗೋರ್ ಪೊಲಿಖಾ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲೂ ಉಕ್ರೇನ್-ರಷ್ಯಾ ಸಮರ
ಅತ್ತ ಉಕ್ರೇನ್‌ನಲ್ಲಿ ಕಾದಾಡುತ್ತಿರುವ ರಷ್ಯಾ ಹಾಗೂ ಉಕ್ರೇನ್ ವಿಶ್ವಸಂಸ್ಥೆಯಲ್ಲೂ ಮಾತಿನ ಸಮರ ನಡೆಸಿವೆ. ‘ಉಕ್ರೇನ್ ನ್ಯಾಟೋ ಸೇರಲು ಮುಂದಾಗಿದ್ದೇ ರಷ್ಯಾಗೆ ದಾಳಿ ಮಾಡಲು ಪ್ರಚೋದಿಸಿತು’ ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಯ ತುರ್ತು ಅಧಿವೇಶನದಲ್ಲಿ ರಷ್ಯಾದ ರಾಯಭಾರಿ ವ್ಯಾಸಿಲಿ ನೆಬೆಂಜಿಯಾ ಖಾರವಾಗಿ ಹೇಳಿದ್ದಾರೆ.
Russia Ukraine war ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಪೋಷಕರಿಗೆ ಕರೆ ಮಾಡಿ ಪ್ರಧಾನಿ ಮೋದಿ ಸಾಂತ್ವನ!
ಇತ್ತ ಉಕ್ರೇನ್ ರಾಯಭಾರಿ ಸರ್ಗೈ ಮಾತನಾಡಿ, ‘ರಷ್ಯಾ ಅಣ್ವಸ್ತ್ರ ಬೆದರಿಕೆ ಹಾಕುತ್ತಿದೆ, ಎಂಥ ಹುಚ್ಚುತನ. ಉಕ್ರೇನ್‌ನ 2 ಭಾಗಗಳ ಮೇಲೆ ಹಿಡಿತ ಸಾಧಿಸುವ ಘೋಷಣೆ ಹಿಂಪಡೆಯುವಂತೆ ರಷ್ಯಾಗೆ ವಿಶ್ವಸಂಸ್ಥೆ ಹೇಳಬೇಕು. ಉಕ್ರೇನ್ ಉಳಿದರೆ ಇಂದು ವಿಶ್ವಸಂಸ್ಥೆ, ಪ್ರಜಾಸತ್ತೆ ಉಳಿದಂತೆ’ ಎಂದಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ರಷ್ಯಾ ರಾಯಭಾರಿ ವ್ಯಾಸಿಲಿ, ‘ರಷ್ಯಾ ಒಕ್ಕೂಟವು ಈ ಶತ್ರುತ್ವವನ್ನು ಆರಂಭಿಸಿಲ್ಲ. ಉಕ್ರೇನ್ ಹಾಗೂ ಜಾರ್ಜಿಯಾ ನ್ಯಾಟೋ ಒಕ್ಕೂಟವನ್ನು ಸೇರಲು ಮುಂದಾಗಿದ್ದವು. ರಷ್ಯಾ ವಿರೋಧಿ ಉಕ್ರೇನ್‌ನನ್ನು ಸೃಷ್ಟಿಸುವ ಯೋಜನೆಯೊಂದಿಗೆ ಅವರು (ಅಮೆರಿಕ) ಉಕ್ರೇನಿಗೆ ನ್ಯಾಟೋ ಸೇರಲು ಪ್ರಚೋದಿಸಿದ್ದಾರೆ. ನ್ಯಾಟೋ ಸೇರಲು ಮುಂದಾಗಿ ಉಕ್ರೇನ್ ಕೆಂಪು ಗೆರೆಯನ್ನು ದಾಟಿದೆ’ ಎಂದು ಕಿಡಿಕಾರಿದರು.
‘ಇದನ್ನು ತಡೆಯಲು ರಷ್ಯಾ ಉಕ್ರೇನ್ ವಿರುದ್ಧ ಕ್ರಮ (ಯುದ್ಧ) ಕೈಗೊಂಡಿದೆ. ಉಕ್ರೇನ್‌ನನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ರಷ್ಯಾ ಹೊಂದಿಲ್ಲ. ರಷ್ಯಾ ಕೂಡಾ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತದೆ’ ಎಂದಿದ್ದಾರೆ.
ಮಾತುಕತೆ ಅಪೂರ್ಣ:
ಸಂಜೆ ಆರಂಭವಾದ ಸಭೆ 3 ಸುತ್ತಿನ ಮಾತುಕತೆ ನಡೆಸಿತು. ಯುದ್ಧವಿರಾಮ ಘೋಷಣೆ ಮಾಡಬೇಕು ಎಂದು ಉಕ್ರೇನ್ ಆಗ್ರಹಿಸಿತು. ಇದೇ ವೇಳೆ ಉಕ್ರೇನ್ ನ್ಯಾಟೋ ಸಂಘಟನೆ ಸೇರುವುದನ್ನು ರಷ್ಯಾ ವಿರೋಧಿಸಿತು. ಈ ವೇಳೆ ಉಭಯ ದೇಶಗಳ ನಿಯೋಗದ ಪ್ರತಿನಿಧಿಗಳು ಪರಸ್ಪರ ಕೆಲವು ಷರತ್ತು ವಿಧಿಸಿದರು. ಹೀಗಾಗಿ ಷರತ್ತುಗಳ ವಿವರವನ್ನು ತಮ್ಮ ದೇಶಗಳ ಮುಖ್ಯಸ್ಥರ ಮುಂದಿಡಲು ಉಭಯ ದೇಶಗಳ ನಿಯೋಗಗಳು ತೀರ್ಮಾನಿಸಿದವು. ಈ ಸಭೆಯಲ್ಲಿ ಹೊರಬೀಳುವ ನಿಲುವುಗಳನ್ನು ಮುಂದಿನ ಸುತ್ತಿನ ಸಂಧಾನ ಮಾತುಕತೆಯಲ್ಲಿ ಚರ್ಚಿಸುವ ತೀರ್ಮಾನ ಮಾಡಲಾಯಿತು ಎಂದು ಮೂಲಗಳು ಹೇಳಿವೆ.
ಅನುಮಾನ:
ಸೋಮವಾರದ ಸಭೆಗೆ ಉಕ್ರೇನ್ ತನ್ನ ರಕ್ಷಣಾ ಸಚಿವರು ಸೇರಿದಂತೆ ಹಿರಿಯ ಸಚಿವರ ನಿಯೋಗ ಕಳುಹಿಸಿದ್ದರೆ, ರಷ್ಯಾ ಅಧ್ಯಕ್ಷ ಪುಟಿನ್ ಸಂಸ್ಕೃತಿ ವಿಷಯದಲ್ಲಿ ತಮ್ಮ ಸಲಹೆಗಾರ ನೇತೃತ್ವದಲ್ಲಿ ನಿಯೋಗ ರವಾನಿಸಿದ್ದರು. ಹೀಗಾಗಿ ಸಂಧಾನ ಮಾತುಕತೆ ವಿಷಯದಲ್ಲಿ ಪುಟಿನ್ ಎಷ್ಟುಗಂಭೀರವಾಗಿದ್ದರೆ ಎಂಬ ಅನುಮಾನ ಹುಟ್ಟುಹಾಕಿದೆ.