ಮನೆಗೆ ಹಿಂದಿರುಗುವ ವೇಳೆ ಆರ್‌ಎಸ್ಎಸ್ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ, ಸ್ಥಳದಲ್ಲೆ ಸಾವು , ಮಕ್ಕಳ ಜೊತೆ ಸಮಯ ಕಳೆಯಲು ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.
ಫಿರೋಜ್‌ಪುರ್ (ನ.16) ದೇಶಾದ್ಯಂತ ಆರ್‌ಎಸ್‌ಎಸ್ 100ನೇ ವರ್ಷಾಚರಣೆ ಸಂಭ್ರಮಾಚರಣೆ ಆಚರಿಸುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯದಲ್ಲೂ 100ನೇ ವರ್ಷದ ಪ್ರಯುಕ್ತ ಪಥಸಂಚಲನ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಿದೆ. ಆದರೆ ಈ ಸಂಭ್ರಮಾಚರಣೆ ನಡುವೆ ಆರ್‌ಎಸ್ಎಸ್ ಕಾರ್ಯಕರ್ತನ ಹತ್ಯೆಯಾಗಿದೆ. ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಆರ್‌ಎಸ್ಎಸ್ ಕಾರ್ಯಕರ್ತ ಮಕ್ಕಳ ಜೊತೆ ಕೆಲ ಸಮಯ ಕಳೆಯಲು ಅಂಗಡಿ ಬಾಗಿಲು ಮುಚ್ಚಿ ಮನೆಗೆ ವಾಪಾಸ್ಸಾಗುವ ವೇಳೆ ಅಪರಿಚಿತರು ಗುಂಡಿನ ದಾಳಿ ನಡೆಸಿದ ಘಟನೆ ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆದಿದೆ. ಈ ಕಾರ್ಯಕರ್ತ ಆರ್‌ಎಸ್ಎಸ್ ಪ್ರಮುಖ ನಾಯಕ ದೀನ ನಾಥ್ ಅವರ ಮೊಮ್ಮಗ ನವೀನ್ ಆರೋರ.
ಸ್ಥಳದಲ್ಲೇ ಮೃತಪಟ್ಟ ಆರ್‌ಎಸ್ಎಸ್ ಕಾರ್ಯಕರ್ತ
ದೀನ ನಾಥ್ ಆರ್‌ಎಸ್ಎಸ್ ಕಂಡ ಅತೀ ದೊಡ್ಡ ನಾಯಕ. ಆರ್‌ಎಸ್ಎಸ್ ಕಟ್ಟಿ ಬೆಳೆಸುವಲ್ಲಿ ದೀನ ನಾಥ್ ಪ್ರಮುಖ ಪಾತ್ರವಹಿಸಿದ್ದರು. ಇದೀಗ ದೀನ ನಾಥ್ ಮೊಮ್ಮಗ ನವೀನ್ ಅರೋರ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ಪ್ರತಿ ದಿನ ನವೀನ್ ಆರೋರ ಮಕ್ಕಳ ಜೊತೆ ಸಮಯ ಕಳೆಯಲು ಅಂಗಡಿ ಬಾಗಿಲು ಮುಚ್ಚಿ ಮನೆಗೆ ಆಗಮಿಸುತ್ತಾರೆ. ಇದರಂತೆ ಇಂದು (ನ.16) ಮನೆಗೆ ಮರಳುವಾಗ ಅಪರಿಚಿತರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ಇಬ್ಬರು ಮಕ್ಕಳ ತಂದೆ ನವೀನ್ ಆರೋರ
ನವೀನ್ ಅರೋರ ಪ್ರತಿ ದಿನ ಶಾಪ್‌ನಿಂದ ಮನೆಗೆ ತೆರಳಿ ಕೆಲ ಹೊತ್ತು ಮಕ್ಕಳ ಜೊತೆ ಸಮಯ ಕಳೆಯುತ್ತಾರೆ. ಹೀಗೆ ಇಂದು ನಾನು ಹಾಗೂ ನವೀನ್ ಅರೋರ ಮಾತನಾಡುತ್ತಿದ್ದೇವೆ. ಬಳಿಕ ಮಕ್ಕಳ ಜೊತೆ ಸಮಯ ಕಳೆಯಲು ಶಾಪ್‌ನಿಂದ ತೆರಳಿದ್ದಾರೆ. ಕೆಲ ಹೊತ್ತಲ್ಲೇ ಸ್ಥಳೀಯ ವ್ಯಾಪಾರಿಗಳು ಆಗಮಿಸಿ ಮಾಹಿತಿ ನೀಡಿದರು ಎಂದು ನವೀನ್ ಅರೋರ ಕಣ್ಣೀರಿಟ್ಟಿದ್ದಾರೆ. ಎಲ್ಲರ ಜೊತೆಗೂ ಚೆನ್ನಾಗಿದ್ದ. ಯಾರೂ ಜೊತೆಗೂ ಶತ್ರುತ್ವ ಇಲ್ಲ. ಆದರೂ ನನ್ನ ಮಗನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ನವೀನ್ ತಂದೆ ಕಣ್ಣೀರಿಟ್ಟಿದ್ದಾರೆ.
ಸಿಸಿಟಿವಿ ಪರಿಶೀಲಿಸಿದ ಪೊಲೀಸರು
ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿರುವುದು ಪತ್ತೆಯಾಗಿದೆ. ಗುಂಡಿನ ದಾಳಿ ನಡೆಸಿದ ಅಪರಿಚಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆ ಪೊಲೀಸರು ತಂಡ ರಚಿಸಿದ್ದಾರೆ.
ಘಟನೆಗೆ ಆಘಾತ ವ್ಯಕ್ತಪಡಿಸಿದ ಬಿಜೆಪಿ ನಾಯಕ
ಘಟನೆಗೆ ಆಘಾತ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸುಕಮಿಂದರ್‌ಪಾಲ್ ಸಿಂಗ್ ಗ್ರೆವಾಲ್, ಹಗಲಿನಲ್ಲೇ ಎಲ್ಲರು ಇರುವಾಗಲೇ ಈ ಘಟನೆ ನಡೆದಿದೆ. ರೌಡಿಗಳು, ಪುಂಡರು ರಾಜಾರೋಷವಾಗಿ ಬಂದು ಗುಂಡಿನ ದಾಳಿ ನಡೆಸುತ್ತಿದ್ದಾರೆ. ಈ ಘಟನೆ ಆಘಾತ ತಂದಿದೆ. ನವೀನ್ ಆರೋರ ಹತ್ಯೆಯನ್ನು ಅತ್ಯಂತ ಗಂಭೀರವಾಗಿದೆ. ದೀನಾ ನಾಥ್ ಅವರ ಪುತ್ರ ಬಲದೇವ್ ರಾಜ್ ಅರೋರ ಹಾಗೂ ಇದೀಗ ಮೃತಪಟ್ಟ ನವೀನ್ ಆರೋರ ಎಲ್ಲರೂ ಆರ್‌ಎಸ್‌ಎಸ್‌ನಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಪಾಡಿಗೆ ವ್ಯಾಪಾರ ಮಾಡುತ್ತಿದ್ದ ನವೀನ್ ಆರೋರ ಅವರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗಿದೆ ಎಂದು ಸುಕಮಿಂದರ್‌ಪಾಲ್ ಹೇಳಿದ್ದಾರೆ.
