ದುರಹಂಕಾರಿಗಳನ್ನು ಭಗವಾನ್ ರಾಮ 241ಕ್ಕೆ ನಿಲ್ಲಿಸಿದ್ದಾನೆ: ಬಿಜೆಪಿಗೆ ಟಾಂಗ್ ಕೊಟ್ಟ ಆರೆಸ್ಸೆಸ್ ನಾಯಕ!
ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್, ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ನಿರ್ವಹಣೆಯನ್ನು ಟೀಕೆ ಮಾಡಿದ್ದಾರೆ. ಫಲಿತಾಂಶ ಅವರಿಗೆ ಸಿಗಲು ದುರಹಂಕಾರವೇ ಕಾರಣ ಎಂದಿದ್ದಾರೆ.
ನವದೆಹಲಿ (ಜೂ.14): ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ನೀರಸ ಪ್ರದರ್ಶನಕ್ಕೆ ಬಿಜೆಪಿ ನಾಯಕರ ದುರಹಂಕಾರವೇ ಕಾರಣ ಎಂದು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕರಾದ ಆರೆಸ್ಸೆಸ್‌ನ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ. ಜೈಪುರ ಸಮೀಪದ ಕನೋಟಾದಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಂದ್ರೇಶ್ ಕುಮಾರ್, "ಶ್ರೀರಾಮನ ಭಕ್ತಿ ಮಾಡಿದವರು ಹಂತ ಹಂತವಾಗಿ ದುರಹಂಕಾರಿಯಾದರು. ಆ ಪಕ್ಷವನ್ನು ಅತಿದೊಡ್ಡ ಪಕ್ಷವೆಂದು ಘೋಷಿಸಲಾಯಿತು ಆದರೆ ದುರಹಂಕಾರದ ಕಾರಣದಿಂದ ಭಗವಾನ್ ರಾಮ ಇವರನ್ನು 241 ಕ್ಕೆ ನಿಲ್ಲಿಸಿದ" ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 240 ಸ್ಥಾನಗಳನ್ನು ಗೆದ್ದರೂ ಬಹುಮತದ ಮಾರ್ಕ್ ದಾಟಲು ವಿಫಲವಾದ ಬಿಜೆಪಿಯನ್ನು ಈ ಮೂಲಕ ತಿವಿದಿದ್ದಾರೆ. 2014ರ ಲೋಕಸಭೆ ಚುನಾವಣೆಯ ಬಳಿಕ ಬಿಜೆಪಿಯ ಕೆಟ್ಟ ಪ್ರದರ್ಶನ ಇದಾಗಿದೆ.
ಇದರೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ನೇರ ವಿರೋಧಿಯಾಗಿದ್ದ ಇಂಡಿಯಾ ಬ್ಲಾಕ್‌ಅನ್ನು ಟೀಕಿಸಿದ ಇಂದ್ರೇಶ್ ಕುಮಾರ್, ಅವರ ರಾಮ ವಿರೋಧಿಗಳು ಎಂದು ಹೇಳಿದ್ದಾರೆ. ಪ್ರತಿಪಕ್ಷಗಳ ಮೈತ್ರಿಯನ್ನು ಹೆಸರಿಸದೆ, "ರಾಮನಲ್ಲಿ ನಂಬಿಕೆಯಿಲ್ಲದವರನ್ನು ಒಟ್ಟಾರೆಯಾಗಿ 234ಕ್ಕೆ ನಿಲ್ಲಿಸಲಾಗಿದೆ. ದೇವರ ನ್ಯಾಯವು ನಿಜ ಮತ್ತು ಆನಂದದಾಯಕವಾಗಿದೆ" ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ 234 ಸ್ಥಾನಗಳನ್ನು ಪಡೆದುಕೊಂಡಿದೆ.
ಅಹಂ ಇರಬಾರದು: ಬಿಜೆಪಿಗೆ ಆರೆಸ್ಸೆಸ್‌ನ ಮೋಹನ್ ಭಾಗವತ್ ಚಾಟಿ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಾರ್ವಜನಿಕ ಸೇವೆಯಲ್ಲಿ ನಮ್ರತೆಯ ಮಹತ್ವವನ್ನು ಹೇಳಿದ ಕೆಲವೇ ದಿನಗಳ ನಂತರ ಆರ್‌ಎಸ್‌ಎಸ್ ನ ಮತ್ತೊಬ್ಬ ಹಿರಿಯರ ಈ ಹೇಳಿಕೆಗಳು ಬಂದಿವೆ. "ನಿಜವಾದ ಸೇವಕನು ಘನತೆಯನ್ನು ಕಾಯ್ದುಕೊಳ್ಳುತ್ತಾನೆ. ಅವನು ಕೆಲಸ ಮಾಡುವಾಗ ನೀತಿಯನ್ನು ಅನುಸರಿಸುತ್ತಾನೆ. "ನಾನು ಈ ಕೆಲಸ ಮಾಡಿದ್ದೇನೆ" ಎಂದು ಹೇಳುವ ಅಹಂಕಾರವನ್ನು ಆತ ಎಂದಿಗೂ ಹೊಂದಿರೋದಿಲ್ಲ ಅಂತಹ ವ್ಯಕ್ತಿಯನ್ನು ಮಾತ್ರ ನಿಜವಾದ ಸೇವಕ ಎಂದು ಕರೆಯಬಹುದು" ಎಂದು ಭಾಗವತ್ ಹೇಳಿದರು. ಭಾಗವತ್ ಅವರು ಅಹಿಂಸೆ ಮತ್ತು ಸತ್ಯದ ತತ್ವಗಳನ್ನು ಉಲ್ಲೇಖಿಸಿ ಪ್ರತಿಯೊಬ್ಬರ ಬಗ್ಗೆ ನಮ್ರತೆ ಮತ್ತು ಸದ್ಭಾವನೆಯ ಅಗತ್ಯವನ್ನು ಒತ್ತಿ ಹೇಳಿದರು.
ಮಣಿಪುರ ವಿಚಾರವನ್ನು ಬೇಗ ಇತ್ಯರ್ಥ ಮಾಡಿ, ಹೊಸ ಸರ್ಕಾರದ ಬೆನ್ನಲ್ಲಿಯೇ ಆರೆಸ್ಸೆಸ್ ತಾಕೀತು!