ಅಹಂ ಇರಬಾರದು: ಬಿಜೆಪಿಗೆ ಆರೆಸ್ಸೆಸ್‌ನ ಮೋಹನ್ ಭಾಗವತ್ ಚಾಟಿ
ಇತ್ತೀಚೆಗೆ ಬಿಜೆಪಿ ಅಂದುಕೊಂಡಿದ್ದ 400 ಸ್ಥಾನ ಹೋಗಲಿ, ಕನಿಷ್ಠ ಬಹುಮತದ 272 ಸ್ಥಾನದ ಗುರಿಯನ್ನೂ ದಾಟದೆ 240 ಸ್ಥಾನ ಪಡೆದ ಬಗ್ಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಹಾಗೂ ಆರೆಸ್ಸೆಸ್ ಸಂಬಂಧಿ ನಿಯತಕಾಲಿಕೆ ‘ಆರ್ಗನೈಸರ್’ನಲ್ಲಿ ಚಾಟಿ ಬೀಸಲಾಗಿದೆ.
ನವದೆಹಲಿ (ಜೂ.12): ಇತ್ತೀಚೆಗೆ ಬಿಜೆಪಿ ಅಂದುಕೊಂಡಿದ್ದ 400 ಸ್ಥಾನ ಹೋಗಲಿ, ಕನಿಷ್ಠ ಬಹುಮತದ 272 ಸ್ಥಾನದ ಗುರಿಯನ್ನೂ ದಾಟದೆ 240 ಸ್ಥಾನ ಪಡೆದ ಬಗ್ಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಹಾಗೂ ಆರೆಸ್ಸೆಸ್ ಸಂಬಂಧಿ ನಿಯತಕಾಲಿಕೆ ‘ಆರ್ಗನೈಸರ್’ನಲ್ಲಿ ಚಾಟಿ ಬೀಸಲಾಗಿದೆ. ಸಮಾರಂಭವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್ ‘ನಿಜವಾದ ಕಾರ್ಯಕರ್ತರು ಎಂದೂ ಅಹಂಕಾರಿ ಆಗಿರುವುದಿಲ್ಲ. ಚುನಾವಣಾ ಪ್ರಚಾರದ ವೇಳೆ ಶಿಸ್ತು ಕಾಪಾಡಲಿಲ್ಲ. ಚುನಾವಣೆಯನ್ನು ನಾವು ಸ್ಪರ್ಧೆ ರೀತಿಯಲ್ಲಿ ನೋಡಬೇಕೇ ವಿನಃ ಯುದ್ಧದ ರೀತಿಯಲ್ಲಲ್ಲ’ ಎಂದು ಕಿವಿಮಾತು ಹೇಳಿದ್ದಾರೆ.
ಜೊತೆಗೆ, ಚುನಾವಣೆಯಲ್ಲಿ ಆಡಿದ ಮಾತುಗಳು, ಪರಸ್ಪರರ ನೀಡಿದ ಎಚ್ಚರಿಕೆಗಳು, ಇಂಥ ಮಾತುಗಳಿಂದ ಸಮಾಜವನ್ನು ವಿಭಜನೆ ಮಾಡಿದ ಹೊರತಾಗಿಯೂ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇದ್ದದ್ದು, ತಂತ್ರಜ್ಞಾನ ಬಳಸಿಕೊಂಡು ವಿನಾಕಾರಣ ಇಂಥ ವಿಷಯಗಳಲ್ಲಿ ಸಂಘ ಪರಿವಾರವನ್ನು ಎಳೆದು ತಂದಿದ್ದು, ಇದೆಲ್ಲವೂ ಜ್ಞಾನವನ್ನು ಬಳಸಿಕೊಳ್ಳುವ ರೀತಿಯೇ? ದೇಶವನ್ನು ಈ ರೀತಿ ಮುನ್ನಡೆಸಲು ಸಾಧ್ಯವೇ ಎಂದು ಪ್ರಚಾರದ ವೇಳೆ ಕೇಳಿಬಂದ ಆರೋಪ, ಪ್ರತ್ಯಾರೋಪ, ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಕೇಳಿ ಬಂದ ಮಾತುಗಳಿಗೆ ಭಾಗವತ್ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಚ್‌ಡಿಕೆ ಮಂಡ್ಯಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣ ಉಳಿಸಿಕೊಳ್ತಾರೆ: ಡಿ.ಕೆ.ಸುರೇಶ್
ಆರ್ಗನೈಸರ್ ಹೇಳಿದ್ದೇನು?: ‘ಅತಿಯಾದ ಆತ್ಮವಿಶ್ವಾಸ’ ಹೊಂದಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಅದರ ಅನೇಕ ನಾಯಕರ ‘ರಿಯಾಲಿಟಿ ಚೆಕ್’ ಆಗಿ ಈ ಲೋಕಸಭೆ ಚುನಾವಣಾ ಫಲಿತಾಂಶಗಳು ಬಂದಿವೆ. ಆದರೂ ಕೆಲವು ನಾಯಕರು ‘ಒಡೆದು ಹೋದ ಗುಳ್ಳೆ’ಯಲ್ಲೇ ಸಂಭ್ರಮ ಪಟ್ಟಿದ್ದಾರೆ. ಇನ್ನು ಕೆಲವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಭೆಯ ಹೊಳಪನ್ನು ಆನಂದಿಸುತ್ತಿದ್ದಾರೆ. ಆದರೆ ಇವರಾರೂ ಬೀದಿಯಲ್ಲಿನ ಜನಸಾಮಾನ್ಯರ ದನಿಯನ್ನು ಕೇಳುತ್ತಿಲ್ಲ ಎಂದು ಆರ್‌ಎಸ್‌ಎಸ್ ಸಂಬಂಧಿತ ನಿಯತಕಾಲಿಕೆ ‘ಆರ್ಗನೈಸರ್’ ಅಸಮಾಧಾನ ವ್ಯಕ್ತಪಡಿಸಿದೆ.
ಇದೇ ವೇಳೆ, ಆರೆಸ್ಸೆಸ್ ಏನೂ ಬಿಜೆಪಿಯ ‘ಫೀಲ್ಡ್ ಫೋರ್ಸ್’ (ಮೈದಾನದಲ್ಲಿನ ಪಡೆ) ಅಲ್ಲವಾದರೂ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದರ ಸ್ವಯಂಸೇವಕರಿಗೆ ಚುನಾವಣೆಯಲ್ಲಿ ಸಹಕಾರ ಕೋರಲಿಲ್ಲ ಎಂದು ತನ್ನ ಇತ್ತೀಚಿನ ಸಂಚಿಕೆಯಲ್ಲಿ ಕಟುವಾಗಿ ನುಡಿದಿದೆ. ‘ನರೇಂದ್ರ ಮೋದಿ ಅವರು 400+ ಗುರಿ ಇಟ್ಟುಕೊಂಡಿದ್ದರು. ಇದು ತಮಗೆ ಹಾಕಿದ ಗುರಿ ಎಂದು ಕಾರ್ಯಕರ್ತರು ಭಾವಿಸಲೇ ಇಲ್ಲ. ಇಂಥ ಗುರಿ ತಲುಪಬೇಕಾದರೆ ಕಠಿಣ ಶ್ರಮ ಬೇಕು. ಕೇವಲ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕುವುದರಿಂದಲ್ಲ’ ಎಂದು ನಿಯತಕಾಲಿಕೆಯಲ್ಲಿ ಆರೆಸ್ಸೆಸ್ ಚಿಂತಕ ರತನ್ ಶಾರದಾ ಬರೆದಿದ್ದಾರೆ.
‘ಆದರೂ ಕೆಲವರು ಗುಳ್ಳೆಗಳಲ್ಲೇ ಸಂಭ್ರಮಿಸುತ್ತಿದ್ದಾರೆ. ಮೋದಿ ಅವರ ಪ್ರತಿಬಿಂಬದ ಹೊಳಪಲ್ಲೇ ಆನಂದಿಸುತ್ತಿದ್ದಾರೆ. ಇವರಾರೂ ಬೀದಿಗಳಲ್ಲಿನ ಧ್ವನಿಯನ್ನು ಕೇಳುವವರಲ್ಲ’ ಎಂದು ಟೀಕಿಸಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದ್ದ ಹಳೆಯ ಸಮರ್ಪಿತ ಕಾರ್ಯಕರ್ತರನ್ನು ಚುನಾವಣೆ ವೇಳೆ ನಿರ್ಲಕ್ಷ್ಯ ಮಾಡಲಾಯಿತು. ಆದರೆ ಹೊಸ ಯುಗದ ಸಾಮಾಜಿಕ ಮಾಧ್ಯಮ ಯುಗದ ‘ಸೆಲ್ಫಿ ಪ್ರಿಯ’ ಕಾರ್ಯಕರ್ತರಿಗೆ ಮಣೆ ಹಾಕಲಾಯಿತು. ಇದರ ಪ್ರತಿಫಲವು ಚುನಾವಣಾ ಫಲಿತಾಂಶಗಳಲ್ಲಿ ಸ್ಪಷ್ಟವಾಗಿದೆ’ ಎಂದಿದ್ದಾರೆ.
ಇದೇ ವೇಳೆ, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ (ಶಿಂಧೆ ಬಣ) ಮೈತ್ರಿ ಸರ್ಕಾರ ಗಟ್ಟಿ ಆಗಿತ್ತು. ಆದರೂ ಎನ್‌ಸಿಪಿಯನ್ನು ಒಡೆದು ಅಜಿತ್ ಪವಾರ್‌ರನ್ನು ಮೈತ್ರಿಕೂಟಕ್ಕೆ ಕರೆತರುವ ಅಗತ್ಯವೇನಿತ್ತು? ಇದರ ಪರಿಣಾಮವೇ ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ಕೂಟಕ್ಕೆ ಕಮ್ಮಿ ಸ್ಥಾನ ಬಂದಿವೆ ಎಂದು ಹೇಳಿದ್ದಾರೆ.
ಹಗರಣಗಳಲ್ಲೇ ಮುಳುಗಿದ ಕಾಂಗ್ರೆಸ್ ಸರ್ಕಾರ: ಸಿ.ಪಿ.ಯೋಗೇಶ್ವರ್
ಆರೆಸ್ಸೆಸ್ ಹೇಳಿದ್ದೇನು?
- ಚುನಾವಣೆಯಲ್ಲಿ ಬಿಜೆಪಿಗರು ಒಡೆದು ಹೋಗುವ ಗುಳ್ಳೆ ರೀತಿ ಸಂಭ್ರಮಿಸಿದರು
- ನರೇಂದ್ರ ಮೋದಿಯವರ ಪ್ರಭೆಯ ಹೊಳಪಿನಲ್ಲಿ ಕೆಲವರು ಆನಂದಿಸಿದರು
- ಪಕ್ಷದ ಹಳೆಯ ಕಾರ್ಯಕರ್ತರನ್ನು ಮರೆತು, ಸೆಲ್ಫಿ ಪ್ರಿಯರನ್ನು ಅವಲಂಬಿಸಿದರು
- 400 ಸ್ಥಾನ ಗೆಲ್ಲು ದೇಶದ ಓಣಿ ಓಣಿಗಳಲ್ಲಿ ಓಡಾಡಿ ಶ್ರಮ ಪಡಬೇಕು
- ಕೇವಲ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಂದ ಗೆಲ್ಲಲಾಗದು