ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಆಹ್ವಾನ ತಿರಸ್ಕರಿಸಿದ ಲಾಲೂ ಪ್ರಸಾದ್ ಯಾದವ್!
ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನೀಡಿದ್ದ ಆಹ್ವಾನವನ್ನು ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ತಿರಸ್ಕರಿಸಿದ್ದಾರೆ.
ನವದೆಹಲಿ (ಜ.17): ಅಯೋಧ್ಯೆಯಲ್ಲಿನ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನೀಡಲಾಗಿದ್ದ ಆಹ್ವಾನವನ್ನು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರು ತಿರಸ್ಕರಿಸಿದ್ದಾರೆ. ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನೀಡಲಾಗಿದ್ದ ಆಹ್ವಾನವನ್ನು ತಿರಸ್ಕರಿಸಿದ ಇತ್ತೀಚಿನ ವಿರೋಧ ಪಕ್ಷದ ನಾಯಕರಲ್ಲಿ 75 ವರ್ಷದ ಲಾಲೂ ಪ್ರಸಾದ್ ಕೂಡ ಸೇರಿಕೊಂಡಿದ್ದಾರೆ. ಇದನ್ನೂ ಮುನ್ನ ಮಹಾರಾಷ್ಟ್ರದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಕೂಡ ತಾವು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತಾವು ಹೋಗುತ್ತಿಲ್ಲ ಎಂದು ತಿಳಿಸಿದ್ದರು. ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆಯುವುದಾಗಿ ತಿಳಿಸಿದ್ದಾರೆ. ವಿಶೇಷವೆಂದರೆ, ಎಲ್‌ಕೆ ಆಡ್ವಾಣಿ ನೇತೃತ್ವದಲ್ಲಿ ನಡೆದ ರಥಯಾತ್ರೆಯನ್ನು ಬಿಹಾರದ ಸಮಷ್ಟಿಪುರದಲ್ಲಿ ನಿಲ್ಲಿಸಿದ್ದ ಲಾಲೂ ಪ್ರಸಾದ್ ಯಾದವ್ ಈಗ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೂ ಬರಲು ನಿರಾಕರಿಸಿದ್ದಾರೆ.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಪತ್ರ ಬರೆದಿರುವ ಪವಾರ್, ಜನವರಿ 22 ರಂದು ಪ್ರಾಣ ಪ್ರತಿಷ್ಠಾ ಸಮಾರಂಭ ಮುಗಿದ ನಂತರ ಮುಕ್ತವಾಗಿ ಸಮಯ ತೆಗೆದುಕೊಂಡು ದರ್ಶನಕ್ಕೆ ಬರುತ್ತೇನೆ ಮತ್ತು ಅಷ್ಟರೊಳಗೆ ರಾಮಮಂದಿರ ನಿರ್ಮಾಣ ಕಾರ್ಯ ಕೂಡ ಪೂರ್ಣಗೊಳ್ಳುತ್ತದೆ ಎಂದು ಬರೆದಿದ್ದಾರೆ. ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಅವರು ಉದ್ಘಾಟನಾ ಕಾರ್ಯಕ್ರಮದ ನಂತರ ತಮ್ಮ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಈ ಹಿಂದೆಯೇ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಅವರು ಜನವರಿ 22 ರಂದು 'ಸರ್ಬ ಧರ್ಮ' (ಸರ್ವಧರ್ಮ) ಸಮಾವೇಶವನ್ನು ಕೋಲ್ಕತ್ತದಲ್ಲಿ ನಡೆಸುವುದಾಗಿ ಹೇಳಿದ್ದಾರೆ. ಈ ಕಾರ್ಯಕ್ರಮವನ್ನು ಬಿಜೆಪಿ ಮತ್ತು ಆರೆಸ್ಸೆಸ್ ಧಾರ್ಮಿಕ ಕಾರ್ಯಕ್ರಮವನ್ನಾಗಿ ಮಾಡದೆ ರಾಜಕೀಯ ಕಾರ್ಯಕ್ರಮವನ್ನಾಗಿ ಪರಿವರ್ತಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ತನ್ನ ನಾಯಕರು ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಘೋಷಣೆ ಮಾಡಿದೆ. ಈ ನಡುವೆ ಬಿಜೆಪಿ ಪಕ್ಷವು ರಾಮ ಮಂದಿರ ಆಹ್ವಾನವನ್ನು ತಿರಸ್ಕರಿಸಿದ್ದ ಕಾರಣಕ್ಕೆ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿರಿಸಿಕೊಂಡಿದ್ದು, ಅವರನ್ನು ರಾಮ ವಿರೋಧಿ ಸಂಘಟನೆಗಳು ಎಂದು ಕರೆದಿದೆ.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ದೇಶಾದ್ಯಂತದ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ಸಂತರು ಮತ್ತು ಗಣ್ಯರು ಸೇರಿದಂತೆ 7,000 ಕ್ಕೂ ಹೆಚ್ಚು ಜನರು ಮಹಾ ಉದ್ಘಾಟನೆಗೆ ಹಾಜರಾಗುವ ನಿರೀಕ್ಷೆಯಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹೆಚ್ಚುವರಿಯಾಗಿ, ವಿವಿಧ ದೇಶಗಳ ಸುಮಾರು 100 ಪ್ರತಿನಿಧಿಗಳು ಪವಿತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ವೈದ್ಯಕೀಯ ಕಾರಣಕ್ಕೆ ಜಾಮೀನು ಪಡೆದು ಲಾಲೂ ಪ್ರಸಾದ್ ಬ್ಯಾಡ್ಮಿಂಟನ್ ಆಟ, ಜಾಮೀನು ರದ್ದತಿಗೆ ಮನವಿ
ಸಮಾರಂಭಕ್ಕೆ ಮುನ್ನ ಏಳು ದಿನಗಳ ಆಚರಣೆಗಳು ಮಂಗಳವಾರದಿಂದ ಅಯೋಧ್ಯೆಯಲ್ಲಿ ಪ್ರಾರಂಭವಾಗಿದೆ. ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮ್ ಲಲ್ಲಾವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ.
ಸುಪ್ರೀಂನಿಂದ ಬಿಗ್ ರಿಲೀಫ್: ರಾಹುಲ್ ಗಾಂಧಿಗೆ ಭರ್ಜರಿ ಬಾಡೂಟ ಮಾಡಿ ಬಡಿಸಿದ ಲಾಲೂ ಪ್ರಸಾದ್