Ricky Kej Grammy Award: ಖ್ಯಾತ ಸಂಗೀತ ರಚನೆಕಾರ ರಿಕ್ಕಿ ಕೇಜ್‌ ಅವರ ಗ್ರಾಮಿ ಪ್ರಶಸ್ತಿ ಬೆಂಗಳೂರು ಕಸ್ಟಮ್ಸ್‌ನಲ್ಲಿ ಸಿಲುಕಿಹಾಕಿಕೊಂಡಿದೆ. ಅಮೆರಿಕದ ಫೆಡ್‌ಎಕ್ಸ್‌ ಮಾಡಿರುವ ಎಡವಟ್ಟಿನಿಂದ ರಿಕ್ಕಿ ಕೇಜ್‌ ಗ್ರಾಮಿ ಪ್ರಶಸ್ತಿ ಎರಡು ತಿಂಗಳಿಂದ ಕಸ್ಟಮ್ಸ್‌ನಲ್ಲೇ ಉಳಿದಿದೆ. 

ಬೆಂಗಳೂರು: ಖ್ಯಾತ ಸಂಗೀತ ಸಂಯೋಜಕ ರಿಕ್ಕಿ ಕೇಜ್‌ (Ricky Kej) ಎರಡೆರಡು ಗ್ರಾಮಿ ಪ್ರಶಸ್ತಿಯನ್ನು (Grammy Award) ಮುಡಿಗೇರಿಸಿಕೊಂಡವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಎತ್ತರಕ್ಕೆ ಕೊಂಡೊಯ್ದವರು. ಆದರೆ ರಿಕ್ಕಿ ಕೇಜ್‌ಗೆ ಸಿಕ್ಕ ಎರಡನೇ ಗ್ರಾಮಿ ಪ್ರಶಸ್ತಿಯ ಮೆಡಲ್‌ ಇನ್ನೂ ಅವರ ಕೈಸೇರಿಲ್ಲ. ಯಾಕೆಂದರೆ ಬೆಂಗಳೂರು ಕಸ್ಟಮ್ಸ್‌ ಇಲಾಖೆಯಲ್ಲಿ (Bengaluru Customs Department) ಗ್ರಾಮಿ ಪ್ರಶಸ್ತಿಯನ್ನು ತಡೆಹಿಡಿಯಲಾಗಿದೆ. ಈ ಬಗ್ಗೆ ರಿಕ್ಕಿ ಕೇಜ್‌ ಅವರೇ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದು, ಎರಡು ತಿಂಗಳಿಗಿಂತ ಹೆಚ್ಚು ಸಮಯವಾದರೂ ನನ್ನ ಪ್ರಶಸ್ತಿ ನನ್ನ ಕೈಸೇರಿಲ್ಲ. ಬೆಂಗಳೂರು ಕಸ್ಟಮ್ಸ್‌ನಲ್ಲಿ ಅದು ಸಿಲುಕಿಕೊಂಡಿದೆ, ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. 

ರಿಕ್ಕಿ ಕೇಜ್‌ ಪ್ರಕಾರ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳದ್ದೇನು ಸಮಸ್ಯೆಯಿಲ್ಲ ಮತ್ತು ಬೇಕೆಂದು ಅವರು ತಡೆ ಹಿಡಿದಿಲ್ಲ. ಆದರೆ ಅಮೆರಿಕದ ಕೊರಿಯರ್‌ ಸಂಸ್ಥೆ ಫೆಡ್‌ಎಕ್ಸ್‌ (FedEx) ಸರಿಯಾದ ಮಾಹಿತಿಯನ್ನು ಕಸ್ಟಮ್ಸ್‌ ಇಲಾಖೆಗಾಗಲೀ ಅಥವಾ ರಿಕ್ಕಿ ಕೇಜ್‌ಗಾಗಲಿ ನೀಡುತ್ತಿಲ್ಲ. ಇದೇ ಕಾರಣಕ್ಕಾಗಿ ಕಸ್ಟಮ್ಸ್‌ ಅಧಿಕಾರಿಗಳು ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. FedEx ಸಂಸ್ಥೆ ಈ ಸಂಬಂಧ ಪ್ರತಿಕ್ರಿಯೆಯನ್ನು ಕೂಡ ನೀಡುತ್ತಿಲ್ಲ ಎಂದು ರಿಕ್ಕಿ ಕೇಜ್‌ ಬೇಸರ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: Ricky Kej: ಗ್ರ್ಯಾಮಿ ವಿಜೇತ ರಿಕ್ಕಿ ಕೇಜ್‌ ಕನ್ನಡದ ಹೆಮ್ಮೆ: ಸಿಎಂ ಬೊಮ್ಮಾಯಿ

ಕಸ್ಟಮ್ಸ್‌ನಿಂದ ಸಹಾಯ:
ರಿಕ್ಕಿ ಕೇಜ್‌ ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆಯನ್ನು ಹಂಚಿಕೊಂಡ ನಂತರ ಪ್ರತಿಕ್ರಿಯಿಸಿರುವ ಬೆಂಗಳೂರು ಕಸ್ಟಮ್ಸ್‌ ಇಲಾಖೆ, ಆದಷ್ಟು ಬೇಗ ಪರಿಹಾರ ನೀಡುವ ಭರವಸೆ ಕೊಟ್ಟಿದೆ. ಫೆಡ್‌ ಎಕ್ಸ್‌ ಮತ್ತು ರಿಕ್ಕಿ ಕೇಜ್‌ ಇಬ್ಬರನ್ನೂ ಪ್ಯಾಕೇಜ್‌ ಸಂಬಂಧಿಸಿದ ಮಾಹಿತಿಯನ್ನು ಕಸ್ಟಮ್ಸ್‌ ಇಲಾಖೆ ಕೇಳಿದೆ. ಪ್ಯಾಕೇಜ್‌ ಟ್ರಾಕಿಂಗ್‌ ಸಂಖ್ಯೆ ಅಥವಾ ಯಾವುದಾದರೂ ಮಾಹಿತಿ ಇದ್ದರೆ ನೀಡಿ, ತಕ್ಷಣ ನಿಮ್ಮ ಗ್ರಾಮಿ ಪ್ರಶಸ್ತಿಯನ್ನು ತಲುಪಿಸುತ್ತೇವೆ ಎಂದು ಕಸ್ಟಮ್ಸ್‌ ಹೇಳಿದೆ. ಜತೆಗೆ ರಿಕ್ಕಿ ಕೇಜ್‌ ಅವರ ಗ್ರಾಮಿ ಗೆಲುವಿಗೆ ಅಭಿನಂದನೆಗಳನ್ನೂ ಕಸ್ಟಮ್ಸ್‌ ಇಲಾಖೆ ತಿಳಿಸಿದೆ. 

ಕಳೆದ ಎರಡು ತಿಂಗಳಿಂದ ಕಾದು ಸಾಕಾಗಿ ಕಡೆಗೆ ಸಾಮಾಜಿಕ ಜಾಲತಾಣದಲ್ಲಿ ಬರೆದ ನಂತರ ಸಮಸ್ಯೆಗೆ ಪರಿಹಾರ ಸಿಗುತ್ತಿದೆ. ರಿಕ್ಕಿ ಕೇಜ್‌ ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಬುಧವಾರ ಪ್ರಶಸ್ತಿ ಕೈ ಸೇರುವ ಸಾಧ್ಯತೆಯಿದೆ ಎಂದ ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾಗಿ ಸಂತಸ ಹಂಚಿಕೊಂಡ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್

ಎರಡನೇ ಗ್ರಾಮಿ:

ಖ್ಯಾತ ಬ್ರಿಟಿಷ್‌ ಡ್ರಮ್ಮರ್‌ ಸ್ಟೆವಾರ್ಟ್‌ ಕೋಪ್‌ಲ್ಯಾಂಡ್‌ (Copeland) ಜೊತೆ ಸೇರಿ ರಿಕಿ ಕೇಜ್‌ ಸಂಯೋಜಿಸಿರುವ ‘ಡಿವೈನ್‌ ಟೈಡ್ಸ್‌’ (Devine Tides) ಎಂಬ ಒಂಭತ್ತು ಗೀತೆಗಳ ಆಲ್ಬಮ್‌ಗೆ ಅತ್ಯುತ್ತಮ ನ್ಯೂ ಏಜ್‌ ಆಲ್ಬಮ್‌ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ಲಾಸ್‌ ವೆಗಾಸ್‌ನ (Las Vegas) ಎಂಜಿಎಂ ಗ್ರ್ಯಾಂಡ್‌ ಮಾಕ್ರ್ಯೂ ಬಾಲ್‌ರೂಮ್‌ನಲ್ಲಿ ನಡೆದ 64ನೇ ಗ್ರ್ಯಾಮಿ ಅವಾರ್ಡ್ಸ್ ಸಮಾರಂಭದಲ್ಲಿ ರಿಕಿ ಕೇಜ್‌ ಮತ್ತು ಸ್ಟೆವಾರ್ಟ್‌ ಕೋಪ್‌ಲ್ಯಾಂಡ್‌ ಜಂಟಿಯಾಗಿ ಪ್ರಶಸ್ತಿ ಸ್ವೀಕರಿಸಿದರು.

ರಿಕ್ಕಿ ಕೇಜ್‌ ಎರಡು ಬಾರಿ ಗ್ರಾಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ಸಂಗೀತ ಲೋಕದಲ್ಲಿ ಭಾರತದ ಛಾಪನ್ನು ಹಲವು ಬಾರಿ ಮೂಡಿಸಿರುವ ರಿಕ್ಕಿ ಕೇಜ್‌ ಮುಂಬರುವ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಸಂಗೀತ ರಚಿಸುವ ಭರವಸೆ ಮೂಡಿಸಿದ್ದಾರೆ. ಅವರ ಪ್ರಶಸ್ತಿ ಬೇಗ ಅವರ ಕೈ ಸೇರಲಿ ಎಂದು ಆಶಿಸೋಣ.