Ricky Kej: ಗ್ರ್ಯಾಮಿ ವಿಜೇತ ರಿಕ್ಕಿ ಕೇಜ್ ಕನ್ನಡದ ಹೆಮ್ಮೆ: ಸಿಎಂ ಬೊಮ್ಮಾಯಿ
ಲಹರಿ ಸಂಸ್ಥೆ ನಿರ್ಮಿಸಿದ ‘ಡಿವೈನ್ ಟೈಡ್ಸ್’ ಆಲ್ಬಂಗೆ ಎರಡನೇ ಬಾರಿ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪಡೆದ ಸಂಗೀತಕಾರ ರಿಕ್ಕಿ ಕೇಜ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು.
ಬೆಂಗಳೂರು (ಮೇ.03): ಲಹರಿ ಸಂಸ್ಥೆ (Lahari) ನಿರ್ಮಿಸಿದ ‘ಡಿವೈನ್ ಟೈಡ್ಸ್’ (Divine Tides) ಆಲ್ಬಂಗೆ ಎರಡನೇ ಬಾರಿ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪಡೆದ ಸಂಗೀತಕಾರ ರಿಕ್ಕಿ ಕೇಜ್ (Ricky Kej) ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸನ್ಮಾನಿಸಿದರು. ಈ ಸಂದರ್ಭದಲ್ಲಿ ಡಿವೈನ್ ಟೈಡ್ಸ್ ಆಲ್ಬಂ ವೀಕ್ಷಿಸಿದ ಅವರು, ‘ಸಂಗೀತದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ ರಿಕ್ಕಿ ಕೇಜ್ ಕನ್ನಡದ ಹೆಮ್ಮೆ’ ಎಂದು ಹೇಳಿದರು. ‘ಡಿವೈನ್ ಟೈಡ್ಸ್ ಆಲ್ಬಂ ಮೂಲಕ ಪ್ರಕೃತಿಯಿಂದ ದೈವಿಕತೆಯ ಕಲ್ಪನೆಯನ್ನು ರಿಕ್ಕಿ ಅಭಿವ್ಯಕ್ತಿಗೊಳಿಸಿದ್ದಾರೆ. ನಾವೆಲ್ಲರೂ ದೇವರ ಸೃಷ್ಟಿ.
ಈ ಆಲ್ಬಂನಲ್ಲಿ ಅತ್ಯಂತ ಕಡು ಬಡವ, ವಿದ್ಯೆ ಇಲ್ಲದ ವ್ಯಕ್ತಿಯೂ ದೇವರನ್ನು ಸೃಷ್ಟಿಮಾಡಬಹುದು ಎಂಬ ಪರಿಕಲ್ಪನೆ ತೋರಿಸಿದ್ದಾರೆ. ಡಿವೈನ್ ಎಂದರೆ ಪ್ರಕೃತಿ ಜೊತೆಗಿನ ಸಂಬಂಧ. ಪ್ರಕೃತಿ ಜೊತೆಗೆ ಸಂಪರ್ಕ ಸಾಧ್ಯವಾಗದೇ ಇದ್ದರೆ ದೈವಿಕತೆ ಸಾಧ್ಯವಿಲ್ಲ’ ಎಂದು ಅವರು ಹೇಳಿದರು. ರಿಕ್ಕಿ ಕೇಜ್ ಅವರನ್ನು ಮೆಚ್ಚಿಕೊಂಡ ಸಿಎಂ, ‘ಕನ್ನಡದಲ್ಲಿ ಅಷ್ಟೇ ಅಲ್ಲ, ಭಾರತದಲ್ಲೇ ಯಾವ ಸಂಸ್ಥೆಗೂ ಗ್ರ್ಯಾಮಿ ದೊರಕಿಲ್ಲ. ಆ ಪ್ರಶಸ್ತಿಗೆ ನಾಮ ನಿರ್ದೇಶನಗೊಳ್ಳುವುದೇ ದೊಡ್ಡ ವಿಚಾರ. ಅಂಥದ್ದರಲ್ಲಿ ಕನ್ನಡಿಗ ರಿಕ್ಕಿ ಕೇಜ್ ಆ ಸಾಧನೆ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಲಹರಿ ಸಂಸ್ಥೆ ಇದರ ಭಾಗವಾಗಿರುವುದು ಶ್ಲಾಘನೀಯ’ ಎಂದು ಹೇಳಿದರು.
Grammys 2022: ಎರಡನೇ ಗ್ರ್ಯಾಮಿ ಪ್ರಶಸ್ತಿ ಗೆದ್ದ ಬೆಂಗಳೂರಿನ ರಿಕಿ ಕೇಜ್!
ಸನ್ಮಾನ ಸ್ವೀಕರಿಸಿ ಮಾತನಾಡಿದ ರಿಕ್ಕಿ ಕೇಜ್, ‘ನಾನು ಪಾಪ್ ಮ್ಯೂಸಿಕ್, ಸಿನಿಮಾ ಮ್ಯೂಸಿಕ್ ಮಾಡಲ್ಲ. ಸಂಗೀತದ ಮೂಲಕ ಈ ಜಗತ್ತನ್ನು ಮತ್ತಷ್ಟುಸಹ್ಯವಾಗಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ಪ್ರಕೃತಿ ಕುರಿತಾಗಿ, ಪ್ರಕೃತಿಗೆ ಒಳಿತು ಮಾಡುವ ಸಾಮಾಜಿಕ ಪರಿಣಾಮ ಬೀರುವ ಸಂಗೀತವನ್ನಷ್ಟೇ ನೀಡುತ್ತೇನೆ. ನಮ್ಮ ಮುಂದೆ ಮಾಲಿನ್ಯ, ಬಡತನ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ನಮ್ಮ ಬದುಕಿನಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆ ಕೂಡ ದೊಡ್ಡ ಪರಿಣಾಮ ಬೀರಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಪಬ್ಲಿಕ್ ಟೀವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಲಹರಿ ಸಂಸ್ಥೆಯ ಮುಖ್ಯಸ್ಥ ಮನೋಹರ ನಾಯ್ಡು, ನಟರಾದ ರವಿಚಂದ್ರನ್, ಶಿವರಾಜ್‌ಕುಮಾರ್, ಪಬ್ಲಿಕ್ ಟಿವಿ ಸಿಇಓ ಅರುಣ್ ಸಿಂಗ್, ರಾಜೇಂದ್ರ ಸಿಂಗ್ ಬಾಬು, ಉದಯ್ ಕೆ. ಮೆಹ್ತಾ, ಕೆ.ಪಿ. ಶ್ರೀಕಾಂತ್, ಗುರುಕಿರಣ್, ವಸಿಷ್ಠ ಸಿಂಹ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಭಾಗವಹಿಸಿದ್ದರು.
ಯಾವ ಆಲ್ಬಮ್? ಅದರಲ್ಲಿ ಏನಿದೆ?: ಬ್ರಿಟನ್ನಿನ ಸ್ಟೆವಾರ್ಟ್ ಕೋಪ್‌ಲ್ಯಾಂಡ್ ಜೊತೆ ಸೇರಿ ರಿಕಿ ಕೇಜ್ ಸಂಗೀತ ಸಂಯೋಜಿಸಿರುವ ‘ಡಿವೈನ್ ಟೈಡ್ಸ್’ ಎಂಬ ಹಿಂದಿ ಆಲ್ಬಮ್‌ಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ಇದರಲ್ಲಿ ಒಂಭತ್ತು ಗೀತೆಗಳಿವೆ. ‘ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕನ್ನು ಹಂಚುವಲ್ಲಿ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೂ ಮಹತ್ವದ ಪಾತ್ರ ವಹಿಸುತ್ತದೆ’ ಎಂಬ ಸಂದೇಶವನ್ನು ಈ ಗೀತೆಗಳು ಸಾರುತ್ತವೆ. 2021ರಲ್ಲಿ ಈ ಆಲ್ಬಮ್ ಬಿಡುಗಡೆಯಾಗಿ ಹಲವು ಜಾಗತಿಕ ಮಟ್ಟದ ಪ್ರಶಸ್ತಿಗಳನ್ನು ಪಡೆದಿದೆ.
'ಡಿವೈನ್ ಟೈಡ್ಸ್'ಗೆ ಗ್ರ್ಯಾಮಿ ಅವಾರ್ಡ್ ಪಡೆದ ಕರ್ನಾಟಕದ ಅಳಿಯ ರಿಕ್ಕಿ ಕೇಜ್!
ಆಲ್ಬಮ್‌ನಲ್ಲಿ ಇಬ್ಬರು ಕನ್ನಡಿಗರು: ಗ್ರ್ಯಾಮಿ ವಿಜೇತ ‘ಡಿವೈನ್ ಟೈಡ್ಸ್’ನಲ್ಲಿ ‘ಹಿಮಾಲಯಾಸ್’ ಎಂಬ ಗೀತೆಯೊಂದಿದೆ. ಅದರಲ್ಲಿ ಕನ್ನಡದ ಪ್ರಸಿದ್ಧ ಗಾಯಕರಾದ ಅರುಣ್ ಕುಮಾರ್ ಮತ್ತು ವಾರಿಜಾಶ್ರೀ ವೇಣುಗೋಪಾಲ್ ಹಾಡಿದ್ದಾರೆ.
ಗ್ರ್ಯಾಮಿ ಎಂದರೇನು?: ಅಮೆರಿಕದ ರೆಕಾರ್ಡಿಂಗ್ ಅಕಾಡೆಮಿ ಎಂಬ ಸಂಸ್ಥೆ ಕಳೆದ 62 ವರ್ಷಗಳಿಂದ ಅತ್ಯುತ್ತಮ ಸಂಗೀತ ಸಾಧಕರಿಗೆ ನೀಡುತ್ತಾ ಬಂದಿರುವ ಪ್ರತಿಷ್ಠಿತ ಪ್ರಶಸ್ತಿಯಿದು. ಗ್ರಾಮೋಫೋನ್ ಅವಾರ್ಡ್ಸ್ ಎಂಬುದು ಪೂರ್ಣ ಹೆಸರು. ಸಿನಿಮಾಕ್ಕೆ ಆಸ್ಕರ್ ಅಥವಾ ವಿವಿಧ ಕ್ಷೇತ್ರಗಳ ಸಾಧನೆಗೆ ನೊಬೆಲ್ ಇರುವಂತೆ ಸಂಗೀತಗಾರರಿಗೆ ಗ್ರ್ಯಾಮಿ ಪ್ರಶಸ್ತಿ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಪ್ರಶಸ್ತಿಯು ಗ್ರಾಮೋಫೋನ್ ರೂಪದ ಟ್ರೋಫಿಯನ್ನು ಒಳಗೊಂಡಿರುತ್ತದೆ.