ಪ್ರಧಾನಿ ಮೋದಿ ಭೇಟಿಯಾಗಿ ಸಂತಸ ಹಂಚಿಕೊಂಡ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್
ಹೆಮ್ಮೆಯ ಕನ್ನಡಿಗ ರಿಕಿ ಕೇಜ್ ಇತ್ತೀಚಿಗಷ್ಟೆ ಎರಡನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವಾರ್ಡ್ ಹಿಡಿದು ಭಾರತಕ್ಕೆ ಬಂದಿರುವ ರಿಕಿ ಕೇಜ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೇಟಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸಂಗೀತ ಸಂಯೋಜಕ, ಹೆಮ್ಮೆಯ ಕನ್ನಡಿಗ ರಿಕಿ ಕೇಜ್ ಇತ್ತೀಚಿಗಷ್ಟೆ ಎರಡನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಎಮ್ ಜಿ ಎಂ ಗ್ರ್ಯಾಂಡ್ ಗಾರ್ಡನ್ ಅರೇನಾ ಲಾಸ್ ವೇಗಾಸ್ ನಲ್ಲಿ ನಡೆದ ಪ್ರತಿಷ್ಠಿತ 2022ರ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು. ಬಳಿಕ ರಿಕಿ ಕೇಜ್ ನಂತರ ಭಾರತಕ್ಕೆ ಆಗಮಿಸಿದ್ದರು. ರಿಕಿ ಕೇಜ್ ಸಾಧನೆಗೆ ಭಾರತೀಯರಿಂದ ಅಭಿನಂದನೆಗಳ ಮಹಾಪೂರ ಸಿಕ್ಕಿತ್ತು. ಪ್ರಧಾನಿ ಮೋದಿ ಕೂಡ ಅಭಿನಂದನೆ ಸಲ್ಲಿಸಿದ್ದರು.
ಇದೀಗ ರಿಕಿ ಕೇಜ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಸಂಭ್ರಮ ಹಂಚಿಕೊಂಡಿದ್ದಾರೆ. ಅಂದಹಾಗೆ ಮೊದಲ ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದ ಸಮಯದಲ್ಲೂ ಅಂದರೆ 2015ರಲ್ಲಿ ರಿಕಿ ಕೇಜ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಇದೀಗ 2022ರಲ್ಲಿ ಎರಡನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಪಡೆದಾಗಲು ಮೋದಿ ಭೇಟಿಯಾಗಿದ್ದಾರೆ. ಈ ಎನಡು ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಎರಡು ಫೋಟೋಗಳನ್ನು ಸ್ವತಃ ರಿಕಿ ಕೇಜ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಇದೀಗ ಎರಡನೇ ಬಾರಿ ಪ್ರಶಸ್ತಿ ಖುಷಿಯಲ್ಲಿ ರಿಕಿ ಕೇಜ್ ಮೋದಿ ಅವರನ್ನು ರಿಕಿ ಭೇಟಿ ಮಾಡಿ, ಗ್ರ್ಯಾಮಿ ಅವಾರ್ಡ್ ಅನ್ನು ತೋರಿಸಿದ್ದಾರೆ. ರಿಕಿ ಭೇಟಿಯಾಗಿರುವ ಫೋಟೋವನ್ನು ಪ್ರಧಾನಿ ಮೋದಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಸಂಗೀತದ ಕಡೆಗಿನ ನಿಮ್ಮ ಒಲವು ಮತ್ತು ಉತ್ಸಾಹ ಇನ್ನಷ್ಟು ಬಲಗೊಳ್ಳುತ್ತಲೇ ಇರುತ್ತದೆ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು. ನಿಮ್ಮನ್ನು ಭೇಟಿಯಾಗಿದ್ದು ಖುಷಿ ಆಯಿತು' ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರತಿಯಾಗಿ ರಿಕಿ ಕೂಡ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ‘ಮೊದಲ ಬಾರಿಗೆ ನನಗೆ ಗ್ರ್ಯಾಮಿ ಅವಾರ್ಡ್ ಬಂದಾಗ 7 ವರ್ಷಗಳ ಹಿಂದಿನ ನಮ್ಮ ಭೇಟಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಆಗ ನೀವು ನನಗೆ ಹಾರೈಸಿದ್ದೀರಿ. ಭಾರತಕ್ಕಾಗಿ ಎರಡನೇ ಗ್ರ್ಯಾಮಿ ಅವಾರ್ಡ್ ಬಂದಾಗಲೂ ನೀವು ನನಗೆ ಹಾರೈಸಿದ್ದೀರಿ. ನಾನು ಈ ಪ್ರಶಸ್ತಿಯನ್ನು ಆಜಾದಿ ಕಾ ಅಮೃತ ಮಹೋತ್ಸವಕ್ಕೆ ಅರ್ಪಿಸುವೆ.’ ಎಂದು ರಿಕಿ ಟ್ವೀಟ್ ಮಾಡಿದ್ದಾರೆ.
ಲಹರಿ ಸಂಸ್ಥೆಯ ಮೂಲಕ ನಿರ್ಮಾಣವಾಗಿರುವ ‘ಡಿವೈನ್ ಟೈಡ್ಸ್’ ಆಲ್ಬಂಗೆ ಈ ಬಾರಿ ರಿಕಿ ಕೇಜ್ ಗ್ರ್ಯಾಮಿ ಅವಾರ್ಡ್ ಪಡೆದಿದ್ದಾರೆ. ಏಳು ವರ್ಷಗಳ ನಂತರ ಮತ್ತೊಂದು ಗ್ರ್ಯಾಮಿ ಕೈಯಲ್ಲಿ ಹಿಡಿದುಕೊಂಡು ಸಂಭ್ರಮಿಸಿದ್ದಾರೆ. ಎರಡು ಬಾರಿ ಪ್ರಶಸ್ತಿ ಗೆದ್ದು ಬೀಗಿರುವ ರಿಕಿ ಕೇಜ್ ಮತ್ತಷ್ಟು ಪ್ರಶಸ್ತಿಗಳನ್ನು ಗೆಲ್ಲಲಿ ಎನ್ನುವುದು ಅಭಿಮಾನಿಗಳ ಆಶಯ.