ವಸತಿ ಸಮುಚ್ಚಯವೊಂದರಲ್ಲಿ ಪ್ಯಾಕರ್ಸ್ & ಮೂವರ್ಸ್ ಕಾರ್ಮಿಕರಿಗೆ ಲಿಫ್ಟ್ ಬಳಸಲು ನಿರಾಕರಿಸಿದ ಘಟನೆ ನಡೆದಿದೆ. ಇದರಿಂದಾಗಿ, ಅವರು ಆರನೇ ಮಹಡಿಗೆ ಭಾರವಾದ ವಸ್ತುಗಳನ್ನು ಮೆಟ್ಟಿಲುಗಳ ಮೂಲಕವೇ ಸಾಗಿಸಬೇಕಾಯಿತು.ಈ ವೀಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪ್ಯಾಕರ್ಸ್ & ಮೂವರ್ಸ್ ಕಾರ್ಮಿಕರಿಗೆ ಲಿಫ್ಟ್ ಬಳಸಲು ಅವಕಾಶ ನಿರಾಕರಣೆ:

ಮಹಾನಗರಗಳಲ್ಲಿ ವಾಸ ಮಾಡುವವರಿಗೆ ಪ್ಯಾಕರ್ಸ್‌ & ಮೂವರ್ಸ್‌ಗಳ ಬಗ್ಗೆ ಹಾಗೂ ಆ ಸಂಸ್ಥೆಯ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ನಗರಗಳಲ್ಲಿ ಮನೆ ಬದಲಾಯಿಸಲು ಬಯಸುವ ಅನೇಕರು ತಮ್ಮ ಸಾಮಗ್ರಿಗಳನ್ನು ಶಿಫ್ಟ್ ಮಾಡುವುದಕ್ಕೆ ಈ ಪ್ಯಾಕರ್ಸ್‌& ಮೂವರ್ಸ್‌ಗಳನ್ನು ಕರೆಸುತ್ತಾರೆ. ಈ ಪ್ಯಾಕರ್ಸ್‌ & ಮೂವರ್ಸ್‌ಗಳು ಮನೆ ಶಿಫ್ಟಿಂಗ್ ಸೇವೆಯನ್ನು ಒದಗಿಸುವ ಸಂಸ್ಥೆಯಾಗಿದ್ದು, ಮನೆ ಖಾಲಿ ಮಾಡಲು ಬಯಸುವವರಿಗೆ ಅಥವಾ ಮನೆ ಶಿಪ್ಟ್ ಮಾಡಲು ಬಯಸುವವರಿಗೆ ಎ ಟು ಜೆಡ್ ಸೇವೆಯನ್ನು ಒದಗಿಸುತ್ತವೆ. ಒಂದು ಕಡೆಯಿಂದ ಮನೆಯ ವಸ್ತುಗಳನ್ನು ಸಂಪೂರ್ಣವಾಗಿ ಮತ್ತೊಂದು ಕಡೆಗೆ ಯಾವುದೇ ಹಾನಿಯಾಗದಂತೆ ಜಾಗರೂಕವಾಗಿ ಶಿಫ್ಟ್ ಮಾಡಿ ನಿಮಗೆ ಎಲ್ಲಿಗೆ ಬೇಕು ಅಲ್ಲಿಗೆ ತೆಗೆದುಕೊಂಡು ಹೋಗಿ ಇಳಿಸುತ್ತಾರೆ. ಪ್ಯಾಕಿಂಗ್, ಲೋಡ್ ಮಾಡುವುದು, ಸಾಗಿಸುವುದು, ಇಳಿಸುವುದು ಹೀಗೆ ಪ್ರತಿಯೊಂದನ್ನು ಅವರು ಮಾಡುತ್ತಾರೆ. ಅದಕ್ಕೆ ತಕ್ಕಂತೆ ಚಾರ್ಜ್ ಮಾಡ್ತಾರೆ. ಆದರೆ ಹೀಗೆ ಸೇವೆ ನೀಡುವ ಸಂಸ್ಥೆಯ ಕೆಲಸಗಾರರಿಗೆ ಲಿಫ್ಟ್ ಬಳಸುವುದಕ್ಕೆ ರೆಸಿಡೆನ್ಶಿಯಲ್ ಸೊಸೈಟಿಯೊಂದರಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ನೆಟ್ಟಿಗರು ರೆಸಿಡೆನ್ಶಿಯಲ್ ಸೊಸೈಟಿಯ ಸದಸ್ಯರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಹೊಟೇಲೊಂದರಲ್ಲಿ ಡೆಲಿವರಿ ಬಾಯ್‌ಗಳಿಗೆ ಲಿಫ್ಟ್‌ನಲ್ಲಿ ಅವಕಾಶವಿಲ್ಲ ಎಂಬ ಸೂಚನೆ ಇರುವ ಪೋಸ್ಟರ್ ಅಂಟಿಸಲಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಜನರು ಹೊಟೇಲ್ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಹೊಟೇಲ್ ಈ ಸೂಚನೆಯನ್ನು ಅಳಿಸಿ ಹಾಕಿ ಕ್ಷಮೆ ಕೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಆದರೆ ಯಾವ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ಹೀಗೆ ಪ್ಯಾಕರ್ಸ್ & ಮೂವರ್ಸ್‌ಗಳಿಗೆ ಲಿಫ್ಟ್ ನಿರಾಕರಿಸಲಾಗಿದೆ ಎಂಬ ಬಗ್ಗೆ ವೀಡಿಯೋದಲ್ಲಿ ಮಾಹಿತಿ ನೀಡಲಾಗಿಲ್ಲ, ವೈರಲ್ ಆದ ವೀಡಿಯೋದಲ್ಲಿ ದೊಡ್ಡ ದೊಡ್ಡ ಲಗೇಜುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಕೆಲಸಗಾರರು ಮೆಟ್ಟಿಲಿನ ಮೂಲಕ ಹತ್ತಿಕೊಂಡು ಮೇಲೆ ಹೋಗುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ: ಕುಂಟುತ್ತಿದ್ದ ಬೆಕ್ಕನ್ನು 7ನೇ ಮಹಡಿಯಿಂದ ಕೆಳಗೆಸೆದ ವಾಚ್‌ಮ್ಯಾನ್: ಪೈಶಾಚಿಕ ಕೃತ್ಯ ಕ್ಯಾಮರಾದಲ್ಲಿ ಸೆರೆ

outspoken_rp ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಹೀಗೆ ಶೀರ್ಷಿಕೆ ನೀಡಿದ್ದಾರೆ. ವಸತಿ ಸಂಕೀರ್ಣದ ಸದಸ್ಯರು ಸೊಸೈಟಿ ಲಿಫ್ಟ್ ಬಳಸಲು ಪ್ಯಾಕರ್ಸ್‌& ಮೂವರ್ಸ್‌ಗೆ ಅನುಮತಿ ನೀಡಲಿಲ್ಲ ಎಂದು ವರದಿಯಾಗಿದೆ. ಇದರಿಂದಾಗಿ ಅವರು ಆರನೇ ಮಹಡಿಗೆ ಹೋಗಲು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕಾಯಿತು, ಆರನೇ ಮಹಡಿಗೆ ಮನೆಯ ವಸ್ತುಗಳನ್ನು ಮೆಟ್ಟಿಲುಗಳ ಮೂಲಕ ಸಾಗಿಸಬೇಕಾಯಿತು. ಮನೆ ಸ್ಥಳಾಂತರದ ಸಮಯದಲ್ಲಿ ಸಾಮಾನ್ಯವಾಗಿ ಒದಗಿಸಲಾಗುವ ಲಿಫ್ಟ್‌ನಂತಹ ಮೂಲಭೂತ ಸೌಲಭ್ಯಗಳಿಗೆ ಪ್ರವೇಶ ನೀಡದೇ ಹೋಗಿದ್ದರಿಂದ ಭಾರವಾದ ಪೀಠೋಪಕರಣಗಳು ಮತ್ತು ಪೆಟ್ಟಿಗೆಗಳನ್ನು ಸಾಗಿಸಲು ಕಾರ್ಮಿಕರು ಭಾರಿ ದೈಹಿಕ ಶ್ರಮ ಹಾಕಬೇಕಾಯ್ತು. ಈ ಸ್ಥಿತಿಯು ರೆಸಿಡೆನ್ಶಿಯಲ್ ಸೊಸೈಟಿ ನಿಯಮಗಳು ಮತ್ತು ಅವರು ಕಾರ್ಮಿಕರನ್ನು ನಡೆಸಿಕೊಳ್ಳುವ ರೀತಿಯನ್ನು ತೋರಿಸುತ್ತಿದೆ ಎಂದು ಅವರು ಬರೆದಿದ್ದಾರೆ.

ಈ ವೀಡಿಯೋ ನಂತರ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿದ್ದು, ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಅನೇಕರು ಅಂತಹ ನಿರ್ಬಂಧಗಳು ಸಮರ್ಥನೀಯವೇ ಎಂದು ಪ್ರಶ್ನಿಸಿದ್ದಾರೆ. ಅನೇಕರು ಸೊಸೈಟಿ ಸದಸ್ಯರ ವರ್ತನೆ ನಾಚಿಕೆಗೇಡು ಎಂದು ಕಾಮೆಂಟ್ ಮಾಡಿದ್ದಾರೆ. ಹೈ ಸೊಸೈಟಿಯ ಲೋ ಮೆಂಟಾಲಿಟಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ಜನ ಕರುಣೆ ಇಲ್ಲದವರಾಗುತ್ತಿದ್ದಾರೆ ಏಕೆ ಎಂದು ಗೊತ್ತಾಗುತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: 

ರೀಲ್ಸ್ ಮಾಡ್ತಿದ್ದಾಗ ಕಾಂಕ್ರೀಟ್ ಸ್ಲ್ಯಾಬ್ ತಲೆಮೇಲೆ ಬಿದ್ದು 22 ವರ್ಷದ ಯುವಕ ಸಾವು

View post on Instagram