ಮುಂಬೈನ ಕಂಡಿವಿಲಿಯಲ್ಲಿ, ಸೆಕ್ಯುರಿಟಿ ಗಾರ್ಡ್ ಒಬ್ಬರು ಕುಂಟುತ್ತಿದ್ದ ಅಸಹಾಯಕ ಬೆಕ್ಕೊಂದನ್ನು 7ನೇ ಮಹಡಿಯಿಂದ ಕೆಳಗೆ ಎಸೆದು ಕೊಂದಿದ್ದಾರೆ. ಈ ಅಮಾನವೀಯ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನುಷ್ಯರು ಏಕೆ ಇಷ್ಟೊಂದು ಕ್ರೂರಿಗಳಾಗಿ ಬಿಡುತ್ತಾರೋ ತಿಳಿಯದು. ಏನೂ ಮಾಡದ ಪ್ರಾಣಿಗಳಿಗೆ ವಿನಾಕಾರಣ ಹಿಂಸೆ ಕೊಟ್ಟು ಜೀವ ತೆಗೆಯುವ ಕೆಲಸವನ್ನು ಕೆಲ ಪಾಪಿಗಳು ಮಾಡುತ್ತಾರೆ. ಇಲ್ಲೊಂದು ಕಡೆ ವ್ಯಕ್ತಿಯೊಬ್ಬರು ನಡೆಯಲು ಸರಿ ಬಾರದ ಕುಂಟುತ್ತಿದ್ದ ಬೆಕ್ಕೊಂದನ್ನು7ನೇ ಮಹಡಿಯಿಂದ ಕೆಳಗೆ ಎಸೆದು ಕೊಂದಂತಹ ಪೈಶಾಚಿಕ ಕೃತ್ಯ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಮುಂಬೈನ ಕಂಡಿವಿಲಿ ಪ್ರದೇಶದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಘಟನೆ ಕಟ್ಟಡದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ವೀಡಿಯೋ ನೋಡಿದ ಪ್ರಾಣಿಪ್ರಿಯರು ಸೇರಿದಂತೆ ಅನೇಕರು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವ ದಿನದಂದೇ ಬೆಳಗ್ಗೆ 11.22 ರ ಸುಮಾರಿಗೆ ಈ ಘಟನೆ ನಡೆದಿದೆ.

ಸಿಸಿಟಿವಿಯಲ್ಲಿ ವಾಚ್‌ಮನ್‌ನ ಕ್ರೂರ ಕೃತ್ಯ ಸೆರೆ

ಕಂಡಿವಿಲಿಯ ಐಷಾರಾಮಿ ವಸತಿ ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬ ಸೊಸೈಟಿ ಕಟ್ಟಡ ಕಾರಿಡಾರ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಬೆಕ್ಕಿನ ಹಿಂದೆಯೇ ಹೋಗಿ ಆ ಬೆಕ್ಕನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಹೊರಗೆ ಹೋಗುವ ಬಾಗಿಲು ತೆರೆದು ಬೆಕ್ಕನ್ನು 7ನೇ ಮಹಡಿಯಿಂದ ಕೆಳಕ್ಕೆ ಎಸೆದಿದ್ದಾನೆ. ಬಳಿಕ ಬಾಗಿಲು ಮುಚ್ಚಿ ಹೊರಗೆ ಹೋಗಿದ್ದಾನೆ. ಅದೇ ವಿಡಿಯೋದಲ್ಲಿ ಬೆಕ್ಕು ಎತ್ತರದಿಂದ ಬೀಳುವುದನ್ನು ತೋರಿಸಲಾಗಿದೆ. ನೆಲಕ್ಕೆ ಬಿದ್ದ ಬೆಕ್ಕು ಕೆಲ ಕ್ಷಣ ಕುಂಟುತ್ತಾ ಕ್ಯಾಮರಾ ಕಣ್ಗಾವಲಿನಿಂದ ದೂರ ಹೋಗಿದೆ. ಆದರೆ ಅದು ಸ್ವಲ್ಪ ದೂರ ಹೋಗಿ ಪ್ರಾಣ ಬಿಟ್ಟಿದೆ ಎಂದು ಸ್ಥಳೀಯ ಪ್ರಾಣಿ ಕಾರ್ಯಕರ್ತರು ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಅಂಗಊನ ಗೊಂಡಿದ್ದ ಬೀದಿ ಬೆಕ್ಕು ಮಾನವ ಆರೈಕೆಯ ಮೇಲೆ ಅವಲಂಬಿತವಾಗಿತ್ತು. ಅದರೆ ಹೀಗೆ ಮೇಲಿನಿಂದ ವಾಚ್‌ಮ್ಯಾನ್ ಇದನ್ನು ಎಸೆದ ನಂತರ ಅದು ಪ್ರಾಣ ಬಿಟ್ಟಿದೆ.

ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಾಣಿ ಕಲ್ಯಾಣ ಗುಂಪಾದ 'ಸ್ಟ್ರೀಟ್ ಡಾಗ್ಸ್ ಆಫ್ ಬಾಂಬೆ' ಎಂಬ ಖಾತೆಯಿಂದ ಪೋಸ್ಟ್ ಆಗಿದ್ದು, ಘಟನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವೀಯತೆಯನ್ನು ಸಂಕೇತಿಸುವ ದಿನವಾದ ಗಣರಾಜ್ಯೋತ್ಸವದಂದೇ ಈ ಅಮಾನವೀಯ ಘಟನೆ ನಡೆದಿದೆ. ಕೆಲವರು ಧ್ವನಿಯಿಲ್ಲದ ಜೀವಕ್ಕೆ ಏನೂ ಬೇಕಾದರು ಮಾಡಬಹುದು ಎಂದು ಭಾವಿಸಿದ್ದಾರೆ. ಈ ಕೃತ್ಯ ಉದ್ದೇಶಪೂರ್ವಕ ಹಾಗೂ ಕ್ರೌರ್ಯದಿಂದ ಕೂಡಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.

ಇದನ್ನೂ ಓದಿ: ರೀಲ್ಸ್ ಮಾಡ್ತಿದ್ದಾಗ ಕಾಂಕ್ರೀಟ್ ಸ್ಲ್ಯಾಬ್ ತಲೆಮೇಲೆ ಬಿದ್ದು 22 ವರ್ಷದ ಯುವಕ ಸಾವು

ಬೆಕ್ಕಿಗೆ ಆಕಸ್ಮಿಕವಾಗಿ ಹಾನಿ ಮಾಡಿಲ್ಲ, ಉದ್ದೇಶಪೂರ್ವಕವಾಗಿ ಎಸೆಯಲಾಗಿದೆ. ಸಿಸಿಟಿವಿ ಕಣ್ಗಾವಲು ಇಲ್ಲದ ಸ್ಥಳಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಇಂತಹ ಘಟನೆಗಳನ್ನು ನೋಡಿ ಮೌನವಾಗಿರುವುದು ಮತ್ತಷ್ಟು ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದ್ದು, ಈ ವೀಡಿಯೊವನ್ನು ಮತ್ತಷ್ಟು ಶೇರ್ ಮಾಡಿ ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಲು ಸಂಘಟನೆಯು ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಕೊನೆಗೂ ಆರೋಪಿಯ ಬಂಧನ

ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದ್ದಂತೆ ಜನರು ತೀವ್ರ ಬೇಸರ, ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದರು. ಅನೇಕರು ಕಾವಲುಗಾರನನ್ನು ಬಂಧಿಸಬೇಕು ಮತ್ತು ಅಂತಹ ಕೃತ್ಯಗಳನ್ನು ತಡೆಯುವಲ್ಲಿ ವಿಫಲರಾದ ಹೌಸಿಂಗ್ ಸೊಸೈಟಿ ಆಡಳಿತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದು, ಪ್ರಾಣಿ ಪ್ರಿಯರು ಮತ್ತು ಕಾರ್ಯಕರ್ತರು ಸಹ ಆರೋಪಿಗಳ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹಳೆ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿದ 'ವೈಟ್ ಮೆಟಲ್'! ಬೆಳ್ಳಿ ಬೆಲೆಯಲ್ಲಿ ಏರಿಳಿತ.. ಖರೀದಿಗೆ ಸರಿಯಾದ ಸಮಯನಾ?

ನಂತರ ಬಂದ ಮಾಹಿತಿಯ ಪ್ರಕಾರ ಈ ವಿಚಾರದಲ್ಲಿ ಸ್ಥಳೀಯವಾಗಿ ಬೀದಿಯ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದ ಫೀಡರ್‌ಗಳು ಮತ್ತು ಪ್ರಾಣಿ ಪ್ರಿಯರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ ನಂತರ ಆರೋಪಿ ವಾಚ್‌ಮ್ಯಾನ್‌ನನ್ನು ಬಂಧಿಸಲಾಗಿದ್ದು, ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಎಂದು ತಿಳಿದು ಬಂದಿದೆ.

View post on Instagram