Meghana Foods apology: ಪ್ರಖ್ಯಾತ ಮೇಘನಾ ಫುಡ್ಸ್ ರೆಸ್ಟೋರೆಂಟ್‌,  ಡೆಲಿವರಿ ಏಜೆಂಟ್‌ಗಳಿಗೆ ಲಿಫ್ಟ್ ಬಳಸದಂತೆ ಪೋಸ್ಟರ್ ಅಂಟಿಸಿ ವಿವಾದಕ್ಕೆ ಗುರಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ನಂತರ, ಸಂಸ್ಥೆಯು ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದೆ. 

"ಸ್ವಿಗ್ಗಿ, ಝೊಮ್ಯಾಟೊ ಡೆಲಿವರಿ ಬಾಯ್ಸ್‌ ನಮ್ಮ ರೆಸ್ಟೋರೆಂಟ್‌ ಲಿಫ್ಟ್ ಬಳಸಬಾರದು, ದಯವಿಟ್ಟು ಮೆಟ್ಟಿಲುಗಳನ್ನು ಬಳಸಿ" ಎಂದು ತಮ್ಮ ಹೋಟೆಲ್‌ ಲಿಫ್ಟ್‌ ಬಳಿ ಪೋಸ್ಟರ್‌ ಅಂಟಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಪ್ರಖ್ಯಾತ ಮೇಘನಾ ಫುಡ್ಸ್ ಸದ್ಯ ಡೆಲಿವರಿ ಏಜೆಂಟ್‌ಗಳ ಬಳಿ ಕ್ಷಮೆಯಾಚಿಸಿದೆ.

ಇತ್ತೀಚೆಗೆ ಮೇಘನಾ ಫುಡ್ಸ್ (Meghana Foods), ತನ್ನ ಮಳಿಗೆಯೊಂದರಲ್ಲಿ ಫುಡ್ ಡೆಲಿವರಿ ಬಾಯ್ಸ್‌ ಲಿಫ್ಟ್ ಬಳಸುವುದನ್ನು ನಿರ್ಬಂಧಿಸುವ ಪೋಸ್ಟರ್‌ ಹಾಕಿತ್ತು. ಸೋಶಿಯಲ್​​ ಮೀಡಿಯಾದಲ್ಲಿ ಈ ಪೋಸ್ಟರ್​​ ವೈರಲ್​​ ಆಗುತ್ತಿದ್ದಂತೆ ಭಾರೀ ಟೀಕೆ ಕಾರಣವಾಗಿತ್ತು. ಆ ನಂತರ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮೇಘನಾ ಫುಡ್ಸ್​​ ಕ್ಷಮೆ ಕೇಳಿದೆ.

ಅಷ್ಟಕ್ಕೂ ಆಗಿದ್ದೇನು?

ಫುಡ್‌ ಡೆಲಿವರಿ ಏಜೆಂಟ್‌ಗಳು ದಯವಿಟ್ಟು ಲಿಫ್ಟ್‌ ಬಳಕೆ ಮಾಡಬೇಡಿ ಎಂದು ಮೇಘನಾ ಫುಡ್ಸ್‌ ಹೋಟೆಲ್‌ವೊಂದರಲ್ಲಿ ಅಂಟಿಸಲಾಗಿತ್ತು. ಇದೇ ಪೋಸ್ಟರ್‌ ಅನ್ನು ಓರ್ವ ವ್ಯಕ್ತಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ತಕ್ಷಣ ಎಚ್ಚೆತ್ತ ಮೇಘನಾ ಫುಡ್ಸ್ ಇನ್ಸ್ಟಾಗ್ರಾಮ್ ಮೂಲಕ ಪ್ರತಿಕ್ರಿಯಿಸಿ ಕ್ಷಮೆಯಾಚಿಸಿದೆ.

ʻಜನದಟ್ಟಣೆ ಸಮಯದಲ್ಲಿ ಗ್ರಾಹಕರಿಗೆ ಲಿಫ್ಟ್‌ಗಳಲ್ಲಿ ಸಮಸ್ಯೆ ಉಂಟಾಗದಂತೆ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ನಮ್ಮ ಈ ನಿಯಮ ಡೆಲಿವರಿ ಏಜೆಂಟ್‌ಗಳ ಪಾಲಿಗೆ ಅಸೂಕ್ಷ ಎಂದು ನಮಗೆ ತಿಳಿದು ಬಂತು. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆ ಪೋಸ್ಟರ್ ಹಾಕಬಾರದಿತ್ತು. ನಮ್ಮ ಡೆಲಿವರಿ ಪಾಲುದಾರರು ದಿನವಿಡೀ ಶ್ರಮಿಸುತ್ತಾರೆ. ಗೌರವ ಹಾಗೂ ಕಾಳಜಿಗೆ ಎಂದೆಂದಿಗೂ ಅರ್ಹರು. ಈ ಬಗ್ಗೆ ನಮ್ಮ ಗ್ರಾಹಕರೊಬ್ಬರು ಧ್ವನಿ ಎತ್ತಿದ್ದಕ್ಕಾಗಿ ಧನ್ಯವಾದಗಳು. ಸಂಪೂರ್ಣವಾಗಿ ನಾವು ಮಾಡಿದ ತಪ್ಪನ್ನು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಸದ್ಯ ನಾವು ಮಾಡಿದ್ದ ತಪ್ಪನ್ನು ಸರಿಪಡಿಸಿಕೊಂಡಿದ್ದೇವೆ. ಸದ್ಯ ಆ ಪೋಸ್ಟರ್ ಅನ್ನು ತೆಗೆದುಹಾಕಲಾಗಿದೆʼ ಎಂದು ಮೇಘನಾ ಫುಡ್ಸ್‌ ಹೇಳಿದೆ.

View post on Instagram

ನೆಟ್ಟಿಗರು ಹೇಳಿದ್ದೇನು?

ಮೇಘನಾ ಫುಡ್ಸ್‌ ಇನ್‌ಸ್ಟಾಗ್ರಾಂನಲ್ಲಿ ಕ್ಷಮೆಯಾಚಿಸಿದ ನಂತರವೂ ನೆಟ್ಟಿಗರು ತಮ್ಮ ಅನಿಸಿಕೆಗಳನ್ನು ಹೊರಹಾಕುತ್ತಿದ್ದು, "ಆ ಫೋಟೋ ವೈರಲ್ ಆಗಿ ನಿಮ್ಮ ಇಮೇಜ್ ಮೇಲೆ ಪರಿಣಾಮ ಬೀರಲು ಪ್ರಾರಂಭಿಸದಿದ್ದರೆ ಈ ಪೋಸ್ಟ್ ಎಲ್ಲಿ ಹಾಕುತಿದ್ರಿ?. ನಿಮ್ಮ ಖ್ಯಾತಿಗೆ ಚ್ಯುತಿ ಬಂದ ಮೇಲೆ ಮಾತ್ರ ನೀವು ನೆನಪಿಸಿಕೊಳ್ಳುವ ವಿಷಯವಲ್ಲ ಇದು" "ಗೌರವ ಕಳೆದುಕೊಂಡ ಮೇಘನಾ ಬಿರಿಯಾನಿ!" ಎಂದು ಕಿಡಿಕಾರಿದರೆ, ಮತ್ತೆ ಕೆಲವರು " ಒಳ್ಳೆಯ ಕೆಲಸ. ಪ್ರತಿಯೊಬ್ಬ ಮನುಷ್ಯನನ್ನೂ ಸಮಾನವಾಗಿ ಗೌರವಿಸಬೇಕು" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನ ನೀವು ನೋಡಬಹುದು.