ರೀಲ್ಸ್ ಮಾಡುವಾಗ 22 ವರ್ಷದ ಯುವಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ. ನಿರ್ಮಾಣ ಹಂತದ ಫ್ಲೈ ಓವರ್ ಬಳಿ ಕಾಂಕ್ರೀಟ್ ಸ್ಲ್ಯಾಬ್ ಮೇಲೆ ನಿಂತು ರೀಲ್ಸ್ ಮಾಡುವಾಗ, ಸ್ಲ್ಯಾಬ್ ಆತನ ಮೇಲೆಯೇ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು, ಈ ದುರಂತ ಕ್ಯಾಮರಾದಲ್ಲಿ ಸೆರೆಯಾಗಿದೆ.

ರೀಲ್ಸ್ ಮಾಡಲು ಹೋಗಿ ಜೀವ ಹೋಯ್ತು:

ಯುವ ಸಮೂಹ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ರೀಲ್ಸ್‌ ವೈರಲ್ ಆಗಬೇಕು ಎಂದು ತಮ್ಮ ಜೀವದ ಹಂಗು ತೊರೆದು ರೀಲ್ಟ್ ಮಾಡುತ್ತಿದ್ದು, ಪರಿಣಾಮ ಪ್ರಾಣವನ್ನೇ ಬಲಿ ಕೊಡುತ್ತಿದ್ದಾರೆ. ಅಪಾಯಕಾರಿ ಸ್ಥಳಗಳಲ್ಲಿ ಅಪಾಯಕಾರಿ ಸ್ಟಂಟ್ ಮಾಡುವುದಕ್ಕೆ ಹೋಗಿ ಈಗಾಗಲೇ ಹಲವು ಯುವಕ ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ರೀಲ್ಸ್ ಮಾಡುವ ವೇಳೆ ಯುವ ಸಮೂಹ ಮುಂದಾಗುವ ಅಪಾಯದ ಬಗ್ಗೆ ಯೋಚಿಸುವುದೂ ಇಲ್ಲ ಜಾಗೂಕರಾಗುವುದು ಇಲ್ಲ, ಪರಿಣಾಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಕಡೆ ರೀಲ್ಸ್‌ ಮಾಡುವುದಕ್ಕೆ ಹೋಗಿ ಯುವಕನೋರ್ವ ಪ್ರಾಣ ಕಳೆದುಕೊಂಡಿದ್ದು, ಆತನ ಕೊನೆಕ್ಷಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಂಕ್ರೀಟ್ ಸ್ಲಾಬ್ ತಲೆಮೇಲೆ ಬಿದ್ದು ಯುವಕ ಸಾವು:

ಹೌದು 22 ವರ್ಷದ ಯುವಕನೋರ್ವ ರೀಲ್ಸ್ ಮಾಡುವುದಕ್ಕೆ ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್‌ ಸಮೀಪ ಯುವಕನೋರ್ವ ರೀಲ್ಸ್ ಮಾಡುವ ವೇಳೆ ಕಾಂಕ್ರೀಟ್ ಸ್ಲ್ಯಾಬ್ ಆತನ ಮೇಲೆ ಬಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೊಹ್ಮದ್ ಫೈಝನ್ ಸಾವಿಗೀಡಾದ ಯುವಕ ಈತ ಕಾಂಕ್ರಿಟ್‌ ಸ್ಲ್ಯಾಬ್ ಮೇಲೆ ನಿಂತು ರೀಲ್ಸ್‌ ಮಾಡ್ತಿದ್ದ ಆ ಸಮಯದಲ್ಲಿ ಆತನ ಮೇಲೆಯೇ ಕಾಂಕ್ರೀಟ್ ಸ್ಲ್ಯಾಬ್ ಬಿದ್ದು ಆತ ಸಾವನ್ನಪ್ಪಿದ್ದಾನೆ. ಈ ದುರಾದೃಷ್ಟಕರ ಘಟನೆ ಕ್ಯಾಮರಾದಲ್ಲಿ ಸೆರೆ ಆಗಿದೆ. ಆನ್‌ಲೈನ್‌ನಲ್ಲಿ ಫೇಮಸ್ ಅಗುವುದಕ್ಕೋಸ್ಕರ ಜನ ಈ ರೀತಿ ರಿಸ್ಕಿ ಸ್ಟಂಟ್ ಮಾಡುತ್ತಿರುವುದನ್ನು ನೋಡಿ ಜನ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಹಳೆ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿದ 'ವೈಟ್ ಮೆಟಲ್'! ಬೆಳ್ಳಿ ಬೆಲೆಯಲ್ಲಿ ಏರಿಳಿತ.. ಖರೀದಿಗೆ ಸರಿಯಾದ ಸಮಯನಾ?

ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಿಜುರಿಯಾ ರೈಲ್ವೆ ಸ್ಟೇಷನ್ ಸಮೀಪ ಇರುವ ನಿರ್ಮಾಣ ಹಂತದ ಫ್ಲೈಒವರ್‌ ಬಳಿ ಈ ದುರಂತ ಸಂಭವಿಸಿದೆ. ಅಪಾಯಕಾರಿ ಸಾಹಸ ಮಾಡುವುದಕ್ಕೆ ಹೋದ ಯುವಕ ಸಾವಿನ ಮನೆ ಸೇರಿದ್ದಾನೆ. ಮೃತ ಮೊಹಮ್ಮದ್ ಫೈಝನ್ ಎಂದಿನಂತೆ ರೀಲ್ಸ್ ಮಾಡುವುದಕ್ಕೆ ಹೋಗಿದ್ದ ಆದರೆ ಅದು ದುರಂತವಾಗಿ ಬದಲಾಗಿದೆ. ಮೃತ ಮೊಹಮ್ಮದ್ ಫೈಝನ್ ರಿಛೋಲಾ ಗ್ರಾಮದ ನಿವಾಸಿಯಾಗಿದ್ದು, ವೃತ್ತಿಪರ ಹೇರ್ ಡ್ರೆಸರ್ ಆಗಿದ್ದ ಶುಕ್ರವಾರ ಸಂಜೆ ಈತ ಸ್ನೇಹಿತ ಅನೂಜ್ ಜೊತೆ ಈ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ರೀಲ್ಸ್ ಮಾಡುವುದಕ್ಕೆ ನಿರ್ಧರಿಸಿ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ರಸ್ತೆಬದಿಯಲ್ಲಿ ದೊಡ್ಡ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಜೋಡಿಸಲಾಗಿತ್ತು. ಇದರ ಮೇಲೆ ನಿಂತು ರೀಲ್ಸ್ ಮಾಡುತ್ತಿದ್ದಾಗ ಆತ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾನೆ. ಈತ ಜೊತೆಗೆ ಕಾಂಕ್ರೀಟ್ ಸ್ಲ್ಯಾಬ್ ಕೂಡ ಕೆಳಗೆ ಜಾರಿದ್ದು, ಇವನ ಮೇಲೆಯೇ ಬಂದು ಬಿದ್ದಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ವೇಟರ್ ವೇಷದಲ್ಲಿ ಮದುವೆ ಮನೆಗೆ ಬಂದು ಕಳ್ಳನ ಕೈಚಳಕ: ಕೋಟಿ ಮೌಲ್ಯದ ಹಣ ಚಿನ್ನಾಭರಣದೊಂದಿಗೆ ಪರಾರಿ

ಅಲ್ಲಿ ದಾರಿಯಲ್ಲಿ ಹೋಗುತ್ತಿದ್ದವರು ಹಾಗೂ ಅಲ್ಲಿನ ನಿವಾಸಿಗಳು ಕೂಡಲೇ ಅಲ್ಲಿಗೆ ಓಡಿ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಫೈಜನ್ ಕುಟುಂಬಕ್ಕೂ ಮಾಹಿತಿ ನೀಡಿದ್ದಾರೆ ಎದೆಯೆತ್ತರಕ್ಕೆ ಬೆಳೆದು ನಿಂತ ಮಗನ ಸಾವು ಫೈಜನ್ ಕುಟುಂಬಸ್ಥರಿಗೆ ಆಘಾತ ನೀಡಿದ್ದು, ನಮಗೆ ಈ ಆಘಾತದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಫೈಜನ್ ಅವರ ತಂದೆ ಮೆಹ್ದಿ ಹಸನ್ ಹೇಳಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ.