Bhairava Light Commando Battalion: 77ನೇ ಗಣರಾಜ್ಯೋತ್ಸವದಲ್ಲಿ ಪರಿಚಯಿಸಲಾದ ಭಾರತೀಯ ಸೇನೆಯ 'ಭೈರವ ಲೈಟ್ ಕಮಾಂಡೋ ಬೆಟಾಲಿಯನ್' ಒಂದು ಹೈಬ್ರಿಡ್ ಪಡೆಯಾಗಿದೆ. ಈ ಸೈನಿಕರು ಮುಖಕ್ಕೆ ಹಚ್ಚುವ ಬಣ್ಣವು ಕೇವಲ ಮರೆಮಾಚುವಿಕೆಗಲ್ಲ, ಇಲ್ಲಿದೆ ಇಂಟರೆಸ್ಟಿಂಗ್ ಯುದ್ಧತಂತ್ರಗಳು!
77ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾರತೀಯ ಸೇನೆಯು ತನ್ನ ಅತ್ಯಾಧುನಿಕ 'ಭೈರವ ಲೈಟ್ ಕಮಾಂಡೋ ಬೆಟಾಲಿಯನ್'(Bhairava Light Commando Battalion) ಅನ್ನು ಜಗತ್ತಿಗೆ ಪರಿಚಯಿಸಿದೆ. ಇದು ಕೇವಲ ಸಾಂಪ್ರದಾಯಿಕ ಸೈನಿಕರ ಪಡೆಯಲ್ಲ; ಬದಲಿಗೆ ಆಧುನಿಕ ತಂತ್ರಜ್ಞಾನ ಮತ್ತು ಅಪ್ರತಿಮ ಶೌರ್ಯದ ಸಮ್ಮಿಲನ. ಸಾಂಪ್ರದಾಯಿಕ ಯುದ್ಧಭೂಮಿಯಲ್ಲಿ ಹೋರಾಡುವುದರ ಜೊತೆಗೆ ಡ್ರೋನ್ ಕಣ್ಗಾವಲು, ಎಲೆಕ್ಟ್ರಾನಿಕ್ ಸಂಕೇತಗಳ ಅಡ್ಡಿಪಡಿಸುವಿಕೆ ಮತ್ತು ಅತ್ಯಾಧುನಿಕ ಉಪಕರಣಗಳ ಮೂಲಕ ಶತ್ರುಗಳನ್ನು ಸದೆಬಡಿಯಲು ಈ ಪಡೆ ಸಜ್ಜಾಗಿದೆ. ಹೈಬ್ರಿಡ್ ಯುದ್ಧಗಳಲ್ಲಿ ಶತ್ರುಗಳ ನಿದ್ದೆಗೆಡಿಸುವುದೇ ಈ ಪಡೆಯ ವಿಶೇಷತೆ.
ಸೈನ್ಯದ 'ಹೈಬ್ರಿಡ್' ಶಕ್ತಿ: ಪದಾತಿ ದಳ ಮತ್ತು ಸ್ಪೆಷಲ್ ಫೋರ್ಸಸ್ ಮಿಶ್ರಣ
ಭೈರವ ಬೆಟಾಲಿಯನ್ ಭಾರತೀಯ ಸೇನೆಯ ಪದಾತಿ ದಳ ಮತ್ತು ಪ್ಯಾರಾ ಸ್ಪೆಷಲ್ ಫೋರ್ಸಸ್ (SF) ನಡುವಿನ ಒಂದು ಹೊಸ ಆಯಾಮ. ಕಠಿಣ ಭೂಪ್ರದೇಶಗಳಲ್ಲಿ ಶತ್ರುಗಳ ಅಡಗುದಾಣಗಳನ್ನು ಭೇದಿಸುವುದು ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಸಂವೇದಕಗಳನ್ನು ವಂಚಿಸಿ ಯುದ್ಧತಂತ್ರದ ಕಾರ್ಯಾಚರಣೆಗಳನ್ನು ನಡೆಸುವುದು ಇವರ ಪ್ರಾಥಮಿಕ ಗುರಿ. ಆದರೆ, ಇಡೀ ಜಗತ್ತಿನ ಕಣ್ಣು ಈ ಸೈನಿಕರ ಮುಖಕ್ಕೆ ಹಚ್ಚಿರುವ ಆ ಕಪ್ಪು ಅಥವಾ ಕೆಂಪು ಬಣ್ಣದ ಮೇಲಿದೆ. ಏನಿದರ ರಹಸ್ಯ?
AI ಸೆನ್ಸರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸುವ 'ಬ್ಲ್ಯಾಕ್ ಫೇಸ್' ತಂತ್ರ!
ರಕ್ಷಣಾ ತಜ್ಞ ಬ್ರಿಗೇಡಿಯರ್ ಅರುಣ್ ಸೆಹಗಲ್ ಅವರ ಪ್ರಕಾರ, ಸೈನಿಕರು ಮುಖಕ್ಕೆ ಹಚ್ಚಿಕೊಳ್ಳುವ ಈ ಬಣ್ಣ ಕೇವಲ ಸಾಂಕೇತಿಕವಲ್ಲ, ಇದೊಂದು ಪ್ರಬಲ ಯುದ್ಧತಂತ್ರ. ಇಂದಿನ ಆಧುನಿಕ ಕಾಲದಲ್ಲಿ ಶತ್ರುಗಳು ಸೈನಿಕರನ್ನು ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸೆನ್ಸರ್ ಗಳನ್ನು ಬಳಸುತ್ತಾರೆ. ಮುಖಕ್ಕೆ ಹಚ್ಚಿರುವ ದಪ್ಪನೆಯ ಕಪ್ಪು ಅಥವಾ ಕೆಂಪು ಎಣ್ಣೆ ಬಣ್ಣದ ಪದರವು ಈ AI ಕ್ಯಾಮೆರಾಗಳಿಗೆ ಸೈನಿಕರ ಮುಖಚಹರೆಯನ್ನು ಗುರುತಿಸಲು ಸಾಧ್ಯವಾಗದಂತೆ ಮಾಡುತ್ತದೆ. ಮರೆಮಾಚುವಿಕೆ (Camouflage) ಕೌಶಲ್ಯದ ಭಾಗವಾಗಿರುವ ಈ ತಂತ್ರವು ಸ್ನೈಪರ್‌ಗಳ ಕಣ್ಣಿನಿಂದ ಸೈನಿಕರನ್ನು ರಕ್ಷಿಸುತ್ತದೆ.
ಶತ್ರುಗಳ ಸ್ನೈಪರ್ ಕಣ್ಣಿಗೆ ಬೀಳದಂತೆ ರಕ್ಷಣೆ
ಗುಪ್ತ ಕಾರ್ಯಾಚರಣೆಗಳ ಸಮಯದಲ್ಲಿ ಸೈನಿಕರ ಮುಖದ ಚರ್ಮವು ಹೊಳೆಯದಂತೆ ಮತ್ತು ಕಾಡಿನ ಅಥವಾ ಬೆಟ್ಟದ ಪರಿಸರದಲ್ಲಿ ಸುಲಭವಾಗಿ ಬೆರೆತುಹೋಗುವಂತೆ ಮಾಡಲು ಈ ಬಣ್ಣ ನೆರವಾಗುತ್ತದೆ. ಶತ್ರು ಪ್ರದೇಶದೊಳಗೆ ನುಗ್ಗಿದಾಗ ಸ್ನೈಪರ್‌ಗಳು ಚಹರೆಯನ್ನು ಗುರುತಿಸಿ ಗುಂಡಿಕ್ಕದಂತೆ ಇದು ಕವಚದಂತೆ ಕೆಲಸ ಮಾಡುತ್ತದೆ. ತಾಂತ್ರಿಕವಾಗಿ ಮುಂದುವರಿದಿರುವ ವೈರಿಗಳಿಗೆ ಬುದ್ಧಿವಂತಿಕೆಯಿಂದಲೇ ಮಣ್ಣುಮುಕ್ಕಿಸಲು ಭಾರತೀಯ ಸೇನೆ ಈ 'ಭೈರವ' ಯುದ್ಧತಂತ್ರವನ್ನು ಅಳವಡಿಸಿಕೊಂಡಿದೆ.


