ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಕುರಿತು ಎಲಾನ್ ಮಸ್ಕ್ ಅವರ ಟೀಕೆಗಳಿಗೆ ರಿಲಯನ್ಸ್ ಜಿಯೋ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಸ್ಟಾರ್ಲಿಂಕ್ ಸೇರಿದಂತೆ ಎಲ್ಲರ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ಹೇಳಿರುವ ಜಿಯೋ, ಪ್ರತಿಯೊಬ್ಬರೂ ಭಾರತೀಯ ಕಾನೂನುಗಳಿಗೆ ಬದ್ಧವಾಗಿರಬೇಕು ಎಂದು ಸ್ಪಷ್ಟಪಡಿಸಿದೆ.
ನವದೆಹಲಿ: ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗೆ ಅನುಮತಿ ವಿಚಾರವಾಗಿ ಉದ್ಯಮಿ ಎಲಾನ್ ಮಸ್ಕ್ ಅವರು ಕಳೆದ ಕೆಲವು ದಿನಗಳಿಂದ ಮಾಡುತ್ತಿರುವ ಟೀಕೆಗಳಿಗೆ ರಿಲಯನ್ಸ್ ಜಿಯೋ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದೆ. ಗ್ರಾಹಕರಿಗೆ ಯಾರು ಉತ್ತಮ ಸೇವೆ ಒದಗಿಸುತ್ತಾರೆ ಎಂಬುದಕ್ಕೆ ಸ್ಪರ್ಧಾತ್ಮಕ ಮಾರುಕಟ್ಟೆಯು ನಿಜವಾದ ಪರೀಕ್ಷೆ ಎಂದು ಭಾವಿಸಿದ್ದು, ಸ್ಟಾರ್ ಲಿಂಕ್ ಸೇರಿ ಎಲ್ಲರಿಂದಲೂ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ಹೇಳಿದೆ. ಆದರೆ, ಪ್ರತಿಯೊಬ್ಬ ಸೇವಾದಾರನೂ ಭಾರತೀಯ ಕಾನೂನು, ನೀತಿಗಳಿಗೆ ಬದ್ಧವಾಗಿರುವುದು ಅತ್ಯಗತ್ಯ ಎಂದು ತಿಳಿಸಿದೆ.
ಯಾವುದೇ ಸ್ಪರ್ಧೆಗೆ ಹೆದರಿಲ್ಲ
ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಮಸ್ಕ್ ಹೇಳಿಕೊಂಡಿದ್ದರು. ಇದಕ್ಕೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ರಿಲಯನ್ಸ್, ಸದ್ಯ ರಿಲಯನ್ಸ್ ಯಾವುದೇ ಸ್ಪರ್ಧೆಗೆ ಹೆದರಿಲ್ಲ ಎಂದಿದೆ.
ವಿಶ್ವದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಡೇಟಾ
ಜಿಯೋ 2016ರಲ್ಲಿ ಹೊಸ ಟೆಲಿಕಾಂ ಸೇವಾದಾರನಾಗಿ ಭಾರತದ ಭಾರೀ ಸ್ಪರ್ಧಾತ್ಮಕತೆಯ ಮಾರುಕಟ್ಟೆಗೆ ಪ್ರವೇಶಿಸಿತು. ಈ ಕ್ಷೇತ್ರಕ್ಕೆ ಕಾಲಿಡುವಾಗ ಸಂಸ್ಥೆ ಬಳಿ ಒಬ್ಬನೇ ಒಬ್ಬ ಸೇವಾದಾರನೂ ಇರಲಿಲ್ಲ, ಇದಾಗಿ 10 ವರ್ಷಗಳಲ್ಲಿ ಕಂಪನಿ 53 ಕೋಟಿ ಗ್ರಾಹಕರನ್ನು ಹೊಂದಿದೆ. ಭಾರತೀಯರಿಗೆ ಅತ್ಯುತ್ತಮ ಡಿಜಿಟಲ್ ಮೂಲಸೌಕರ್ಯ ಮತ್ತು ವಿಶ್ವದಲ್ಲೇ ಅತ್ಯಂತ ಕಡಿಮೆ ದರದಲ್ಲಿ ಡೇಟಾ ಒದಗಿಸುತ್ತಿದೆ ಎಂದು ಹೇಳಿಕೊಂಡಿದೆ.


