ಜ.17ರಂದು ಆಯೋಧ್ಯೆಯಲ್ಲಿ ಆಯೋಜಿಸಿದ್ದ ರಾಮಲಲ್ಲಾ ಮೆರವಣಿಗೆ ದಿಢೀರ್ ರದ್ದು!
ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠೆ ನಡೆಯಲಿದೆ. ಇದಕ್ಕೂ ಮೊದಲು ಟ್ರಸ್ಟ್, ರಾಮಲಲ್ಲಾ ಮೂರ್ತಿಯನ್ನು ಆಯೋಧ್ಯೆ ನಗರಯಲ್ಲಿ ಮೆರವಣಿಗೆ ಮೂಲಕ ರಾಮ ಮಂದಿರಕ್ಕೆ ಕರೆಯಲು ಸಿದ್ಧತೆ ಮಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ಈ ನಿರ್ಧಾರ ರದ್ದು ಮಾಡಲಾಗಿದೆ.
ಆಯೋಧ್ಯೆ(ಜ.09) ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಪ್ರಾಣಪ್ರತಿಷ್ಠೆ ತಯಾರಿಗಳು ಭರದಿಂದ ಸಾಗಿದೆ. ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ. ಇದಕ್ಕೂ ಮೊದಲು ಅಂದರೆ ಜನವರಿ 17 ರಂದು ರಾಮಲಲ್ಲಾ ಮೂರ್ತಿಯನ್ನು ಆಯೋಧ್ಯೆ ನಗರದಲ್ಲಿ ಮೆರವಣಿಗೆ ಮಾಡಲು ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿತ್ತು. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿತ್ತು. ಆಯೋಧ್ಯೆ ನಗರದಲ್ಲಿನ ರಾಮ ಭಕ್ತರು ರಾಮಲಲ್ಲಾ ದರ್ಶನ ಪಡೆಯುವ ಸಲುವಾಗಿ ಹಾಗೂ ಶ್ರೀರಾಮಚಂದ್ರ ಆಯೋಧ್ಯೆಗೆ ನಗರದ ಮೂಲಕ ರಾಮ ಜನ್ಮಭೂಮಿಗೆ ಮರಳು ಭಾವನಾತ್ಮಕ ವಿಚಾರದಿಂದ ಮೆರವಣಿಗೆ ಆಯೋಜಿಸಲಾಗಿತ್ತು. ಆದರೆ ಈ ಮೆರವಣಿಗೆ ರದ್ದಾಗಿದೆ. ಭದ್ರತಾ ಕಾರಣಗಳಿಂದ ಆಯೋಧ್ಯೆ ನಗರದಲ್ಲಿ ಆಯೋಜಿಸಿದ್ದ ರಾಮಲಲ್ಲಾ ಮೆರಣಿಗೆ ರದ್ದು ಮಾಡಲಾಗಿದೆ.
ಆಯೋಧ್ಯೆ ನಗರದಲ್ಲಿ ಪ್ರದಕ್ಷಿಣೆ ಮೆರವಣಿಗೆ ರದ್ದು ಮಾಡಿ ಇದೀಗ ರಾಮ ಜನ್ಮ ಭೂಮಿ ಆವರಣದಲ್ಲಿ ಪ್ರದಕ್ಷಿಣೆಗೆ ಆಯೋಜನೆ ಮಾಡಲಾಗಿದೆ. ಹೊಸ ರಾಮಲಲ್ಲಾ ಮೂರ್ತಿಯನ್ನು ಜನ್ಮಭೂಮಿ ಆವರಣದಲ್ಲೇ ಪ್ರದಕ್ಷಿಣೆ ಹಾಗೂ ಮೆರವಣಿಗೆ ಮೂಲಕ ಸಾಗಿ ರಾಮ ಮಂದಿರಕ್ಕೆ ತರಲಾಗುತ್ತದೆ. ಈ ಕುರಿತು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಪಷ್ಟಪಡಿಸಿದೆ.
ರಾಮ ಮಂದಿರ ವಿಡಿಯೋ ರಿಲೀಸ್ ಮಾಡಿದ ಟ್ರಸ್ಟ್, ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ದೇಗುಲ!
ಆಯೋಧ್ಯೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು, ರಾಮಮಂದಿರ ಪ್ರಾಣಪ್ರತಿಷ್ಠೆ ಭದ್ರತೆ ಜವಾಬ್ದಾರಿ ವಹಿಸಿಕೊಂಡಿರುವ ಭದ್ರತಾ ಪಡೆಗಳ ಜೊತೆ ರಾಮ ಜನ್ಮಭೂಮಿ ಟ್ರಸ್ಟ್ ಮಹತ್ವದ ಸಭೆ ನಡೆಸಿದೆ. ಈ ವೇಳೆ ನೂತನ ರಾಮಲಲ್ಲಾ ಮೂರ್ತಿ ಆಯೋಧ್ಯೆ ನಗರದಲ್ಲಿ ಮೆರವಣಿ ಮಾಡುವುದರಿಂದ ಕಿಕ್ಕಿರಿದು ಜನ ಸೇರಲಿದ್ದಾರೆ. ಬೇರೆ ರಾಜ್ಯಗಳು, ದೇಶ ವಿದೇಶಗಳಿಂದ ಆಯೋಧ್ಯೆಗೆ ಜನರು ಆಗಮಿಸಲಿದ್ದಾರೆ. ಹೀಗಾಗಿ ಲಕ್ಷಾಂತರ ಜನರನ್ನು ನಿಯಂತ್ರಿಸವುದು ಹಾಗೂ ಸೂಕ್ತ ಭದ್ರತೆ ಕಲ್ಪಿಸುವುದು ಸವಾಲಾಗಲಿದೆ. ಹೀಗಾಗಿ ಈ ಮೆರವಣಿಗೆ ರದ್ದು ಮಾಡುವಂತೆ ಭದ್ರತಾ ಎಜೆನ್ಸಿ ಹಾಗೂ ಆಯೋಧ್ಯೆ ಆಡಳಿತ ವಿಭಾಗ ಮನವಿ ಮಾಡಿದೆ.
ಆಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಗಣ್ಯರು ರಾಮನಗರಿಗೆ ಆಗಮಿಸುತ್ತಿದ್ದಾರೆ. ಇದಕ್ಕೂ ಮುನ್ನ ಅಪಾರ ಜನಸಂದಣಿ ಸೇರಿದಂತೆ ಮುಂದಿನ ದಿನಗಳ ಭದ್ರತೆಗೂ ಸವಾಲಾಗಲಿದೆ. ರಾಮ ಭಕ್ತರ ಸೋಗಿನಲ್ಲಿ ಯಾರೇ ಆಯೋಧ್ಯೆ ನಗರದ ಒಳಗ ಸೇರಿದರೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಮೆರವಣಿಗೆ ರದ್ದು ಮಾಡಲು ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ರಾಮಲಲ್ಲಾ ಮೆರವಣಿಗೆ ರದ್ದು ಮಾಡಿದೆ.
ರಾಮಮಂದಿರ ಪ್ರಾಣಪ್ರತಿಷ್ಠೆ ದಿನ ಬಾಂಬ್ ಬ್ಲಾಸ್ಟ್‌ಗೆ ಬಿಜೆಪಿ ಪ್ಲಾನ್, ವಿವಾದ ಸೃಷ್ಟಿಸಿದ ಆರ್‌ಜೆಡಿ ನಾಯಕ!
ಮೂವರು ಶಿಲ್ಪಿಗಳು ಹೊಸದಾಗಿ ಕೆತ್ತಲಾಗಿರುವ ರಾಮಲಲ್ಲಾ ಮೂರ್ತಿಯನ್ನು ಜನವರಿ 17 ರಂದು ಅಂತಿಮಗೊಳಿಸಲಾಗುತ್ತದೆ. ಇತ್ತೀಚೆಗೆ ಶ್ರೀರಾಮ ಮಂದಿರಕ್ಕೆ ಮೂರ್ತಿಯನ್ನು ಕೆತ್ತನೆ ಮಾಡಿರುವ ದೇಶದ ಮೂವರು ಶಿಲ್ಪಿಗಳ ಪೈಕಿ ಕರ್ನಾಟಕ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ವಿಗ್ರಹವನ್ನೇ ಆಯ್ಕೆ ಮಾಡಲಾಗಿದೆ ಎಂಬ ದಟ್ಟ ವದಂತಿಗಳ ಬೆನ್ನಲ್ಲೇ ಮಂದಿರ ಟ್ರಸ್ಟ್ ಸ್ಪಷ್ಟನೆ ನೀಡಿತ್ತು.