ಭಾರತದ ಮೇಲೆ ಮತ್ತೆ ಭಯೋತ್ಪಾದಕ ದಾಳಿ ನಡೆದರೆ ತಕ್ಕ ಉತ್ತರ ನೀಡುವುದಾಗಿ ರಾಜನಾಥ್ ಸಿಂಗ್ ಎಚ್ಚರಿಸಿದ್ದರು. ಇದಕ್ಕೆ ಪ್ರತಿಯಾಗಿ ಪಾಕ್ ಸಚಿವರು ಕೋಲ್ಕತ್ತಾ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದು, ಇದಕ್ಕೆ ರಾಜನಾಥ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ (ಏ.7): ಭಾರತದ ಮೇಲೆ ಮತ್ತೆ ಭಯೋತ್ಪಾದಕ ದಾಳಿಗಳು ನಡೆದರೆ ಇಸ್ಲಾಮಾಬಾದ್ ವಿರುದ್ಧ ಘಾತಕ ಕ್ರಮ ಕೈಗೊಳ್ಳಲಾಗುವುದು ಎಂದು ರಾಜನಾಥ್ ಸಿಂಗ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, "ಭಾರತ ಏನಾದರೂ ಸಾಹಸಕ್ಕೆ ಕೈಹಾಕಿದರೆ ನಾವು ಕೋಲ್ಕತ್ತಾದ ಮೇಲೆ ದಾಳಿ ನಡೆಸುವ ಮೂಲಕ ಉತ್ತರಿಸುತ್ತೇವೆ" ಎಂದು ಉದ್ಧಟತನದ ಹೇಳಿಕೆ ನೀಡಿದ್ದರು. ಈ ಪ್ರಚೋದನಾಕಾರಿ ಹೇಳಿಕೆಗೆ ಭಾರತದ ರಕ್ಷಣಾ ಸಚಿವರು ಈಗ ತಕ್ಕ ಉತ್ತರ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಸುದ್ದಿ ಸಂಸ್ಥೆ ಎಎನ್‌ಐ (ANI) ಜೊತೆ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನದ ಸಚಿವರು ಇಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಕಿವಿಮಾತು ಹೇಳಿದ್ದಾರೆ. "55 ವರ್ಷಗಳ ಹಿಂದೆ ಪಾಕಿಸ್ತಾನ ಎರಡು ಭಾಗವಾದಾಗ ಅವರು ಅದರ ಪರಿಣಾಮವನ್ನು ಅನುಭವಿಸಿದ್ದಾರೆ. ಈಗ ಅವರು ಮತ್ತೆ ಬಂಗಾಳದ ಮೇಲೆ ಕಣ್ಣಿಡಲು ಪ್ರಯತ್ನಿಸಿದರೆ, ಈ ಬಾರಿ ಪಾಕಿಸ್ತಾನ ಎಷ್ಟು ಹೋಳಾಗುತ್ತದೆಯೋ ಆ ದೇವರಿಗೇ ಗೊತ್ತು," ಎಂದು ಸಿಂಗ್ ಗುಡುಗಿದ್ದಾರೆ.

ಇದೇ ವಿಷಯವಾಗಿ ತೃಣಮೂಲ ಕಾಂಗ್ರೆಸ್ (TMC) ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾಕ್ ಸಚಿವನ ಬೆದರಿಕೆಯನ್ನು ಖಂಡಿಸಲು ಕೇಂದ್ರ ಸರ್ಕಾರಕ್ಕೆ ಧೈರ್ಯವಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಮೋದಿ, ಶಾಗೆ ಟೀಕಿಸಿದ್ದ ಅಭಿಷೇಕ್‌ ಬ್ಯಾನರ್ಜಿ

ಕೋಲ್ಕತ್ತಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, "ಸ್ವಯಂ ಘೋಷಿತ '56 ಇಂಚಿನ' ಪ್ರಧಾನಿ ಮತ್ತು ಅವರ ಗೃಹ ಸಚಿವರು ಚುನಾವಣಾ ಪ್ರಚಾರದಲ್ಲಿ ಎಷ್ಟು ಬ್ಯುಸಿಯಾಗಿದ್ದಾರೆ ಎಂದರೆ, ಬಂಗಾಳದ ಮೇಲಿನ ಬಾಹ್ಯ ಆಕ್ರಮಣದ ಬೆದರಿಕೆಗೆ ಪ್ರತಿಕ್ರಿಯಿಸಲು ಅವರಿಗೆ ಸಮಯವಿಲ್ಲ. ಪಾಕಿಸ್ತಾನದ ರಕ್ಷಣಾ ಸಚಿವ ಬಹಿರಂಗವಾಗಿ ಕೋಲ್ಕತ್ತಾ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದ್ದರೂ, ಮೋದಿ ಅಥವಾ ಅಮಿತ್ ಶಾ ಭಾರತದ ಸಾರ್ವಭೌಮತ್ವದ ಮೇಲಿನ ಈ ದಾಳಿಯನ್ನು ಖಂಡಿಸುವ ಧೈರ್ಯ ತೋರಿಲ್ಲ," ಎಂದು ಟೀಕಿಸಿದರು.

"ಬಂಗಾಳದ ಜನರ ಪ್ರಾಣ ಅವರಿಗೆ ಮುಖ್ಯವಲ್ಲವೇ? ಅಥವಾ ಅವರು ನಿಲುವು ತೆಗೆದುಕೊಳ್ಳಲು ಹೆದರುತ್ತಿದ್ದಾರೆಯೇ? ಅವರಿಗೆ ಸ್ವಲ್ಪವಾದರೂ ಧೈರ್ಯವಿದ್ದರೆ ಬಿಎಸ್‌ಎಫ್ ಮತ್ತು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (PoK) ಮರು ವಶಪಡಿಸಿಕೊಳ್ಳಲಿ. ನರೇಂದ್ರ ಮೋದಿ, ಅಮಿತ್ ಶಾ ಅಥವಾ ರಾಜನಾಥ್ ಸಿಂಗ್ ಇದಕ್ಕೆ ಸಿದ್ಧರಿದ್ದಾರೆಯೇ?" ಎಂದು ಅಭಿಷೇಕ್ ಬ್ಯಾನರ್ಜಿ ಸವಾಲು ಹಾಕಿದ್ದಾರೆ.

ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ (ಇದರಲ್ಲಿ 26 ಜನರು ಸಾವನ್ನಪ್ಪಿದ್ದರು) ವಾರ್ಷಿಕೋತ್ಸವದ ಮುನ್ನವೇ ಖವಾಜಾ ಆಸಿಫ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಉಭಯ ದೇಶಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.