ಮಾವಿನ ಮರದಲ್ಲಿ ಬಿಜೆಪಿ ನಾಯಕನ ಶವ ನೇಣುಬಿಗಿದ ರೀತಿಯಲ್ಲಿ ಪತ್ತೆಯಾಗಿದೆ. ಆದರೆ ನಾಯಕನ ದೇಹದಲ್ಲಿನ ಹಲವು ಗಾಯಗ ಗುರುತು ಸಾವಿನ ಅನುಮಾನ ಹೆಚ್ಚಿಸಿದೆ. ಇತ್ತ ನಾಯಕನ ಪುತ್ರ ದೂರು ದಾಖಲಿಸಿದ್ದಾನೆ.
ಬನ್ಸವಾರ (ಮೇ.18) ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಇದರ ನಡುವೆ ಬಿಜೆಪಿ ನಾಯಕನ ಶವ ಪತ್ತೆಯಾಗಿರುವುದು ತೀವ್ರ ಆತಂಕ ಹಾಗೂ ಅನುಮಾನಕ್ಕೆ ಕಾರಣಾಗಿದೆ. ರಾಜಸ್ಥಾನದ ಬಿಜೆಪಿ ನಾಯಕ ಅರ್ಜುನ್ ಸಿಂಗ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ದೇಹದಲ್ಲಿನ ಗಾಯದ ಗುರುತು ಪೊಲೀಸರ ಅನುಮಾನ ಹೆಚ್ಚಿಸಿದೆ. ಇತ್ತ ನಾಯಕನ ಪುತ್ರ ನೀಡಿದ ದೂರಿನಿಂದ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಮನೆಯಿಂದ ಕೆಲವೇ ದೂರದಲ್ಲಿನ ಮಾವಿನ ಮರದಲ್ಲಿ ಶವ ಪತ್ತೆ
47ರ ಹರೆಯದ ಬಿಜೆಪಿ ನಾಯಕ ಅರ್ಜುನ್ ಸಿಂಗ್ ಬನ್ಸವಾರ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿದ್ದರು. ಮನೆಯಲ್ಲಿ ಪತ್ನಿ ಜೊತೆಗೆ ಜಗಳವಾಡಿದ್ದ ಅರ್ಜುನ್ ಸಿಂಗ್ ಬಳಿಕ ಕೆಲಸದ ಕಾರಣದಿಂದ ಮನೆಯಿಂದ ತೆರಳಿದ್ದರು. ಎಷ್ಟು ಹೊತ್ತಾದರೂ ಮನೆಗೆ ಬಾರದ ಕಾರಣ ಕುಟುಂಬಸ್ಥರಿಂದ ಹುಡುಕಾಟ ಆರಂಭಗೊಂಡಿತ್ತು. ಈ ವೇಳೆ ಅರ್ಜುನ್ ಸಿಂಗ್ ಶವ ಮಾವಿನ ಮರದಲ್ಲಿ ಪತ್ತೆಯಾಗಿದೆ. ಮನೆಯಿಂದ ಕೆಲವೇ ದೂರದಲ್ಲಿ ಅರ್ಜುನ್ ಸಿಂಗ್ ಶವ ಪತ್ತೆಯಾಗಿದೆ.
ಸ್ಥಳೀಯರು ಮೃತದೇಹ ಗಮನಿಸಿ ಪೊಲೀಸರಿಗೆ ಮಾಹಿತಿ
ಕುಟುಂಬಸ್ಥರು ಫೋನ್ ಮೂಲಕ ವಿಚಾರಿಸಲು ಆರಂಭಿಸಿದ್ದರು. ಇತ್ತ ಸ್ಥಳೀಯರು ಮಾವಿನ ಮರದಲ್ಲಿ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹ ಪರಿಶೀಲಿಸಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹದಲ್ಲಿದೆ ಹಲವು ಗಾಯದ ಗುರುತು
ಪೊಲೀಸರು ಮೃತದೇಹ ಪರಿಶೀಲನೆ ವೇಳೆ ಗಾಯದ ಗುರುತು ಪತ್ತೆಯಾಗಿದೆ. ಹೀಗಾಗಿ ಇದು ಕೊಲೆ ಆಗಿರುವ ಅನುಮಾನವು ವ್ಯಕ್ತವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ಅರ್ಜುನ್ ಸಿಂಗ್ ಪುತ್ರ ಅಭಿಮನ್ಯು ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ತಂದೆ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಇದೀಗ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.


