ಚೆನ್ನೈನ ಪೌರಕಾರ್ಮಿಕ ಮಹಿಳೆ ಪದ್ಮಾ, ರಸ್ತೆಯಲ್ಲಿ ಸಿಕ್ಕ ಲಕ್ಷಾಂತರ ಮೌಲ್ಯದ ಚಿನ್ನವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ. ಅವರ ಈ ನಿಸ್ವಾರ್ಥ ಗುಣಕ್ಕೆ ಮೆಚ್ಚಿದ ಸೂಪರ್ ಸ್ಟಾರ್ ರಜನಿಕಾಂತ್, ಪದ್ಮಾ ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಚೆನ್ನೈ (ಫೆ.4): ಪ್ರಾಮಾಣಿಕತೆ ಎಂಬುದು ಇಂದಿನ ಕಾಲದಲ್ಲಿ ಅಪರೂಪದ ಗುಣ. ಅಂತಹ ಗುಣವನ್ನು ಮೈಗೂಡಿಸಿಕೊಂಡ ಪೌರಕಾರ್ಮಿಕ ಮಹಿಳೆ ಪದ್ಮಾ ಅವರ ಕಥೆ ಈಗ ಇಡೀ ದೇಶದ ಗಮನ ಸೆಳೆದಿದೆ. ರಸ್ತೆಯಲ್ಲಿ ಸಿಕ್ಕ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ವಾರಸುದಾರರಿಗೆ ಹಿಂದಿರುಗಿಸಿದ ಪದ್ಮಾ ಅವರಿಗೆ, ಸ್ವತಃ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ನಿವಾಸಕ್ಕೆ ಆಹ್ವಾನಿಸಿ ವಿಶೇಷ ಗೌರವ ಸಲ್ಲಿಸಿದ್ದಾರೆ.
ಚೆನ್ನೈನ ಟಿ. ನಗರದಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುವ ಪದ್ಮಾ ಅವರಿಗೆ ಕೆಲಸದ ವೇಳೆ ರಸ್ತೆಯಲ್ಲಿ ಒಂದು ಪೌಚ್ ಸಿಕ್ಕಿತ್ತು. ಅದನ್ನು ತೆರೆದು ನೋಡಿದಾಗ ಅವರು ಆಶ್ಚರ್ಯಚಕಿತರಾಗಿದ್ದರು. ಅದರಲ್ಲಿ ಬರೋಬ್ಬರಿ 45 ಸವರನ್ (ಸುಮಾರು 360 ಗ್ರಾಂ) ತೂಕದ ಚಿನ್ನಾಭರಣಗಳಿದ್ದವು. ಇಂದು ಚಿನ್ನದ ಬೆಲೆ ಗಗನಕ್ಕೇರಿರುವಾಗ ಆಭರಣಗಳನ್ನು ಕಂಡ ಯಾರೇ ಆದರೂ ಆಸೆ ಪಡುವುದು ಸಹಜ. ಆದರೆ, ಪದ್ಮಾ ಅವರು ಕಿಂಚಿತ್ತೂ ಆಸೆ ಪಡದೆ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಆಭರಣಗಳನ್ನು ಒಪ್ಪಿಸಿದ್ದರು. ಅವರ ಈ ಪ್ರಾಮಾಣಿಕತೆಯಿಂದಾಗಿ ಆಭರಣಗಳು ಅದರ ಅಸಲಿ ಮಾಲೀಕರ ಕೈ ಸೇರುವಂತಾಗಿತ್ತು.
ಪದ್ಮಾ ಅವರ ಈ ನಿಸ್ವಾರ್ಥ ಕಾರ್ಯದ ಸುದ್ದಿ ತಿಳಿಯುತ್ತಿದ್ದಂತೆ ನಟ ರಜನಿಕಾಂತ್ ಅವರು ಭಾವುಕರಾಗಿದ್ದಾರೆ. ಘಟನೆ ನಡೆದ ಕೆಲ ದಿನಗಳ ಬಳಿಕ ಪದ್ಮಾ ಮತ್ತು ಅವರ ಕುಟುಂಬವನ್ನು ತಮ್ಮ ಚೆನ್ನೈನ ಪೋಯಸ್ ಗಾರ್ಡನ್ ನಿವಾಸಕ್ಕೆ ಆಹ್ವಾನಿಸಿದರು. ಮಂಗಳವಾರ ಪತಿ ಮತ್ತು ಮಕ್ಕಳೊಂದಿಗೆ ಆಗಮಿಸಿದ ಪದ್ಮಾ ಅವರಿಗೆ ರಜನಿಕಾಂತ್ ಅವರು ಶಾಲು ಹೊದಿಸಿ ಸನ್ಮಾನಿಸಿದರು.
ಆಕೆಯ ಪ್ರಾಮಾಣಿಕತೆ ಬೆಲೆ ಕಟ್ಟಲಾಗದ ಗುಣ
ಅಷ್ಟೇ ಅಲ್ಲದೆ, ಆಕೆಯ ಪ್ರಾಮಾಣಿಕತೆಯನ್ನು ಬೆಲೆಕಟ್ಟಲಾಗದ ಗುಣ ಎಂದು ಶ್ಲಾಘಿಸಿದ ರಜನಿಕಾಂತ್, ತಮ್ಮ ಕಡೆಯಿಂದ 2 ಸವರನ್ ತೂಕದ ಚಿನ್ನದ ಸರವನ್ನು (ಓಂ ಪದಕವಿರುವ ಸರ) ಉಡುಗೊರೆಯಾಗಿ ನೀಡಿದರು.
ಸನ್ಮಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪದ್ಮಾ, ಆನಂದಬಾಷ್ಪ ಸುರಿಸಿದರು. "ನಾನು ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ಅವರನ್ನು ಹತ್ತಿರದಿಂದ ನೋಡುವುದೇ ನನ್ನ ಪಾಲಿನ ದೊಡ್ಡ ಕನಸಾಗಿತ್ತು. ನನ್ನ ಕಷ್ಟದ ಬದುಕಿನಲ್ಲಿ ತಲೈವಾ ಅವರು ನನ್ನನ್ನು ಮನೆಗೆ ಕರೆದು ಇಷ್ಟು ದೊಡ್ಡ ಗೌರವ ನೀಡುತ್ತಾರೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇದು ನನ್ನ ಜೀವನದ ಅತ್ಯಂತ ಶ್ರೇಷ್ಠ ಮತ್ತು ಮರೆಯಲಾಗದ ಕ್ಷಣ" ಎಂದು ಅವರು ಭಾವುಕರಾಗಿ ಹೇಳಿದ್ದಾರೆ.


