ಉತ್ತರಾಖಂಡದಲ್ಲಿ ಭೂಕುಸಿತದಿಂದ ರಸ್ತೆಗಳು ಮುಚ್ಚಿದ್ದರಿಂದ, ರಾಜಸ್ಥಾನದ ನಾಲ್ವರು B.Ed ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಹೆಲಿಕಾಪ್ಟರ್ ಬಾಡಿಗೆಗೆ ಪಡೆದರು. ಹಲ್ದ್ವಾನಿಯಿಂದ ಮುನ್ಸಿಯಾರಿಗೆ ಹೆಲಿಕಾಪ್ಟರ್ ಮೂಲಕ ತೆರಳಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಾಹಸ ಎಲ್ಲರ ಗಮನ ಸೆಳೆದಿದೆ.
ಪಿಥೋರಗಢ (ಸೆ.6): ಉತ್ತರಾಖಂಡದಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ರಸ್ತೆಗಳು ಸ್ಥಗಿತಗೊಂಡರೂ, ರಾಜಸ್ಥಾನದ ನಾಲ್ವರು B.Ed ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ತಪ್ಪಿಸಿಕೊಳ್ಳದಿರಲು ಹೆಲಿಕಾಪ್ಟರ್ ಅನ್ನೇ ಬಾಡಿಗೆಗೆ ಪಡೆದು ಮುನ್ಸಿಯಾರಿಯ ಆರ್‌ಎಸ್ ಟೋಲಿಯಾ ಪಿಜಿ ಕಾಲೇಜಿಗೆ ತಲುಪಿದ ರೋಚಕ ಘಟನೆ ನಡೆದಿದೆ.
ಹೌದು. ರಾಜಸ್ಥಾನದ ಬಲೋತ್ರಾ ಪಟ್ಟಣದ ನಿವಾಸಿಗಳಾದ ಒಮರಮ್ ಜಾಟ್, ಮಂಗಲಾಂ ಜಾಟ್, ಪ್ರಕಾಶ್ ಗೋಡರಾ ಜಾಟ್ ಮತ್ತು ನರ್ಪತ್ ಕುಮಾರ್ ಎಂಬ ಉತ್ತರಾಖಂಡ ಮುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಸಾಹಸಕಾರ್ಯಕ್ಕೆ ಕೈಹಾಕಿದವರು.
ಆಗಸ್ಟ್ 31 ರಂದು ಹಲ್ದ್ವಾನಿಯನ್ನು ತಲುಪಿದಾಗ, ಭೂಕುಸಿತದಿಂದ ಮುನ್ಸಿಯಾರಿಗೆ ಹೋಗುವ ಎಲ್ಲಾ ರಸ್ತೆಗಳು ಮುಚ್ಚಿರುವುದು ಗೊತ್ತಾಗಿದೆ. ಆದ್ರೆ ಪರೀಕ್ಷೆಗೆ ಹಾಜರಾಗದಿದ್ದರೆ ಒಂದು ವರ್ಷ ನಷ್ಟವಾಗುತ್ತದೆಂದು ಭಾವಿಸಿದ ವಿದ್ಯಾರ್ಥಿಗಳು ಈ ಸಾಹಸಕ್ಕೆ ಕೈಹಾಕಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪರೀಕ್ಷೆ ತಪ್ಪಿಸಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ತಕ್ಷಣವೇ ಹೆರಿಟೇಜ್ ಏವಿಯೇಷನ್‌ನ ಸಿಇಒ ಸಂಪರ್ಕಿಸಿ, ಪರಿಸ್ಥಿತಿಯ ಬಗ್ಗೆ ತಿಳಿಸಿ ಹಲ್ದ್ವಾನಿಯಿಂದ ಮುನ್ಸಿಯಾರಿಗೆ ಹೆಲಿಕಾಪ್ಟರ್ ಸೇವೆ ನೀಡುವ ಬಗ್ಗೆ ವಿನಂತಿಸಿದ್ದಾರೆ.
ಕೆಟ್ಟ ಹವಾಮಾನದ ನಡುವೆಯೂ ಕಂಪನಿಯು ಇಬ್ಬರು ಪೈಲಟ್‌ಗಳೊಂದಿಗೆ ಹೆಲಿಕಾಪ್ಟರ್ ಕಳುಹಿಸಿ, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು, ಮರಳಿ ಹಲ್ದ್ವಾನಿಗೆ ಕರೆತಂದಿತು. ಒಂದು ಮಾರ್ಗದ ಹೆಲಿಕಾಪ್ಟರ್ ಸವಾರಿಗೆ ಪ್ರತಿ ವಿದ್ಯಾರ್ಥಿಗೆ 5,200 ರೂ. ಶುಲ್ಕ ವಿಧಿಸಲಾಗಿತ್ತು. ಉತ್ತರಾಖಂಡ ಮುಕ್ತ ವಿಶ್ವವಿದ್ಯಾಲಯದ ಪರೀಕ್ಷಾ ಉಸ್ತುವಾರಿ ಸೋಮೇಶ್ ಕುಮಾರ್, 'ಪರೀಕ್ಷಾ ಕೇಂದ್ರವನ್ನು ಅಭ್ಯರ್ಥಿಗಳೇ ಆಯ್ಕೆ ಮಾಡಿಕೊಂಡಿದ್ದಾರೆ' ಎಂದು ತಿಳಿಸಿದರು. ಈ ಘಟನೆಯು ವಿದ್ಯಾರ್ಥಿಗಳ ಛಲ ಮತ್ತು ಸಂಕಲ್ಪವನ್ನು ತೋರಿಸಿದೆ. ಈ ಘಟನೆ ದೇಶಾದ್ಯಂತ ಗಮನ ಸೆಳೆದಿದೆ.
