ಕೇರಳ ಇತಿಹಾಸದಲ್ಲೇ ಮೊದಲ ಬಿಜೆಪಿ ಮೇಯರ್, 45 ವರ್ಷದ ಸಿಪಿಎಂ ಅಧಿಪತ್ಯ ಅಂತ್ಯ, ರಾಜಧಾನಿಯಲ್ಲೇ ಎಲ್‌ಡಿಎಫ್ ಆಡಳಿತಕ್ಕೆ ಬಿಜೆಪಿ ಅಂತ್ಯಹಾಡಿದೆ. ಬಿಜೆಪಿಯ ಕೌನ್ಸಿಲರ್ ವಿ.ವಿ. ರಾಜೇಶ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ತಿರುವನಂತಪುರಂ (ಡಿ.26) ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಸಿಪಿಎಂ ಹಾಗೂ ಕಾಂಗ್ರೆಸ್ ಅಧಿಪತ್ಯ. ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇಲ್ಲಿ ಕಮ್ಯೂನಿಸ್ಟ್ ಪಾರ್ಟಿಯದ್ದೇ ಕಾರುಕಾರು. ಹೌದು, ಕೇರಳ ರಾಜಧಾನಿ ತಿರುವನಂತಪುರಂ ಪಾಲಿಕೆಯನ್ನು ಸಿಪಿಎಂ ಆಡಳಿತ ನಡೆಸುತ್ತಾ ಬಂದಿದೆ. ಕಳೆದ 45 ವರ್ಷಗಳಿಂದ ಇಲ್ಲಿ ಸಿಪಿಎಂ ಆಡಳಿತ. ಆದರೆ ಈ ಬಾರಿ ಕೇರಳ ಹೊಸ ಇತಿಹಾಸ ಬದಿತ್ತು. ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ತಿರುವನಂತಪುರಂ ಕಾರ್ಪೋರೇಶನ್‌ನ್ನು ಬಿಜೆಪಿ ಗೆದ್ದುಕೊಂಡಿತ್ತು. ಇದೀಗ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿವಿ ರಾಜೇಶ್ 51 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕೇರಳ ಇತಿಹಾಸದಲ್ಲೇ ಮೊದಲ ಬಿಜೆಪಿ ಮೇಯರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇರಳದಲ್ಲಿ ಬಿಜೆಪಿಗೆ ಮೊದಲ ಬಾರಿಗೆ ಅಧಿಕಾರ
ಕೇರಳದ ಇತಿಹಾಸದಲ್ಲಿ ಇದುವರೆಗೆ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲ. ಸ್ಥಳೀಯ ಸಂಸ್ಥೆಯಾಗಿರಬಹುದು, ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಶಾಸಕ, ಸಂಸರದ ಹೊರತುಪಡಿಸಿದರೆ ಅಧಿಕಾರದ ಸಿಕ್ಕೇ ಇಲ್ಲ. 2016ರಲ್ಲಿ ಬಿಜೆಪಿಯಿಂದ ನೇಮಾಮ್ ವಿಧಾನಸಭಾ ಕ್ಷೇತ್ರದಲ್ಲಿ ಒ ರಾಜಗೋಪಾಲ್ ಗೆಲುವು ಸಾಧಿಸಿ ಶಾಸಕರಾಗಿದ್ದರು. ಇನ್ನು 2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಸುರೇಶ್ ಗೋಪಿ ಬಿಜೆಪಿಯ ಸಂಸದರಾಗಿ ಆಯ್ಕೆಯಾಗಿದ್ದಾರೆ. ಸುರೇಶ್ ಗೋಪಿ ಸದ್ಯ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಕೇರಳದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷದ ಕೌನ್ಸಿಲರ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕೇರಳ ರಾಜಧಾನಿಯಲ್ಲಿಯೇ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
51 ಮತಗಳಿಂದ ವಿವಿ ರಾಜೇಶ್ ಗೆಲುವು
ತಿರುವನಂತಪುರಂ ಕಾರ್ಪೋರೇಶನ್‌ನ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ವಿವಿ ರಾಜೇಶ್ 50 ಬಿಜೆಪಿ ಕೌನ್ಸಿಲರ್ ಹಾಗೂ ಓರ್ವ ಪಕ್ಷೇತರ ಮತ ಪಡೆದಿದ್ದಾರೆ. ಈ ಮೂಲಕ ಒಟ್ಟು 51 ಮತ ಪಡೆದಿದ್ದಾರೆ. ಇನ್ನು ಸಿಪಿಎಂನ ಪಿಆರ್ ಶಿವಾಜಿ 29 ಮತ ಪಡೆದರೆ, ಕಾಂಗ್ರೆಸ್‌ನ ಕೆಎಲ್ ಶಬರಿನಾಥನ್ 19 ಮತಗಳನ್ನು ಪಡೆದಿದ್ದಾರೆ.
ಅಭಿವೃದ್ಧಿ ಮಂತ್ರ ಜಪಿಸಿದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ
ತಿರುವಂತಪುರಂ ಕಾರ್ಪೇರೇಶನ್ ಕಾಂಗ್ರೆಸ್ ಹಾಗೂ ಸಿಪಿಎಂ ಕೈಯಲ್ಲಿ ಸಿಲುಕಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಳೆದ 45 ವರ್ಷಗಳಿಂದ ಇಲ್ಲಿ ಸಿಪಿಎಂ ಆಡಳಿತ ಮಾಡುತ್ತಿದೆ. ಜನರು ಇದೀಗ ಬದಲಾವಣೆ ಬಯಸಿ ಬಿಜೆಪಿಗೆ ಮತ ನೀಡಿದ್ದಾರೆ. ತಿರುವಂತಪುರಂನ ಪ್ರತಿ ವಾರ್ಡ್ ಕೂಡ ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ನೀರು, ಒಳಚರಂಡಿ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನೇ ಕಳೆದ 45 ವರ್ಷ ಸಿಪಿಎಂ ಮರೆತಿದೆ. ಇವೆಲ್ಲವನ್ನೂ ಸರಿಪಡಿಸಿ ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದೇವೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕೇರಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅದಿಕಾರದ ಗದ್ದುಗೆ ಏರಿದೆ. ಕೇರಳ ಬಿಜೆಪಿ ತಿರುವಂತಪುರಂ ಕಾರ್ಪೋರೇಶನ್ ಮೂಲಕ ಕೇರಳ ವಿಧಾನಸಭೆಯಲ್ಲೂ ಇದೇ ರೀತಿಯ ಮಹತ್ತರ ಬದಲಾವಣೆಯನ್ನು ತರಲಿದೆ ಎಂಬ ಆತ್ಮವಿಶ್ವಾಸದಲ್ಲಿದೆ. ಈ ಕುರಿತು ರಾಜೀವ್ ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2014ರಲ್ಲೂ ಬಿಜೆಪಿ 100 ರಿಂದ 150 ಸ್ಥಾನ ಪಡೆಯಲಿದೆ ಎಂದು ಲೆಕ್ಕಾಚಾರಗಳು, ಸಮೀಕ್ಷೆಗಳು ಹೇಳಿತ್ತು. ಮೈತ್ರಿ ಸರ್ಕಾರ ರಚನೆಯಾಗಲಿದೆ ಅನ್ನೋ ಲೆಕ್ಕಾಚಾರವಿತ್ತು. ಆದರೆ ಬಿಜೆಪಿ ಭರ್ಜರಿ ಬಹುಮತ ಮೂಲಕ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದರು. ಜನರು ಬದಲಾವಣೆ ಬಯಸಿದರೆ ಕಣ್ಣುಚ್ಚಿ ತೆರೆಯುವುದರೊಳಗೆ ಆಗಲಿದೆ. ಜನರು ಬಯಸಿದರೆ ಇದಕ್ಕೆ ಹೆಚ್ಚಿನ ಸಮಯ ಬೇಕಿಲ್ಲ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.


