Indian railways: ರೈಲಿನ ಪ್ರಯಾಣಿಕನೋರ್ವ ತಿನಿಸು ಪಡೆದು ಹಣ ನೀಡದೇ ಹೋದರಿಂದ ಯುವ ವ್ಯಾಪಾರಿಯೊಬ್ಬ ಹಣಕ್ಕಾಗಿ ಜೀವದ ಹಂಗು ತೊರೆದು ರೈಲಿನ ಹಿಂದೆ ಓಡಿದ ಘಟನೆ ನಡೆದಿದೆ. ಘಟನೆಯ ವೀಡಿಯೋ ವೈರಲ್ ಆಗಿದ್ದು, ಆಹಾರ ಪಡೆದು ಹಣ ನೀಡದ ಪ್ರಯಾಣಿಕರ ವಿರುದ್ಧ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಿನಿಸು ಪಡೆದು ಹಣ ನೀಡದ ರೈಲ್ವೆ ಪ್ರಯಾಣಿಕ
ರೈಲ್ವೆಯಲ್ಲಿ ತಿನಿಸನ್ನು ಮಾರಾಟ ಮಾಡುವ ವ್ಯಾಪಾರಿಯೊಬ್ಬ, ರೈಲು ಪ್ರಯಾಣಿಕ ಆಹಾರ ಪಡೆದು ದುಡ್ಡು ನೀಡದ ಹಿನ್ನೆಲೆ ಚಲಿಸುವ ರೈಲನ್ನು ಹಿಡಿದು ಹಣ ನೀಡುವಂತೆ ಓಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ತಿನಿಸು ನೀಡಿ ಹಣ ನೀಡದ ಪ್ರಯಾಣಿಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಳೆ ಪ್ರಾಯದ ಹುಡುಗ(ತಿನಿಸು ಮಾರಾಟಗಾರ) ಹಣ ನೀಡುವಂತೆ ಕೇಳುತ್ತಾ ಚಲಿಸುತ್ತಿರುವ ರೈಲಿನ ಕಬ್ಬಿಣ ಹ್ಯಾಂಡಲರ್ ಹಿಡಿದು ಹಣಕ್ಕಾಗಿ ಓಡುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಆತ ಹಣ ನೀಡುವಂತೆ ಬೇಡಿಕೊಂಡರು ಪ್ರಯಾಣಿಕ ಮಾತ್ರ ಹಣ ನೀಡದೇ ಹೋಗಿದ್ದರಿಂದ ಆತ ಕೆಲ ದೂರದವರೆಗೆ ರೈಲನ್ನು ಹಿಂಬಾಲಿಸಿದ್ದಾನೆ.
ಹಣಕ್ಕಾಗಿ ಚಲಿಸುವ ರೈಲನ್ನು ಹಿಂಬಾಲಿಸಿದ ಯುವಕ
ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ರೈಲಿನಲ್ಲಿದ್ದ ಬೇರೆ ಪ್ರಯಾಣಿಕರು ಯಾರೋ ಈ ದೃಶ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. @Deb_livnletliv ಎಂಬ ಟ್ವಿಟ್ಟರ್ ಖಾತೆಯಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಅವರು ಹೀಗೆ ಬರೆದುಕೊಂಡಿದ್ದಾರೆ. ಕೆಲವರಿಗೆ ಅದು ಕೆಲವು ರೂಪಾಯಿಗಳಾಗಿರಬಹುದು ಅವನಿಗೆ, ಅದು ಅವನ ಕುಟುಂಬದ ಉಳಿವಿಗಾಗಿ ಮಾಡುವ ದುಡಿಮೆ, ಒಬ್ಬ ಯುವ ಮಾರಾಟಗಾರ ಚಲಿಸುವ ರೈಲಿನ ಪಕ್ಕದಲ್ಲಿ ಓಡುತ್ತಿರುವುದನ್ನು ಕಾಣಬಹುದು, ಅವನು ತಾನು ಮಾರಿದ್ದ ವಸ್ತುವಿಗೆ ಹಣಕ್ಕಾಗಿ ಅಳುತ್ತಾ ಬೇಡಿಕೊಳ್ಳುತ್ತಾನೆ, ಆದರೆ ಒಳಗಿನ ಪ್ರಯಾಣಿಕನು ಹಣ ನೀಡಲು ನಿರಾಕರಿಸಿ ನಗುತ್ತಾನೆ. ಇದು ತಮಾಷೆಯಲ್ಲ, ಆದರೆ ಅಪರಾಧ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ವೀಡಿಯೋ ವೈರಲ್ ಜನರ ಮನಸ್ಥಿತಿಗೆ ಆಕ್ರೋಶ
ವೈರಲ್ ಆದ ವೀಡಿಯೋದಲ್ಲಿ ಹಲವು ಬಾರಿ ಆತ ಹೊರಗಿನಿಂದ ನಿಂತು ಹಣ ಕೇಳಿದರು ಒಳಗಿದ್ದ ಗ್ರಾಹಕ ಹಣ ನೀಡಿಲ್ಲ, ರೈಲು ಕೂಡಲೇ ಹೊರಡಲು ಶುರುವಾಗಿದ್ದು, ಕೆಲವು ಮೀಟರ್‌ಗಳವರೆಗೆ ಆತ ಹಣವನ್ನು ಕೇಳುತ್ತಾ ರೈಲಿನ ಕಬ್ಬಿಣದ ಹ್ಯಾಂಡಲರ್ ಹಿಡಿದು ಓಡಿದ್ದಾನೆ. ಆದರೆ ಪ್ರಯಾಣಿಕ ಹಣ ಕೊಡದೇ ಹೋದಾಗ ಆತ ನಿರಾಶನಾಗಿ ಸುಮ್ಮನಾಗಿದ್ದಾನೆ. ಈ ಘಟನೆ ಸಣ್ಣ ಸಣ್ಣ ವ್ಯಾಪಾರಿಗಳು ದಿನವೂ ಅನುಭವಿಸುತ್ತಿರುವ ಕಷ್ಟಗಳ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದೆ.. ವೀಡಿಯೋ ನೋಡಿದ ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು ಇಂಥಾ ಪ್ರಯಾಣಿಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾನವೀಯತೆ ಸತ್ತು ಹೋಗಿದೆ ಎಂದ ನೆಟ್ಟಿಗರು
ಮಾನವೀಯತೆ ಸತ್ತುಹೋಗಿದೆ. ಒಬ್ಬ ಮಾರಾಟಗಾರನಿಂದ ವಸ್ತುಗಳನ್ನು ತೆಗೆದುಕೊಂಡ ನಂತರ ಕೆಲವು ರೂಪಾಯಿಗಳಿಗೆ ಮಾರಾಟಗಾರ ರೈಲಿನೊಂದಿಗೆ ಓಡುವಂತೆ ಮಾಡುವುದನ್ನು ಕಲ್ಪಿಸಿಕೊಳ್ಳಿ ಎಂದು ಬರೆದಿದ್ದಾರೆ. ಈ ಜಗತ್ತು ಅನೇಕ ಜನರಿಗೆ ಏಕೆ ಇಷ್ಟೊಂದು ಕ್ರೂರವಾಗಿದೆ, 10 ರೂಪಾಯಿ ಗಳಿಸುವುದು ತುಂಬಾ ಕಷ್ಟ, ಅವನ ಬಗ್ಗೆ ನನಗೆ ನಿಜವಾಗಿಯೂ ವಿಷಾದವಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೂರನೆಯವರು, ಇದು ಪ್ರಯಾಣಿಕನಿಗೆ ಸ್ವಲ್ಪ ಹಣ ಆದರೆ ಅವನಿಗೆ ಇದು ಒಂದು ದಿನದ ಊಟ ಎಂದು ಪ್ರತಿಕ್ರಿಯಿಸಿದ್ದಾರೆ.
ಕೆಲ ದಿನಗಳ ಹಿಂದೆ ಓರ್ವ ರೈಲ್ವೆ ವ್ಯಾಪಾರಿಯೇ ರೈಲು ನಿಲ್ದಾಣದಲ್ಲಿ ಗ್ರಾಹಕನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಗೂಗಲ್ ಪೇ ಕೆಲಸ ಮಾಡದ ಹಿನ್ನೆಲೆ ಆತ ಸಮೋಸಾವನ್ನು ಖರೀದಿಸದೇ ಹೊರಟಿದ್ದ ಈ ವೇಳೆ ಆತನ ಶರ್ಟ್ ಕಾಲರ್‌ನಲ್ಲಿ ಹಿಡಿದ ವ್ಯಾಪಾರಿ ಹಣ ನೀಡುವಂತೆ ಆಗ್ರಹಿಸಿದ್ದ, ಈ ವೇಳೆ ಆತ ಹಣವಿಲ್ಲದೇ ತನ್ನ ಸ್ಮಾರ್ಟ್ ವಾಚನ್ನು 2 ಸಮೋಸಾಗಾಗಿ ಬಿಚ್ಚಿ ಕೊಟ್ಟು ಹೋಗಿದ್ದ. ಈ ಘಟನೆಯ ವೀಡಿಯೋವೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ವೀಡಿಯೋ ನೋಡಿದ ಅನೇಕರು ಹೀಗೆ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದಕ್ಕೆ ವ್ಯಾಪಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಹಿಜಾಬ್ ಧರಿಸದೇ ವರ್ಕೌಟ್: ಇರಾನ್ ಟೆಕ್ವಾಂಡೋ ಕೋಚ್ ಬಂಧನ
ಇದನ್ನೂ ಓದಿ: ಎಐ ಪಾರ್ಟನರ್‌ಗಾಗಿ 3 ವರ್ಷದ ಎಂಗೇಜ್‌ಮೆಂಟ್ ಮುರಿದ ಯುವತಿ
