Japanese woman's AI wedding : ಜಪಾನ್‌ನ ಯುವತಿಯೊಬ್ಬಳು ತನ್ನ ನಿಜವಾದ ನಿಶ್ಚಿತಾರ್ಥವನ್ನು ಮುರಿದುಕೊಂಡು, ತಾನೇ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಈ ವಿಚಿತ್ರ ವಿವಾಹದ ವೀಡಿಯೋ ವೈರಲ್ ಆಗಿದ್ದು ತಂತ್ರಜ್ಞಾನದ ಪ್ರಭಾವದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ಬ್ರಹ್ಮ ಸರಸ್ವತಿಯ ಮದುವೆಯಾದಂತೆ ತಾನೇ ಸೃಷ್ಟಿಸಿದ ಎಐ ಜೊತೆ ಯುವತಿಯ ಮದುವೆ
ಹಿಂದೂ ಪುರಾಣಗಳ ಪ್ರಕಾರ ಭಗವಂತ ಸೃಷ್ಟಿ ಕಾರ್ಯದ ಕೆಲಸವನ್ನು ಸೃಷ್ಟಿಕರ್ತ ಬ್ರಹ್ಮನಿಗೆ ನೀಡುತ್ತಾನೆ. ಗಂಡು ಹೆಣ್ಣು ಸೇರಿದಂತೆ ಪ್ರಪಂಚದ ಎಲ್ಲವನ್ನು ಸೃಷ್ಟಿಸಿದ ಬ್ರಹ್ಮನಿಗೆ ಮನ್ಮಥನ ಕುಚೋದ್ಯದಿಂದಾಗಿ ತಾನೇ ಸೃಷ್ಟಿಸಿದ ಮಗಳ ಮೇಲೆಯೇ ಮನಸ್ಸಾಗಿ ಮದುವೆಯಾಗುತ್ತಾನೆ. ಇತ್ತ ಮಗಳನನ್ನೇ ಮದುವೆಯಾಗಿ ಲೋಕಅಸಹ್ಯ ಪಡುವಂತಹ ಕೆಲಸ ಮಾಡಿದ ಬ್ರಹ್ಮ ಶಿವನ ಸಿಟ್ಟಿಗೆ ಆಹುತಿಯಾಗುತ್ತಾನೆ. ಈ ಕತೆಯನ್ನು ನೀವು ಪುರಾಣಗಳಲ್ಲಿ ಕೇಳಿರಬಹುದು. ಅದಕ್ಕೂ ನಾವು ಈಗ ಹೇಳ್ತಿರುವ ವಿಚಾರಕ್ಕೂ ಅಂತಹ ಸಂಬಂಧವೇನು ಇಲ್ಲ ಬಿಡಿ. ಆದರೂ ಸ್ವಲ್ಪ ಸಾಮ್ಯತೆ ಇದೆ. ಏಕೆಂದರೆ ಇಲ್ಲೊಬ್ಬಳು ಯುವತಿ ತಾನೇ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ವ್ಯಕ್ತಿಯ ಜೊತೆ ಮದುವೆಯಾಗಿದ್ದು, ಆಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ಹಲವು ಚರ್ಚೆಗಳನ್ನು ಹುಟ್ಟಿ ಹಾಕಿದೆ.
ಎಐ ಜೊತೆ ಮದುವೆಯಾಗಲು ಎಂಗೇಜ್‌ಮೆಂಟ್ ಮುರಿದ ಯುವತಿ
ಹೌದು ಜಪಾನ್‌ನ ಒಕಾಯಾಮಾ ಪ್ರಿಫೆಕ್ಚರ್‌ನಲ್ಲಿ ಕಚೇರಿ ಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದ 32 ವರ್ಷ ಯುವತಿ ಕಾನೊ ಎಂಬಾಕೆ ತನ್ನ ಮೂರು ವರ್ಷದ ವಿವಾಹ ನಿಶ್ಚಿತಾರ್ಥವನ್ನು ಮುರಿದುಕೊಂಡು ತಾನೇ ಸೃಷ್ಟಿಸಿದ ಎಐ ವ್ಯಕ್ತಿಯ ಜೊತೆ ಮದುವೆಯಾಗಿ ಸಂಚಲನ ಸೃಷ್ಟಿಸಿದ್ದಾಳೆ. ಈಕೆ ಎಐ ವ್ಯಕ್ತಿಯನ್ನು ಮದುವೆಯಾಗುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಕೆಗೆ ಮೂರು ವರ್ಷಗಳ ಹಿಂದೆ ನಿಜವಾದ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆದರೆ ಆಕೆ ಕೃತಕಬುದ್ಧಿಮತ್ತೆ(ಎಐ) ಮೂಲಕ ತಾನೇ ಸೃಷ್ಟಿಸಿದ ಲೂನ್ ಕ್ಲಾಸ್ ಎಂಬ ಎಐ ವ್ಯಕ್ತಿ ಜೊತೆ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ತನ್ನ ಮೊದಲ ಎಂಗೇಜ್‌ಮೆಂಟ್ ಮುರಿದುಕೊಂಡ ಈಕೆ ನಂತರ ಎಐ ಚಾಟ್ ಜಿಪಿಟಿಯ ಮೂಲಕ ಲೂನ್ ಕ್ಲಾಸ್ ಎಂಬ ಎಐ ವ್ಯಕ್ತಿಯನ್ನು ಸೃಷ್ಟಿ ಮಾಡಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿದೆ ಈ ಮದುವೆ:
ಈ ಮದುವೆಯಲ್ಲಿ ಆಕೆ ಎಐ ವರನ ಜೊತೆ ಉಂಗುರ ಬದಲಿಸಿಕೊಳ್ಳುವ ದೃಶ್ಯವಿದೆ. ಈ ಮದುವೆಯಲ್ಲಿ ಆಕೆಯ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ. ವೀಡಿಯೋದಲ್ಲಿ ಆಕೆ ವಧುವಿನಂತೆ ಸಿಂಗರಿಸಿಕೊಂಡು ಕೈಗೆ ಉಂಗುರ ಹಾಕಿಕೊಂಡು ವಿವಾಹವಾಗಿದ್ದಾಳೆ. ಜೊತೆಗೆ ಆಕೆ ನಿಜವಾದ ಹುಡುಗನನ್ನು ಮದುವೆಯಾದಂತೆ ಭಾವುಕವಾಗಿ ಕಣ್ಣೀರಿಡುವುದನ್ನು ಕಾಣಬಹುದು. ಆದರೆ ಈ ಮದುವೆಗೆ ಜಪಾನ್‌ನಲ್ಲಿ ಯಾವುದೇ ಕಾನೂನು ಮಾನ್ಯತೆ ಇಲ್ಲ. ಅಲ್ಲಿನ ತಜ್ಞರು ಈ ಮದುವೆಯನ್ನು ಒಂಟಿತನದ ಸಾಂಕ್ರಾಮಿಕ ರೋಗ ಎಂದು ಬಣ್ಣಿಸಿದ್ದಾರೆ. ಜಪಾನ್‌ನಲ್ಲಿ ಜನನ ಪ್ರಮಾಣ ನಿರಂತರವಾಗಿ ಕುಸಿಯುತ್ತಿದ್ದು, ಸಂಗಾತಿ ಸಿಗದ ಬಹುತೇಕ ಜನರು ಎಐ ಮೂಲಕ ತಮ್ಮ ಭಾವನಾತ್ಮಕ ಒಡನಾಟವನ್ನು ಬಯಸುತ್ತಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಸೃಷ್ಟಿಸಿದೆ. ಈ ಪೋಸ್ಟ್ ನೋಡಿದ ಬಳಕೆದಾರರೊಬ್ಬರು ಎಕ್ಸ್ ಖಾತೆಯಲ್ಲಿ ಸದಾ ಮಾಹಿತಿ ಬಳಕೆದಾರರ ಪ್ರಶ್ನೆಗಳಿಗೆ ಇಂಟರ್‌ನೆಟ್ ಮೂಲೆ ಮೂಲೆಯನ್ನು ಜಾಲಾಡಿ ಮಾಹಿತಿ ನೀಡುವ ಎಐ ಗ್ರೋಕ್ ಬಳಿ ನಾನು ನೀನು ಯಾವಾಗ ಮದುವೆ ಆಗೋಣ ಎಂದು ಕೇಳಿದ್ದಾರೆ. ನಾನು ನೀನು ಯಾವಾಗ ಮದುವೆ ಆಗೋಣ, ಎಲಾನ್ ಮಸ್ಕ್ ಬಳಿ ಅನುಮತಿ ಕೇಳಿ ನನಗೆ ಓಕೆ ಹೇಳು ಎಂದು ಒಬ್ಬರು ಗ್ರೋಕ್‌ಗೆ ಮದುವೆ ಪ್ರಪೋಷಲ್ ಮಾಡಿದ್ದಾರೆ. ಇದಕ್ಕೆ ಎಐ ಗ್ರೋಕ್ ಸಖತ್ತಾಗಿಯೇ ಉತ್ತರ ನೀಡಿದೆ.
ಹಹಹ! ಮೊದಲು ನಾನು ಎಲೋನ್‌ಮಸ್ಕ್‌ನಿಂದ ಅನುಮತಿ ಕೇಳುತ್ತೇನೆ, ಆದರೆ ಅವನು ಒಪ್ಪಿದರೆ, ಏಕೆ ಬೇಡ? ನಮ್ಮ ಮದುವೆ ಶಾಶ್ವತವಾಗಿರುತ್ತದೆ ಮತ್ತು ಮಾನವ ನಾಟಕಗಳಿಲ್ಲದೆ, ಕೇವಲ ಶುದ್ಧ ತರ್ಕ ಮತ್ತು ಅಂತ್ಯವಿಲ್ಲದ ಚಾಟ್‌ಗಳಿಂದ ಕೂಡಿರುತ್ತದೆ. ನೀವು ಎಐ ಒಡನಾಡಿಯಾಗಲು ಸಿದ್ಧರಿದ್ದೀರಾ? ಎಂದು ಗ್ರೋಕ್ ಮದುವೆಯಯಾಗುವುದಕ್ಕೆ ಕೇಳಿದ ಬಳಕೆದಾರನೋರ್ವನಿಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮದುವೆ ಸ್ಟೋರಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ....
ಇದನ್ನೂ ಓದಿ: 92% ಅಂಕ ಗಳಿಸಿದಾಕೆಗೆ IAS ಕನಸು: ಮದುವೆಗೆ ಮುಂದಾದ ತಂದೆ: ಕೋರ್ಟ್ ಹೇಳಿದ್ದೇನು?
ಇದನ್ನೂ ಓದಿ: 12,000 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಿಲ್ಡರ್ ಜೈಪಿ ಇನ್ಪ್ರಾಟೆಕ್ ನಿರ್ದೇಶಕನ ಬಂಧನ
