ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪುತ್ರ ರೆಹಾನ್ ವಾದ್ರಾ, ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಜಸ್ಥಾನದ ರಣಥಂಬೋರ್‌ನಲ್ಲಿ ನಡೆದಿದೆ ಎನ್ನಲಾದ ಈ ಸಮಾರಂಭದ ಮೂಲಕ, ಏಳು ವರ್ಷಗಳ ಸಂಬಂಧಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

ನವದೆಹಲಿ (ಜ.2): ವಯನಾಡ್ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೆಹಾನ್ ವಾದ್ರಾ ಅವರು ತಮ್ಮ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದಂಪತಿಗಳು ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ, ಡಿಸೆಂಬರ್ 29, 2025 ರಂದು ತಮ್ಮ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಿಸಿದರು. ಇದರ ನಡುವೆ ಉದ್ಯಮಿ ರಾಬರ್ಟ್ ವಾದ್ರಾ ತಮ್ಮ ಮಗ ರೆಹಾನ್ ನಿಶ್ಚಿತಾರ್ಥದ ಫೋಟೋವನ್ನು ಪೋಸ್ಟ್ ಮಾಡಿ ಬರೆದುಕೊಂಡಿದ್ದು, 'ನನ್ನ ಮಗ ಬೆಳೆದು ದೊಡ್ಡವನಾಗಿದ್ದಾನೆ, ಜೀವನ ಸಂಗಾತಿ ಸಿಕ್ಕಿದ್ದಾಳೆ. ರೆಹಾನ್ ಯಾವಾಗಲೂ ಸಂತೋಷವಾಗಿರಲಿ' ಎಂದಿದ್ದಾರೆ.

ಡಿಸೆಂಬರ್ 30 ರಂದು, ಸುದ್ದಿ ಸಂಸ್ಥೆ ಪಿಟಿಐ ಈ ಸುದ್ದಿಯನ್ನು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತು. ನಂತರ ದಂಪತಿಗಳು ತಮ್ಮ ಕುಟುಂಬಗಳೊಂದಿಗೆ ರಾಜಸ್ಥಾನದ ರಣಥಂಬೋರ್‌ಗೆ ಪ್ರಯಾಣ ಬೆಳೆಸಿದ್ದರು. ರೆಹಾನ್ ಮತ್ತು ಅವಿವಾ ಏಳು ವರ್ಷಗಳಿಂದ ಸಂಬಂಧದಲ್ಲಿದ್ದು, ಇಬ್ಬರಿಗೂ ಕೂಡ ಫೋಟೋಗ್ರಫಿಯಲ್ಲಿ ಹೆಚ್ಚಿನ ಆಸಕ್ತಿ ಇದೆ.

ಅವಿವಾ ಮಾಧ್ಯಮ ಮತ್ತು ಸಂವಹನ ವಲಯದಲ್ಲಿ ಕೆಲಸ ಮಾಡಿದ್ದಾರೆ. ಅವರು ಕಂಟೆಂಟ್‌ ಫ್ಲಾಟ್‌ಫಾರ್ಮ್‌ ಪ್ರೊಪಗಂಡದಲ್ಲಿ ಜೂನಿಯರ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಮತ್ತು ಡಿಜಿಟಲ್ ಕಂಟೆಂಟ್‌ ವೇದಿಕೆ ಆರ್ಟ್ ಚೈನ್ ಇಂಡಿಯಾದಲ್ಲಿ ಮಾರ್ಕೆಟಿಂಗ್ ಇಂಟರ್ನ್ ಆಗಿ ಸೇವೆ ಸಲ್ಲಿಸಿದ್ದಾರೆ.

ಅವಿವಾ ಅವರು ಐ-ಪಾರ್ಲಿಮೆಂಟ್‌ನಲ್ಲಿ ಪ್ರಕಟವಾದ ದಿ ಜರ್ನಲ್‌ನ ಪ್ರಧಾನ ಸಂಪಾದಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ವರ್ವ್ ಮ್ಯಾಗಜೀನ್ ಇಂಡಿಯಾ ಮತ್ತು ಕ್ರಿಯೇಟಿವ್ ಇಮೇಜ್ ಮ್ಯಾಗಜೀನ್‌ಗಳಲ್ಲಿಯೂ ಇಂಟರ್ನ್‌ಶಿಪ್ ಮಾಡಿದ್ದಾರೆ. ಅವರು ಭಾರತದಾದ್ಯಂತ ಏಜೆನ್ಸಿಗಳು, ಬ್ರ್ಯಾಂಡ್‌ಗಳು ಮತ್ತು ಕ್ಲೈಂಟ್‌ಗಳೊಂದಿಗೆ ಕೆಲಸ ಮಾಡುವ ಛಾಯಾಗ್ರಹಣ ಸ್ಟುಡಿಯೋ ಮತ್ತು ನಿರ್ಮಾಣ ಕಂಪನಿಯಾದ ಅಟೆಲಿಯರ್ 11 ರ ಸಹ-ಸಂಸ್ಥಾಪಕಿ.

ಅವಿವಾ ಇಂಡಿಯಾ ಆರ್ಟ್ ಫೇರ್‌ನ ಯಂಗ್ ಕಲೆಕ್ಟರ್ಸ್ ಪ್ರೋಗ್ರಾಂನ ಭಾಗವಾಗಿ 'ಯು ಕ್ಯಾನ್ಟ್ ಮಿಸ್ ದಿಸ್' (2023), ದಿ ಕೋರಮ್ ಕ್ಲಬ್ 'ದಿ ಇಲ್ಯೂಸರಿ ವರ್ಲ್ಡ್' (2019) ಮತ್ತು ಇಂಡಿಯಾ ಡಿಸೈನ್ ಐಡಿ, ಕೆ2 ಇಂಡಿಯಾ (2018) ನಂತಹ ಪ್ರದರ್ಶನಗಳನ್ನು ಆಯೋಜಿಸಿದೆ.

ಅವಿವಾ ಕುಟುಂಬದ ಬಗ್ಗೆ

ಅವಿವಾ ದೆಹಲಿಯ ಪ್ರಮುಖ ಉದ್ಯಮಿ ಕುಟುಂಬದಿಂದ ಬಂದವರು. ಅವರ ತಂದೆ ಇಮ್ರಾನ್ ಬೇಗ್ ಒಬ್ಬ ಉದ್ಯಮಿ. ಅವರ ತಾಯಿ ನಂದಿತಾ ಬೇಗ್ ಪ್ರಸಿದ್ಧ ಒಳಾಂಗಣ ವಿನ್ಯಾಸಕಿ. ಅವರು ಕಾಂಗ್ರೆಸ್ ಪ್ರಧಾನ ಕಚೇರಿಯಾದ ಇಂದಿರಾ ಭವನದ ಒಳಾಂಗಣವನ್ನು ವಿನ್ಯಾಸಗೊಳಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ನಂದಿತಾ ಬೇಗ್ ಹಳೆಯ ಸ್ನೇಹಿತರು.

View post on Instagram

ರಣಥಂಬೋರ್‌ನಲ್ಲಿ ನಿಶ್ಚಿತಾರ್ಥ

ಗಾಂಧಿ-ವಾದ್ರಾ ಕುಟುಂಬ ಮಂಗಳವಾರ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ರಣಥಂಬೋರ್‌ಗೆ ಆಗಮಿಸಿತು. ರೆಹಾನ್ ವಾದ್ರಾ ಮತ್ತು ಅವಿವಾ ಹುಲಿ ಸಫಾರಿ ಮತ್ತು ದೃಶ್ಯವೀಕ್ಷಣಾ ಪ್ರವಾಸಗಳಿಗೆ ತೆರಳಿದರು. ಇಬ್ಬರೂ ಕ್ಯಾಪ್ ಧರಿಸಿ ಕಾಣಿಸಿಕೊಂಡರು. ಕುಟುಂಬವು ನಾಲ್ಕು ದಿನಗಳ ಕಾಲ ರಣಥಂಬೋರ್‌ನಲ್ಲಿ ತಂಗಿತ್ತು. ಅಲ್ಲಿಯೇ ಇವರ ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿದೆ.

ರೆಹಾನ್ ರಾಹುಲ್ ಗಾಂಧಿಯವರ "ಭಾರತ್ ಜೋಡೋ" ಯಾತ್ರೆಯಲ್ಲಿಯೂ ಭಾಗವಹಿಸಿದರು. ಮೂರು ದಿನಗಳ ಅವಧಿಯಲ್ಲಿ, ರೆಹಾನ್ ತನ್ನ ಚಿಕ್ಕಪ್ಪನೊಂದಿಗೆ ಸುಮಾರು 70,000 ಹೆಜ್ಜೆಗಳನ್ನು ನಡೆದರು. ರೆಹಾನ್ ವನ್ಯಜೀವಿ ಛಾಯಾಗ್ರಹಣದ ಬಗ್ಗೆ ಉತ್ಸುಕ ವ್ಯಕ್ತಿ. ಓಪನ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ, ರೆಹಾನ್ ಎಂಟು ವರ್ಷದವನಿದ್ದಾಗ ಫೋಟೋಗ್ರಫಿ ಮೇಲೆ ಉತ್ಸಾಹ ಹುಟ್ಟಿತ್ತು ಎಂದಿದ್ದಾರೆ.